ADVERTISEMENT

ಚಿಂಚೋಳಿ | ಸರ್ವರ್ ಸಮಸ್ಯೆ: ಬಯೋಮೆಟ್ರಿಕ್ ನೀಡಲು ಪಡಿತರದಾರರ ಪರದಾಟ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 15:45 IST
Last Updated 19 ಅಕ್ಟೋಬರ್ 2024, 15:45 IST
ಚಿಂಚೋಳಿ ತಾಲ್ಲೂಕಿನ ಚಂದನಕೇರಾದಲ್ಲಿ ನ್ಯಾಯಬೆಲೆ ಅಂಗಡಿ ಮುಂದೆ ಬೆರಳಚ್ಚು ನೀಡಲು ಬಂದ ಪಡಿತರ ಚೀಟಿದಾರರು ಬೆರಳಚ್ಚು ನೀಡಲು ಸಾಧ್ಯವಾಗದೇ ಅಸಹಾಯಕರಾಗಿ ನಿಂತಿರುವುದು
ಚಿಂಚೋಳಿ ತಾಲ್ಲೂಕಿನ ಚಂದನಕೇರಾದಲ್ಲಿ ನ್ಯಾಯಬೆಲೆ ಅಂಗಡಿ ಮುಂದೆ ಬೆರಳಚ್ಚು ನೀಡಲು ಬಂದ ಪಡಿತರ ಚೀಟಿದಾರರು ಬೆರಳಚ್ಚು ನೀಡಲು ಸಾಧ್ಯವಾಗದೇ ಅಸಹಾಯಕರಾಗಿ ನಿಂತಿರುವುದು   

ಚಿಂಚೋಳಿ: ಸರ್ವರ್ ಸಮಸ್ಯೆಯಾಗಿದ್ದರಿಂದ ಪಡಿತರ ಚೀಟಿದಾರರಿಗೆ ವಿಜಯದಶಮಿಗೆ ಪಡಿತರ ಲಭಿಸಿಲ್ಲ. ಆದರೆ ಈಗ ಸರ್ವರ್ ಸಮಸ್ಯೆಯಿಂದ ದೀಪಾವಳಿ ಹಬ್ಬಕ್ಕೂ ಪಡಿತರ ಸಿಗುವುದು ಅನುಮಾನ ಎದುರಾಗಿದೆ.

ಅ. 2ರಿಂದ 17ರವರೆಗೆ ಸರ್ವರ್‌ ಸಮಸ್ಯೆಯಾಗಿತ್ತು. ಇದಕ್ಕೆ ತಂತ್ರಾಂಶ ಬದಲಾವಣೆಯ ಕಾರಣ ನೀಡಿದ ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಗ್ರಾಹಕ ವ್ಯವಹಾರ ಇಲಾಖೆಯ ಅಧಿಕಾರಿಗಳು ಅ. 17ರಂದು ರಾತ್ರಿ ಹೊಸ ತಂತ್ರಾಂಶ ಲಿಂಕ್ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ನೀಡಿದ್ದಾರೆ. ಹೊಸ ತಂತ್ರಾಂಶದ ಲಿಂಕ್ ಕ್ಲಿಕ್ ಮಾಡಿದರೆ, ಅದು ತೆರೆದುಕೊಂಡಿಲ್ಲ. ಕೆಲವೊಮ್ಮೆ ತೆರೆದುಕೊಂಡರೂ ಒಂದು ದಿನಕ್ಕೆ ಒಂದು, ಎರಡು ಕಾರ್ಡದಾರರ ಬಯೋಮೆಟ್ರಿಕ್ ಪಡೆಯುವುದು ಸಾಧ್ಯವಾಗಿದೆ. ಇದಕ್ಕೆ ಸರ್ವರ್ ನಿಧಾನಗತಿ ಆಗಿರುವುದೇ ಕಾರಣ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರ ಸಂಘದ ಅಧ್ಯಕ್ಷ ಕಾಲೇಶ್ವರ ರಾಮಗೊಂಡ ದೂರಿದ್ದಾರೆ.

ಹಿಂಗಾರು ಬಿತ್ತನೆಯ ಈ ದಿನಗಳಲ್ಲಿ ಕೃಷಿಕರಿಗೆ ಬಿಡುವಿಲ್ಲದ ಕೆಲಸಗಳಿವೆ. ಆದರೆ ಬೆರಳಚ್ಚು ನೀಡಲು ನ್ಯಾಯಬೆಲೆ ಅಂಗಡಿ ಮುಂದೆ ದಿನಪೂರ್ತಿ ಕಾಯುತ್ತ ನಿಲ್ಲುವುದು ಅನಿವಾರ್ಯವಾಗಿದೆ. ದಿನಕ್ಕೆ 5-10 ಕಾರ್ಡ್‌ ಮಾತ್ರ ಬೆರಳಚ್ಚು ಪಡೆಯುವುದು ಸಾಧ್ಯವಾದರೆ ಒಂದೊಂದು ಅಂಗಡಿಯಲ್ಲಿ 600 ರಿಂದ 900 ಕಾರ್ಡ್‌ಗಳಿರುತ್ತವೆ. ಅವರ ಬೆರಳಚ್ಚು ಪಡೆಯಲು ಎರಡು ತಿಂಗಳು ಕಳೆದರೂ ಸಾಧ್ಯವಾಗುವುದಿಲ್ಲ. ಹೀಗಾಗಿ ಸರ್ವರ್ ಸಮಸ್ಯೆ ನಿವಾರಣೆ ಮಾಡಬೇಕು. ಈ ಮೂಲಕ ಬಡವರಿಗೆ ಸರಳವಾಗಿ ಸೇವೆ ಸಿಗುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ 99 ನ್ಯಾಯಬೆಲೆ ಅಂಗಡಿಗಳಿವೆ. ಒಂದೊಂದು ಅಂಗಡಿಗೆ ಒಂದಕ್ಕಿಂತ ಹೆಚ್ಚು ಗ್ರಾಮ ಮತ್ತು ತಾಂಡಾಗಳು ಇವೆ. ಇದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರು ಆಹಾರ ಧಾನ್ಯ ಅವರ ಗ್ರಾಮಕ್ಕೆ ತೆರಳಿ ಪಡಿತರ ಹಂಚುತ್ತಾರೆ. ಇದು ಸಾಧ್ಯವಾಗಬೇಕಾದರೆ ಸರ್ವರ್ ಸಮಸ್ಯೆ ನಿವಾರಣೆ ಮಾಡಿ ಬೇಗ ಬೆರಳಚ್ಚು ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಜನರ ಪರವಾಗಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.