ADVERTISEMENT

ಅಬಕಾರಿ ವ್ಯಾಪಾರಿಸ್ನೇಹಿ ಕ್ರಮ ಜುಲೈನಿಂದ ಜಾರಿ: ತಿಮ್ಮಾಪುರ

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 5:28 IST
Last Updated 23 ಜೂನ್ 2024, 5:28 IST
ಕಲಬುರಗಿಯಲ್ಲಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಗೌರವಿಸಲಾಯಿತು. ವಿಧಾನ ಪರಿಷತ್‌ ಸದಸ್ಯ ಜಗದೇವ ಗುತ್ತೇದಾರ, ಹೋಟೆಲ್‌ ಉದ್ಯಮಿ ಬಾಲರಾಜ ಗುತ್ತೇದಾರ ಪಾಲ್ಗೊಂಡಿದ್ದರು
ಕಲಬುರಗಿಯಲ್ಲಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಗೌರವಿಸಲಾಯಿತು. ವಿಧಾನ ಪರಿಷತ್‌ ಸದಸ್ಯ ಜಗದೇವ ಗುತ್ತೇದಾರ, ಹೋಟೆಲ್‌ ಉದ್ಯಮಿ ಬಾಲರಾಜ ಗುತ್ತೇದಾರ ಪಾಲ್ಗೊಂಡಿದ್ದರು   

ಕಲಬುರಗಿ: ‘ರಾಜ್ಯದಲ್ಲಿ ಅಬಕಾರಿ ವಲಯದ ಕುಂದು ಕೊರತೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜುಲೈ ತಿಂಗಳಿನಿಂದ ಅಬಕಾರಿ ವ್ಯಾಪಾರಿಸ್ನೇಹಿ ಕ್ರಮ ಜಾರಿಗೊಳಿಸಲಾಗುವುದು’ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ನಗರದಲ್ಲಿ ಜಿಲ್ಲಾ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್‌ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಸನ್ಮಾನ ಹಾಗೂ ಅಬಕಾರಿ ವ್ಯಾಪಾರಸ್ಥರ ಜೊತೆಗಿನ ಚರ್ಚೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿರುವ ಮದ್ಯದಂಗಡಿ ಮತ್ತು ಬಾರ್ ವ್ಯಾಪಾರಸ್ಥರಿಗೆ ತೊಂದರೆ ಆಗುವುದನ್ನು ತಡೆಯಲು ಇನ್ನು ಮುಂದೆ ಎಂಎಸ್ಐಎಲ್ ಮದ್ಯದ ಅಂಗಡಿ ತೆರೆಯಲು ಅನುಮತಿ ನೀಡುವುದಿಲ್ಲ. ಹೊಸ ಬಾರ್, ವೈನ್ ಶಾಪ್‌ಗಳಿಗೆ ಮಾತ್ರ ಅನುಮತಿ ನೀಡಲಾಗುತ್ತದೆ’ ಎಂದರು.

ADVERTISEMENT

‘ಮದ್ಯ ಮಾರಾಟ ಕಮಿಷನ್ ಹೆಚ್ಚಿಸಬೇಕೆಂಬ ಬೇಡಿಕೆ ಪ್ರಸ್ತಾಪವಿದೆ. ಕಮಿಷನ್‌ ಶೇಕಡ 10ರಿಂದ 20ಕ್ಕೆ ಏರಿಸಬೇಕಾದರೆ ಮಾರಾಟಗಾರರು ಕೂಡ ನಿಗದಿತ ದರಕ್ಕೆ ಮದ್ಯ ಮಾರಾಟ ಮಾಡುವುದನ್ನು ಖಾತ್ರಿಗೊಳಿಸಬೇಕು’ ಎಂದು ಪ್ರತಿಪಾದಿಸಿದರು.

‘ಸಿಎಲ್-7 ಮದ್ಯದ ಅಂಗಡಿಗಳಿಂದ ಸಾಮಾಜಿಕ ಕಿರುಕುಳ ಆಗುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ವ್ಯಾಪಾರಸ್ಥರು, ಅಬಕಾರಿ ಇಲಾಖೆ ಹಾಗೂ ಪೊಲೀಸರು ಪರಸ್ಪರ ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ವೈನ್ ಶಾಪ್‌ಗಳನ್ನು ‘ಸ್ನ್ಯಾಕ್ಸ್ ಬಾರ್’ಗಳಾಗಿ ಪರಿವರ್ತಿಸುವ ಬಗ್ಗೆ ಕೂಡ ಸರ್ಕಾರವು ಸಕಾರಾತ್ಮಕವಾಗಿ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದರು.

ಇದೇ ವೇಳೆ ವಿಧಾನ ಪರಿಷತ್ ನೂತನ ಸದಸ್ಯ ಜಗದೇವ ಗುತ್ತೇದಾರ ಅವರನ್ನು ಉದ್ಯಮಿ ಪವನ ಗುತ್ತೇದಾರ ಸತ್ಕರಿಸಿದರು. ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಅಸೋಸಿಯೇಷನ್ ಅಧ್ಯಕ್ಷ ಅಶೋಕ ಗುತ್ತೇದಾರ ಬಡದಾಳ ಗೌರವಿಸಿದರು.

ಕಾರ್ಯಕ್ರಮದಲ್ಲಿ ಅಬಕಾರಿ ಹೆಚ್ಚುವರಿ ಆಯುಕ್ತ ನಾಗರಾಜಪ್ಪ, ಜಂಟಿ ಆಯುಕ್ತ ಬಸವರಾಜ ಎಚ್., ಕಲಬುರಗಿಯ ಅಬಕಾರಿ ಜಿಲ್ಲಾ ಅಧಿಕಾರಿ ಸಯ್ಯದ್ ಹಜ್ಮತ್ ಆಫ್ರೀನ್‌, ಡೆಪ್ಯುಟಿ ಸೂಪರಿಂಟೆಂಡೆಂಟ್ ದೊಡ್ಡಪ್ಪಗೌಡ, ಕಾಂಗ್ರೆಸ್ ಮುಖಂಡರಾದ ಶ್ಯಾಮ್ ನಾಟಿಕಾರ್, ಅಸೋಸಿಯೇಷನ್ ಕಾರ್ಯದರ್ಶಿ ವೆಂಕಟೇಶ ಕಡೇಚೂರ್ ಸದಸ್ಯರಾದ ರಾಜಗೋಪಾಲ್ ರೆಡ್ಡಿ, ಅಕ್ಷಯ್ ಗುತ್ತೇದಾರ‌, ತಿಮ್ಮಪ್ಪ ಎ.ಈ ಗಂಗಾವತಿ, ಸುರೇಶ ಗುತ್ತೇದಾರ ಮಟ್ಟೂರು, ಅಂಬಯ್ಯ ಗುತ್ತೇದಾರ, ಆಕಾಶ ಗುತ್ತೇದಾರ, ರಾಜೇಶ ದತ್ತು ಗುತ್ತೇದಾರ, ಜೀವನ ಕುಮಾರ ಜತ್ತನ, ಶೇಖರ ಗಾರಂಪಳ್ಳಿ, ದಯಾನಂದ ಪೂಜಾರಿ, ಅನಿಲ್ ಯಾರಗೊಳ, ಬಸವರಾಜ ಸ್ವಾಮಿ ಭಂಕೂರ ಸೇರಿದಂತೆ ಅಸೋಸಿಯೇಷನ್ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.