ಕಲಬುರಗಿ: ಮಕ್ಕಳಲ್ಲಿ ಓದುವ ಅಭಿರುಚಿ ಬೆಳೆಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಆರಂಭಿಸಿದ ‘ಓದುವ ಬೆಳಕು’ ಕಾರ್ಯಕ್ರಮ ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಿಲ್ಲ. ಗ್ರಾಮೀಣ ಭಾಗದ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಲ್ಲಿಯ ಪುಸ್ತಕ ಮತ್ತು ಮೂಲಸೌಕರ್ಯ ಕೊರತೆ ಇದಕ್ಕೆ ಮುಖ್ಯ ಕಾರಣ.
2020ರ ಮಕ್ಕಳ ದಿನಾಚರಣೆಯ ದಿನ ಈ ಕಾರ್ಯಕ್ರಮ ಜಾರಿ ಮಾಡಲಾಗಿತ್ತು. ಇದರ ಅಡಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಲ್ಲಿ 6ರಿಂದ 18 ವರ್ಷದೊಳಗಿನ ಮಕ್ಕಳ ಹೆಸರನ್ನು ಉಚಿತವಾಗಿ ನೋಂದಾಯಿಸಿ ಅವರಿಗೆ ಪುಸ್ತಕಗಳನ್ನು ಎರವಲು ಕೊಡಲಾಗುತ್ತದೆ. ಬಳಿಕ ನೋಂದಣಿ ಶುಲ್ಕವನ್ನು ಗ್ರಾಮ ಪಂಚಾಯಿತಿ ಸೆಸ್‌ನಿಂದ ಭರಿಸಲಾಗುತ್ತದೆ. 2020ರ ಡಿಸೆಂಬರ್ ಒಳಗೆ ಎಲ್ಲ ಮಕ್ಕಳನ್ನು ಈ ಕಾರ್ಯಕ್ರಮದ ವ್ಯಾಪ್ತಿಗೆ ತರುವ ಗುರಿಯನ್ನು ಸರ್ಕಾರ ಹೊಂದಿತ್ತು. ಆದರೆ, ಇಲ್ಲಿಯವರೆಗೂ ಅದು ಸಾಧ್ಯವಾಗಿಲ್ಲ.
ಜಿಲ್ಲೆಯಲ್ಲಿ ಈ ಕಾರ್ಯಕ್ರಮದಡಿ ನೋಂದಾಯಿಸಿಕೊಂಡ ಮಕ್ಕಳ ಸಂಖ್ಯೆ ತೃಪ್ತಿಕರವಾಗಿದ್ದರೂ ಪುಸ್ತಕಗಳನ್ನು ಎರವಲು ಪಡೆದವರ ಸಂಖ್ಯೆ ತೀರ ಕಡಿಮೆ ಇದೆ.
ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಅತಿ ಹೆಚ್ಚು, ಅಂದರೆ 26,578 ಮಕ್ಕಳು ನೋಂದಾಯಿಸಿಕೊಂಡಿದ್ದಾರೆ. ಶಹಾಬಾದ್‌ನಲ್ಲಿ ಕಡಿಮೆ, ಅಂದರೆ 6,296 ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಚಿಂಚೋಳಿಯಲ್ಲಿ 1,756 ಮಕ್ಕಳು ಪುಸ್ತಕಗಳನ್ನು ಎರವಲು ಪಡೆದಿದ್ದಾರೆ.
ಅಫಜಲಪುರ ತಾಲ್ಲೂಕಿನಲ್ಲಿ 13,766 ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಆದರೆ, ಕೇವಲ 386 ಮಕ್ಕಳು ಪುಸ್ತಕಗಳನ್ನು ಎರವಲು ಪಡೆದುಕೊಂಡು ಹೋಗಿದ್ದಾರೆ. ಶಹಾಬಾದ್‌ನಲ್ಲಿ ಕೇವಲ 404 ಮಕ್ಕಳು ಪುಸ್ತಕ ಪಡೆದಿದ್ದಾರೆ ಎನ್ನುವುದನ್ನು ಇಲಾಖೆಯ ಅಂಕಿ–ಅಂಶಗಳು ಪ್ರತಿಫಲಿಸುತ್ತವೆ.
ಕಲಬುರಗಿ ತಾಲ್ಲೂಕಿನಲ್ಲಿ ಹೆಚ್ಚು, ಅಂದರೆ 6,497 ಮಕ್ಕಳು ಗ್ರಂಥಾಲಯದ ಪುಸ್ತಕ ತೆಗೆದುಕೊಂಡು ಹೋಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1,63,548 ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದು, 21,047 ಮಕ್ಕಳು ಪುಸ್ತಕ ತೆಗೆದುಕೊಂಡಿದ್ದಾರೆ. ಆದ್ದರಿಂದ ನೋಂದಣಿ, ಪುಸ್ತಕ ತೆಗೆದುಕೊಂಡವರ ಅನುಪಾತದಲ್ಲಿ ತುಂಬಾ ವ್ಯತ್ಯಾಸ ಇದೆ. ಅಲ್ಲದೆ, ಅಂಗವಿಕಲ ಮಕ್ಕಳ ಸಂಖ್ಯೆಯೂ ತೀರಾ ಕಡಿಮೆ ಇದೆ.
ಜಿಲ್ಲೆಯಲ್ಲಿ 260 ಗ್ರಾಮ ಪಂಚಾಯಿತಿ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಿವೆ. ಇವುಗಳಲ್ಲಿ ಕೆಲವು ಮಾತ್ರ ಮೂಲಸೌಕರ್ಯ ಹೊಂದಿವೆ. ಉಳಿದವುಗಳನ್ನು ಪುಸ್ತಕ ಕೊರತೆ ಕಾಡುತ್ತಿದೆ. ನೋಂದಾಯಿಸಿಕೊಂಡ ಮಕ್ಕಳು ಒಮ್ಮೆಗೆ ಬಂದರೆ ಕುಳಿತುಕೊಳ್ಳಲು ಸ್ಥಳಾವಕಾಶದ ಕೊರತೆ ಎದುರಾಗುತ್ತದೆ. ಆದ್ದರಿಂದ ಸರ್ಕಾರದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಗ್ರಾಮೀಣ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸುವ ಕೆಲಸ ಮಾಡಬೇಕು ಎಂದು ಜನ ಒತ್ತಾಯಿಸುತ್ತಾರೆ.
ಈ ಸಂಬಂಧ ಮಾಹಿತಿ ಪಡೆಯಲು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.
ಪಂಚಾಯಿತಿಯಿಂದ ಉಚಿತ ನೋಂದಣಿ ಓದುವ ಅಭಿರುಚಿ ಬೆಳೆಸುವ ಕಾರ್ಯಕ್ರಮ 2020ರ ಮಕ್ಕಳ ದಿನಾಚರಣೆಯಂದು ಜಾರಿ
ಸರ್ಕಾರ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿದರೂ ಅವುಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಜಾರಿ ಮಾಡುವುದಿಲ್ಲ. ಆದ್ದರಿಂದ ಯೋಜನೆಗಳು ಬಿದ್ದು ಹೋಗುತ್ತವೆಅನೀಲ್ ಕಲಬುರಗಿ ನಿವಾಸಿ
ಮೊದಲು ಗ್ರಾಮೀಣ ಗ್ರಂಥಾಲಯಗಳಿಗೆ ಮೂಲಸೌಕರ್ಯ ಒದಗಿಸುವ ಕೆಲಸ ಮಾಡಬೇಕು. ಬಳಿಕ ಇಂಥ ಕಾರ್ಯಕ್ರಮಗಳನ್ನು ರೂಪಿಸಬೇಕುಪವನ್ ವಿದ್ಯಾರ್ಥಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.