ADVERTISEMENT

ದೇವಸ್ಥಾನ–ದೇವರುಗಳಷ್ಟೇ ಸದ್ಯ ತೆರಿಗೆಯಿಲ್ಲ!: ಆರ್‌.ಅಶೋಕ ವ್ಯಂಗ್ಯ

ಪೆಟ್ರೋಲ್‌–ಡೀಸೆಲ್‌ ದರ ಏರಿಕೆ: ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 15:40 IST
Last Updated 20 ಜೂನ್ 2024, 15:40 IST
ಆರ್.ಅಶೋಕ
ಆರ್.ಅಶೋಕ   

ಕಲಬುರಗಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿ ಬೆಲೆಏರಿಕೆಯ ಯುಗ. ಪೆಟ್ರೋಲ್–ಡೀಸೆಲ್‌ ಸೇರಿದಂತೆ ರಾಜ್ಯ ಕಾಂಗ್ರೆಸ್‌ ಸರ್ಕಾರ ಎಲ್ಲದರ ತೆರಿಗೆ ಹೆಚ್ಚಿಸಿದ್ದು, ಸದ್ಯ ದೇವಸ್ಥಾನ–ದೇವರುಗಳಷ್ಟೇ ಉಳಿದಿವೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ವ್ಯಂಗ್ಯವಾಡಿದರು.

ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಪೆಟ್ರೋಲ್‌–ಡೀಸೆಲ್ ದರ ಏರಿಕೆ ಖಂಡಿಸಿ ಗುರುವಾರ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಸಿದ್ದರಾಮಯ್ಯ ಒಂಥರಾ ನಿದ್ದೆರಾಮಯ್ಯ ಆಗಿದ್ದಾರೆ. ಏನು ನಡೆಯುತ್ತಿದೆ ಎಂಬುದೇ ಅವರಿಗೆ ಗೊತ್ತಾಗಲ್ಲ. ಅರಳು–ಮರಳು ಎಂಬಂಥ ಸ್ಥಿತಿಗೆ ತಲುಪಿದ್ದಾರೆ. ವಯಸ್ಸೂ ಆಗಿಬಿಟ್ಟಿದೆ. ಅಧಿಕಾರಿಗಳು ಆಡಿದ್ದೇ ಆಟ, ಹಾಡಿದ್ದೇ ಹಾಡು. ಪೆಟ್ರೋಲ್‌–ಡೀಸೆಲ್‌ ಬೆಲೆ ಏರಿಕೆ ಮಾಡಿ, ಉಚಿತ ಭಾಗ್ಯ ನೀಡಲು ನೀವ್ಯಾಕೆ ಬೇಕು? ಯಾರೋ ದಾರಿಯಲ್ಲಿ ಹೋಗುವ ದಾಸಯ್ಯ ಸಾಕು. ಆತ ನಿಮಗಿಂತ ಹೆಚ್ಚು ಚೆನ್ನಾಗಿ ಹಣಕಾಸು ಖಾತೆ ನಿರ್ವಹಿಸಬಲ್ಲ’ ಎಂದು ಟೀಕಿಸಿದರು.

ADVERTISEMENT

‘ಪೆಟ್ರೋಲ್–ಡೀಸೆಲ್‌ ದರ ಹೆಚ್ಚಳದ ಬೆನ್ನಲ್ಲೆ ಬಸ್‌ ಟಿಕೆಟ್‌ ದರ ಹೆಚ್ಚಳಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮುಂದಾಗಿದ್ದಾರೆ. ಕುಡಿಯುವ ನೀರಿನ ದರ ಹೆಚ್ಚಿಸುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ತಿರುಪತಿ ತಿಮ್ಮಪ್ಪ, ಧರ್ಮಸ್ಥಳ ಮಂಜುನಾಥ, ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಹೋಗಲೂ ತೆರಿಗೆ ಹಾಕಿ ಬಿಡಿ. ಅಲ್ಲಿಯೂ ಒಂದು ಚೆಕ್‌ಪೋಸ್ಟ್‌ ಸ್ಥಾಪಿಸಿ, ಗುಡಿಗೆ ಹೋಗಲೂ ತೆರಿಗೆ ಹಾಕಿ ಬಿಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಲೋಕಲ್‌ ವಿಸ್ಕಿ ದರ ಜಾಸ್ತಿ ಮಾಡಿ, ಫಾರೆನ್‌ ವಿಸ್ಕಿ ದರ ಕಡಿಮೆ ಮಾಡಲು ಸರ್ಕಾರ ಮುಂದಾಗಿದೆ. ಅವರೇನು ನಿಮಗೆ ದುಡ್ಡು ಕೊಟ್ಟಿದ್ದಾರಾ? ಎಷ್ಟು ಕಮಿಷನ್‌ ಕೊಟ್ಟಿದ್ದಾರೆ?’ ಎಂದು ಪ್ರಶ್ನಿಸಿದ ಅಶೋಕ, ‘ಇಡೀ ಸಚಿವ ಸಂಪುಟ, ಅಲಿಬಾಬಾ ಮತ್ತು 40 ಕಳ್ಳರು ಇದ್ದಂತೆ. ಇದು ಕಳ್ಳರ ಸರ್ಕಾರ’ ಎಂದು ಲೇವಡಿ ಮಾಡಿದರು.

‘ರಾಜ್ಯ ಸರ್ಕಾರ ಸತ್ತಿದೆಯೇ?’

‘ಕಲಬುರಗಿಯ ಜಿಮ್ಸ್ ಮತ್ತು ಜಯದೇವ ಆಸ್ಪತ್ರೆಗಳಿಗೆ ಮೂರು ದಿನ ನೀರು ನೀಡುವುದನ್ನೇ ಮರೆತ ರಾಜ್ಯ ಸರ್ಕಾರ ಸತ್ತು ಹೋಗಿದೆಯೇ’ ಎಂದು ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದರು. ನಗರದ ಜಿಮ್ಸ್ ಹಾಗೂ ಜಯದೇವ ಆಸ್ಪತ್ರೆಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಆಸ್ಪತ್ರೆಗೆ ರಾಡಿ ನೀರು ಪೂರೈಕೆಯಾಗುತ್ತಿರುವುದರಿಂದ ಇಲ್ಲಿ ನಡೆಯಬೇಕಿದ್ದ ಶಸ್ತ್ರಚಿಕಿತ್ಸೆಗಳನ್ನೇ ಮುಂದೂಡಲಾಗಿದೆ. ಜಿಲ್ಲೆಯ ಜಲಮೂಲಗಳಿಂದ ಉತ್ತಮ ನೀರು ಬರುತ್ತಿಲ್ಲ ಎಂದಾದರೆ ₹ 20 ಲಕ್ಷ ಖರ್ಚು ಮಾಡಿದ್ದರೂ ಟ್ಯಾಂಕರ್ ಮೂಲಕ ನೀರು ಪೂರೈಸಿ ಶಸ್ತ್ರಚಿಕಿತ್ಸೆಗಳು ನಡೆಯುವಂತೆ ಮಾಡಬಹುದಿತ್ತು. ಆದರೆ ಬಡ ರೋಗಿಗಳ ಬಗ್ಗೆ ಕಾಳಜಿ ಇಲ್ಲದ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ದರಿದ್ರ ಆವರಿಸಿಕೊಂಡಿದೆ’ ಎಂದು ಹರಿಹಾಯ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.