ಕಲಬುರ್ಗಿ: ನಗರದೆಲ್ಲೆಡೆ ರಕ್ಷಾ ಬಂಧನ ಹಬ್ಬದ ಸಡಗರ ಗರಿಗೆದರಿದೆ. ನೂಲ ಹುಣ್ಣಿಮೆಯ ದಿನದಂದು ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟಲು ಕಾತರಿಸುತ್ತಿದ್ದಾರೆ.
ಈಗಾಗಲೇ ಮಾರುಕಟ್ಟೆಗೆ ವರ್ಣರಂಜಿತ ರಾಖಿಗಳು ಲಗ್ಗೆಯಿಟ್ಟಿವೆ.ಸಹೋದರ– ಸಹೋದರಿಯ ಬಾಂಧವ್ಯ ಸಾರಿ ಹೇಳಲು ಸಾವಿರಾರು ಮಾದರಿಯ ರಾಖಿಗಳು ಇಲ್ಲಿ ಹಾಜರಾಗಿವೆ. ಅಂಗಡಿಗಳ ಹೊರಗೆ ರಾಖಿಗಳನ್ನು ತೂಗು ಹಾಕಲಾದ ದೃಶ್ಯಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ.
₹10 ಹಿಡಿದು ₹300ವರೆಗಿ ಚಿತ್ತಾಕರ್ಷಕ ರಾಖಿಗಳು ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಸಾಂಪ್ರದಾಯಿಕ ಹಾಗೂ ಒಡವೆ ವಿನ್ಯಾಸದ ಎರಡು ವಿಧಗಳು ಪ್ರಮುಖವಾಗಿ ಕಂಡು ಬರುತ್ತಿವೆ. ಮಕ್ಕಳ ಆಕರ್ಷಣೆಗಾಗಿ ಎನಿಮೇಟೆಡ್ ಚಿತ್ರಗಳು, ಕಾರ್ಟೂನ್‌ಗಳ ಚಿತ್ತಾರವುಳ್ಳ ರಾಖಿಗಳೂ ಇವೆ. ರುದ್ರಾಕ್ಷಿ, ದೇವತೆಗಳ ಚಿತ್ರವಿರುವ, ಓಂ, ಕಮಲ ವಿನ್ಯಾಸದ,ಕಡಗ, ಬಳೆ ಮಾದರಿಯ ಹಾಗೂ ಬಣ್ಣದ ಮಣಿಗಳನ್ನು ಪೋಣಿಸಿ ಮಾಡಿದಂಥ ರಾಖಿಗಳು ಜನರ ಗಮನ ಸೆಳೆಯುತ್ತಿವೆ.
ಇಲ್ಲಿನ ಸೂಪರ್ ಮಾರ್ಕೆಟ್, ಸೇಡಂ ರಸ್ತೆ, ಜೇವರ್ಗಿ ರಸ್ತೆ, ಆಳಂದ ರಸ್ತೆ, ಪಿಡಿಎ ಎಂಜಿನಿಯರಿಂಗ್ ಕಾಲೇಜು ರಸ್ತೆ, ಬಂಬೂ ಬಜಾರ್ ರಸ್ತೆ ಹೀಗೆ ನಗರದ ವಿವಿಧೆಡೆ ವ್ಯಾಪಾರಿಗಳು ಪೆಂಡಾಲ್‌ಗಳನ್ನು ಹಾಕಿ ರಾಖಿ ಮಾರಾಟದಲ್ಲಿ ನಿರತರಾಗಿರುವ ದೃಶ್ಯಗಳು ಶನಿವಾರ ಕಂಡು ಬಂದವು.
ಸಂಭ್ರಮ ಕಸಿದ ವಾರಾಂತ್ಯ ಕರ್ಫ್ಯೂ: ಈ ಬಾರಿ ಕೋವಿಡ್ ಹಾಗೂ ವಾರಾಂತ್ಯ ಕರ್ಫ್ಯೂ ಕಾರಣ ಮಾರುಕಟ್ಟೆಯಲ್ಲಿ ರಾಖಿ ಖರೀದಿ ಭರಾಟೆ ಮಂಕಾಗಿದೆ. ಪೊಲೀಸರು ಶನಿವಾರ 2 ಗಂಟೆ ಮೇಲೆ ಮಳಿಗೆಗಳನ್ನು ಮುಚ್ಚಿಸಿದ ಕಾರಣ ವ್ಯಾಪಾರಿಗಳಲ್ಲಿ ನಿರಾಸೆ ಮೂಡಿದೆ. ಅಲ್ಲದೆ ಭಾನುವಾರ ಹಬ್ಬವಿದ್ದು, ಕರ್ಫ್ಯೂ ಕಾರಣ ಮಧ್ಯಾಹ್ನದವೆರೆಗೆ ಮಾತ್ರ ವ್ಯಾಪಾರಕ್ಕೆ ಅವಕಾಶವಿದೆ.
ಇಲ್ಲಿನ ಪಿಡಿಎ ಕಾಲೇಜಿನ ರಸ್ತೆಯಲ್ಲಿರುವ ಶುಭಂ ಸ್ಟೆಷನರಿಯ ನಿಂಗರಾಜ ಪಾಟೀಲ ಮಾತನಾಡಿ, 6 ವರ್ಷಗಳಿಂದ ರಾಖಿ ವ್ಯಾಪಾರ ಮಾಡುತ್ತಿದ್ದೇವೆ. ಕೋವಿಡ್ ಕಾರಣ ಎರಡು ವರ್ಷಗಳಿಂದ ರಾಖಿ ಖರೀದಿಗೆ ಗ್ರಾಹಕರು ಉತ್ಸಾಹ ತೋರಿಸುತ್ತಿಲ್ಲ. ಶೇ 10ರಷ್ಟು ವ್ಯಾಪಾರವೂ ನಡೆದಿಲ್ಲ. ರಾಖಿ ಖರೀದಿಯತ್ತ ಗ್ರಾಹಕರು ಚಿತ್ತ ಹರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
‘ನಮ್ಮ ವ್ಯಾಪಾರ ನಡೆಯುವುದೆ ಹಬ್ಬದ ದಿನ ಮತ್ತು ಅದರ ಹಿಂದಿನ ದಿನ. ಆ ಎರಡು ದಿನಗಳಲ್ಲಿ ವಾರಾಂತ್ಯ ಕರ್ಫೂ ಇರುವ ಕಾರಣ ಲಕ್ಷಾಂತರ ಬಂಡವಾಳ ಹೂಡಿ ರಾಖಿ ತಂದಿರುವ ನಮಗೆ ಅಪಾರ ನಷ್ಟವಾಗುತ್ತಿದೆ. ಜಿಲ್ಲಾಡಳಿತ ಇದನ್ನು ಮನಗಂಡು ವ್ಯಾಪಾರಕ್ಕೆ ಹೆಚ್ಚಿನ ಸಮಯ ನೀಡಬೇಕು’ ಎಂದು ವ್ಯಾಪಾರಿಗಳು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.