ಕಲಬುರಗಿ: ‘ರಂಗಭೂಮಿಯ ಮೂಲೆಯಲ್ಲಿ ನಿಂತು ರಂಗದ ಮೇಲಿನ ಪಾತ್ರಗಳ ಅಭಿನಯಕ್ಕೆ ಪ್ರೇಕ್ಷಕರು ಹೇಗೆ ಮುಖ ಕಿವುಚಿಕೊಳ್ಳುತ್ತಾರೆ? ಯಾವ ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ ಎಂಬುದನ್ನು ನೋಡಿ ನಾಟಕದ ಅಭಿನಯ ಕಲಿತೆ. ಶಿವಮೊಗ್ಗದ ನೀನಾಸಂನಲ್ಲಿ ಡಿಪ್ಲೊಮಾ, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪಡೆದು ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ ನನಗೆ ನಾಟಕವೇ ಎಲ್ಲವೂ...’
ಇದು ರಂಗಕರ್ಮಿ ಸಾಂಬಶಿವ ದಳವಾಯಿ ಅವರ ನುಡಿಗಳು. ಕಲಬುರಗಿ ರಂಗಾಯಣವು ಶನಿವಾರ ಆಯೋಜಿಸಿದ್ದ ‘ರಂಗದಂಗಳದಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ತಮ್ಮ ರಂಗಭೂಮಿಯಾನದ ಅನುಭವದ ಬುತ್ತಿ ಬಿಚ್ಚಿಟ್ಟರು.
‘ಕೆ.ಸುಬ್ಬಣ್ಣ ಅವರ ಸಲಹೆಯಂತೆ ನೀನಾಸಂನಲ್ಲಿ ಕಲಿಕೆ ಮುಗಿಸಿದ ಬಳಿಕ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಗೆ ಸೇರಿದೆ. ನನಗೆ ಹಿಂದಿ ಭಾಷೆ ಬರುವುದಿಲ್ಲ ಎಂದು ಮೊದಲ ನಾಟಕದಲ್ಲಿ ‘ಬಾಂಬೆ ಜಾನೆಕಾ ಮೌಕಾ ಮಿಲ್‌ಗಯಾ’ ಎಂಬ ಒಂದೇ ಸಾಲಿನ ಸಂಭಾಷಣೆ ಕೊಟ್ಟಿದ್ದರು. ಅಲ್ಲಿಂದ ಶುರುವಾದ ನಾಟಕದ ಪ್ರಯಾಣ 40 ವರ್ಷಗಳನ್ನು ಪೂರೈಸಿದೆ’ ಎಂದರು.
‘ಯುದ್ಧಭೂಮಿ ಮತ್ತು ರುದ್ರಭೂಮಿ ನಡುವಣ ತುಡಿತವೇ ರಂಗಭೂಮಿ. ಅದು ಬಣ್ಣ ಬಣ್ಣಗಳ ಓಕುಳಿಯಾಗಿದ್ದು, ನಾಟಕದ ಒಳವುಗಳನ್ನು ಪ್ರೇಕ್ಷಕರ, ವಿದ್ಯಾರ್ಥಿಗಳ ಮುಂದಿಡುತ್ತದೆ’ ಎಂದು ಹೇಳಿದರು.
‘ಪೌರಾಣಿಕ ನಾಟಕದ ಅರ್ಧ ಭಾಗವನ್ನು ಕಡಿತ ಮಾಡಿ ಸಂಭಾಷಣೆ ಹೇಳುವುದೇ ಐತಿಹಾಸಿಕ ನಾಟಕ’ ಎಂದ ಸಾಂಬಶಿವ, ‘ಆಸೆಗಳ ವಯಸ್ಸು ಜಗತ್ತನೆಲ್ಲ ಒಂದೇ ಮುಷ್ಟಿಯಲ್ಲಿ ಅಮೂಲ್ಯವಾದ ವಜ್ರದಂತೆ ಹಿಡಿಯಬಲ್ಲ ಹಿಗ್ಗುವ ವಯಸ್ಸು’ ಎಂದು ಸಂಭಾಷಣೆ ಹೇಳಿ ನೆರೆದವರನ್ನು ರಂಜಿಸಿದರು.
‘ಬೆಂಗಳೂರು ಕೈಹಿಡಿಯದೆ ಇದ್ದಾಗ ಚಿತ್ರದುರ್ಗಕ್ಕೆ ಹೋದೆ. ಮುಂದೆ ಸಾಕ್ಷರತಾ ಬೀದಿ ನಾಟಕಗಳಲ್ಲಿ ತೊಡಗಿಸಿಕೊಂಡೆ. ಸಾಕ್ಷರತೆಯ ಒಂಬತ್ತು ಜಾಥಾಗಳಲ್ಲಿ ಎಂಟು ಜಾಥಾ ನಾನೇ ಮಾಡಿದ್ದೇನೆ. ‘ಬಾ ತಂಗಿ ಬಾರವ್ವ ರೈತನ ಮಗಳೆ ಬಾರವ್ವ ಶಾಲೆ ಕಲಿಯಲು ಬಾರವ್ವ’ ಗೀತೆಯನ್ನು ನಾನೇ ರಚಿಸಿ ಹಾಡಿದ್ದೇನೆ. ನಾಡಿನಾದ್ಯಂತ ಬಹು ಪ್ರಸಿದ್ಧವಾದ ‘ಸೃಷ್ಟಿಯ ಚಲನ ಜೀವನ ಮರಣ ಜೀವ ಜೀವದ ಈ ಮಣ್ಣ ಮೂರು ದಿನ ಸಂತೆಯ ಮುಗಿಸಿ ಸೇರುವರೆಲ್ಲ ಈ ಮಣ್ಣ’ ಹಾಡು ಬರೆದಿದ್ದೂ ನಾನೇ’ ಎಂದು ಅಭಿನಯದೊಂದಿಗೆ ಹಾಡಿ ಸಭಿಕರಿಂದ ಚಪ್ಪಾಳೆಯ ಮೆಚ್ಚುಗೆ ಪಡೆದರು.
ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕಿ ಸುಜಾತಾ ಜಂಗಮಶೆಟ್ಟಿ, ಆಡಳಿತಾಧಿಕಾರಿ ಜಗದೀಶ್ವರಿ ಅ.ನಾಸಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.