ಕಲಬುರ್ಗಿ: ಸಾಹಿತ್ಯ ಸಮ್ಮೇಳನದ ಅಂಗವಾಗಿ ಹೆಣ್ಣುಮಕ್ಕಳಿಗಾಗಿ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ರಂಗೋಲಿ ಸ್ಪರ್ಧೆ ಗಮನ ಸೆಳೆಯಿತು. 50ಕ್ಕೂ ಹೆಚ್ಚು ಯುವತಿಯರು, ಗೃಹಿಣಿಯರು ಹಾಗೂ ವಿದ್ಯಾರ್ಥಿನಿಯರು ಚಿತ್ತಾಕರ್ಷಕವಾದ ರಂಗೋಲಿ ಬಿಡಿಸಿ ಗಮನ ಸೆಳೆದರು.
ವಿಶೇಷವಾಗಿ ಹೆಣ್ಣುಭ್ರೂಣ ಹತ್ಯೆ ನಿಲ್ಲಿಸಿ, ಭೇಟಿ ಬಚಾವೊ– ಭೇಟಿ ಪಢಾವೊ, ಹೆಣ್ಣು ಕೂಸುಗಳನ್ನು ರಕ್ಷಿಸಿ ಎಂಬ ಮುಂತಾದ ವಿಷಯಗಳೇ ರಂಗೋಲಿಯಲ್ಲಿ ಪ್ರತಿಫಲಿಸಿದವು. ಹಲವರು ಅತ್ಯಾಚಾರ ಕುರಿತಾದ ಆಕ್ರೋಶಕ್ಕೆ ಬಣ್ಣ ತುಂಬಿದರು. ಮತ್ತೆ ಕೆಲವರು ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಚಿತ್ರ ಬಿಡಿಸಿ, ಸಾಮಾಜಿಕ ಬದ್ಧತೆ ಮೆರೆಯಿರಿ ಎಂಬ ಸಂದೇಶವನ್ನೂ ನೀಡಿದರು.
ಬಹುಪಾಲು ರಂಗೋಲಿಗಳು ಸಮಾಜದಲ್ಲಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಅತ್ಯಾಚಾರದ ವಿರುದ್ಧ ‘ವನಿತಾ ಧ್ವನಿ’ಯಾಗಿ ಹೊರಹೊಮ್ಮಿದವು. ನಿರ್ಭಯಾ ಪ್ರಕರಣ ಕುರಿತು ಬಿಡಿಸಿದ ರಂಗೋಲಿ ತೀರ್ಪುಗಾರರ ಗಮನ ಸೆಳೆಯಿತು. ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಅದಕ್ಕೆ ವಿಶೇಷ ಬಹುಮಾನ ನೀಡಿ ಪ್ರೋತ್ಸಾಹಿಸಿದರು.
ಉಳಿದಂತೆ ಕನ್ನಡ ನಾಡು, ನುಡಿಯ ಹಿರಿಮೆ, ಐತಿಹಾಸಿಕ ಸ್ಥಳಗಳು, ಮೈಸೂರು ದಸರಾ, ಮೈಸೂರು ಸಿಲ್ಕ್ ಸೀರೆ, ಹೂಗಳು ಹಾಗೂ ಕಲ್ಯಾಣ ಕರ್ನಾಟಕ ನಕ್ಷೆ ಹೊಂದಿದ ರಂಗೋಲಿಗಳೂ ಗಮನ ಸೆಳೆದವು.
ಭಾವಗೀತೆ, ಜನಪದ: ಹೆಣ್ಣು ಮಕ್ಕಳಿಗಾಗೇ ಆಯೋಜಿಸಿದ್ದ ಭಾವಗೀತೆ ಹಾಗೂ ಜನಪದ ಗೀತೆ ಗಾಯನ ಕೂಡ ಯಶಸ್ವಿಯಾಯಿತು. 60 ಹೆಣ್ಣುಮಕ್ಕಳು ಭಾಗವಹಿಸಿದ್ದರು. ಸಾಹಿತ್ಯ ಸಮ್ಮೇಳನದ ಹಿರಿಮೆ, ನಾಡಿನ ಮಹಿಮೆ ಹಾಗೂ ಕನ್ನಡ ಶಾಲೆಗಳ ರಕ್ಷಣೆ ಕುರಿತಾದ ಹಾಡುಗಳು ಸುಂದರವಾಗಿ ಮೂಡಿಬಂದವು.
ಇದಕ್ಕೂ ಮುನ್ನ ಸಮ್ಮೇಳನದ ಕಾರ್ಯಾಧ್ಯಕ್ಷೆ ಶೈಲಜಾ ಹಾಗೂ ಮಹೇಶ ಬಡಿಗೇರಿ ಮತ್ತು ತಂಡದವರು ಹಾಡಿದ ಹಾಡುಗಳೂ ಜನಮನ ಸೆಳೆದವು.
ನಂತರ ಜಿಲ್ಲಾಧಿಕಾರಿ ಬಿ.ಷರತ್ ವಿಜೇತರಿಗೆ ಬಹುಮಾನ ವಿತರಿಸಿದರು. ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ ನಾಯಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಜಿ.ಎಸ್. ಗುಣಾರಿ, ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಪ್ಪಣ್ಣಪ್ಪ ಸಿರಸಗಿ, ಮಹಿಳಾ ಸಮಿತಿ ಸದಸ್ಯರಾದ ಡಾ.ವಿಶಾಲಾಕ್ಷಿ ರೆಡ್ಡಿ, ವಿಜಯಲಕ್ಷ್ಮಿ ಕೋಸಗಿ, ಗೌರಿ ಪಾಟೀಲ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.