ಕಲಬುರ್ಗಿ: ಕಳೆದೆರಡು ದಿನಗಳಿಂದ ಸೂರ್ಯರಶ್ಮಿಗಳ ಆರ್ಭಟಕ್ಕೆ ತತ್ತರಿಸಿದ್ದ ಹೈದರಾಬಾದ್ ಕರ್ನಾಟಕ ಭಾಗದ ಜನ, ಸೋಮವಾರ ಸಂಜೆಯ ವೇಳೆಗೆ ತುಸು ನೆಮ್ಮದಿ ಅನುಭವಿಸಿದರು. ಅಲ್ಲದೇ, ಈ ಆರೂ ಜಿಲ್ಲೆಗಳಲ್ಲಿ ಅಲ್ಲಲ್ಲಿ ತಡರಾತ್ರಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಲಬುರ್ಗಿ, ಬೀದರ್, ರಾಯಚೂರು, ಯಾದಗಿರಿ, ಬಳ್ಳಾರಿ ಹಾಗೂ ಕೊಪ್ಪಳ ನಗರದಲ್ಲಿ ಶನಿವಾರ ಹಾಗೂ ಭಾನುವಾರ ಸರಾಸರಿ 44 ಡಿಗ್ರಿ ಸೆಲ್ಸಿಯಸ್‌ನಿಂದ ಏರುಗತಿಯಲ್ಲೇ ಇತ್ತು. ಸೋಮವಾರ ಬೆಳಿಗ್ಗೆ 8ರಿಂದಲೇ ಬಿಸಿಗಾಳಿ ಅನುಭವ ಉಂಟಾಯಿತು. ಬೆಳಿಗ್ಗೆ 10.33ಕ್ಕೆ 42 ಡಿಗ್ರಿ ತಾಪಮಾನ ದಾಖಲಾಯಿತು. ಮಧ್ಯಾಹ್ನ 2ರ ಹೊತ್ತಿಗೆ ಮತ್ತೆ 44.3 ಡಿಗ್ರಿ ಸೆಲ್ಸಿಯಸ್‌ಗೆ ಬಂದು ನಿಂತಿತು. ಬಿಸಿಗಾಳಿಯ ವೇಗ ಕೂಡ ಗಂಟೆಗೆ 20 ಕಿ.ಮೀ. ಇತ್ತು.
ಸಂಜೆ 4 ಗಂಟೆಯ ವೇಳೆಗೆ ಇದ್ದಕ್ಕಿದ್ದಂತೆ ಮೋಡ ಕವಿದ ವಾತಾವರಣ ನಿರ್ಮಾಣವಾಯಿತು. ನಿಗಿನಿಗಿ ಬೆಂಕಿ ಕಾರುತ್ತಿದ್ದ ಸೂರ್ಯ ಮೋಡಗಳ ಮರೆಯಲ್ಲಿ ಕಣ್ಮರೆಯಾದ.ಸಂಜೆ 5ರ ಹೊತ್ತಿಗೆ ಗಾಳಿಯಲ್ಲಿನ ಬಿಸಿ ತುಸು ಕಡಿಮೆಯಾಗಿ, ಹಾಯೆನಿಸುವ ವಾತಾವರಣ ಅನುಭವಕ್ಕೆ ಬಂತು.ಜನ ಉಸ್ಸಪ್ಪ ಎಂದು ನಿಟ್ಟುಸಿರು ಬಿಟ್ಟರು.
‘ಬಂಗಾಳ ಕೊಲ್ಲಿಯಲ್ಲಿ ಉಂಟಾದ ಚಂಡಮಾರುತ ರಾಜ್ಯದ ವಾತಾವರಣದ ಮೇಲೆ ಪರೋಕ್ಷಾವಾಗಿ ಪರಿಣಾಮ ಬೀರುತ್ತದೆ ಹೊರತು; ನೇರವಾಗಿ ಯಾವುದೇ ಬದಲಾವಣೆಗೆ ಕಾರಣವಾಗುವುದಿಲ್ಲ. ಹೈದರಾಬಾದ್ ಕರ್ನಾಟಕ ಭಾಗದ ವಾಡಿಕೆ ಬಿಸಿಲಿನ ಪ್ರಮಾಣವೇ ಹೆಚ್ಚಾಗಿದೆ. ಇದರಿಂದ ಗಾಳಿಯಲ್ಲಿನ ತೇವಾಂಶ ಕಡಿಮೆಯಾಗಿದ್ದು, ಬಿಸಿ ಗಾಳಿಯ ಕಷ್ಟ ಅನುಭವಿಸಬೇಕಾಗಿದೆ. ಅಲ್ಲದೇ, ತಡರಾತ್ರಿ ಗುಡುಗು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆಗಳು ಇವೆ’ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಸುನಿಲ ಗವಾಸ್ಕರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.