ADVERTISEMENT

ಸನಾತನ ಧರ್ಮ ವಿಶ್ವದ ಸಾಮರಸ್ಯ: ಭಾರತೀ ಸ್ವಾಮೀಜಿ

ಶಂಕರ ಉಪದೇಶಾಮೃತ ಉಪನ್ಯಾಸ: ಬ್ರಹ್ಮಾನಂದ ಭಾರತೀ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 6:43 IST
Last Updated 7 ಜುಲೈ 2024, 6:43 IST
ಕಲಬುರಗಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಉಪನ್ಯಾಸ ನೀಡಿದರು
ಕಲಬುರಗಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಉಪನ್ಯಾಸ ನೀಡಿದರು   

ಕಲಬುರಗಿ: ‘ಸನಾತನ ಧರ್ಮ ಜಗತ್ತಿನಲ್ಲಿ ಶ್ರೇಷ್ಠ ಧರ್ಮವಾಗಿದೆ. ಇದು ಎಲ್ಲರೂ ಒಟ್ಟಾಗಿ ಸಾಮರಸ್ಯದಿಂದ ಬದುಕಬೇಕು ಮತ್ತು ಇಡೀ ಸೃಷ್ಟಿಯ ಒಳಿತನ್ನು ಬಯಸುತ್ತದೆ’ ಎಂದು ಬ್ರಹ್ಮಾನಂದ ಭಾರತೀ ಸ್ವಾಮೀಜಿ ಹೇಳಿದರು.

ನಗರದ ಶೃಂಗೇರಿ ಶಾರದಾ ಪೀಠ ಕಲಬುರಗಿ ಶಾಖಾ ಮಠದಲ್ಲಿ ಶೃಂಗೇರಿ ಭಾರತೀತೀರ್ಥ ಸ್ವಾಮೀಜಿ ಅವರ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಶಂಕರ ಉಪದೇಶಾಮೃತ ಆಧ್ಯಾತ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಾಯತ್ರಿ ಮಂತ್ರದಲ್ಲಿ ನಮ್ಮೆಲ್ಲರ ಬುದ್ಧಿಯನ್ನು ಒಳ್ಳೆಯದರತ್ತ ಪ್ರಚೋದಿಸು, ಇಡೀ ಸೃಷ್ಟಿಗೆ ಮಂಗಳವಾಗಲಿ ಎಂದು ಜಪಿಸಲಾಗುತ್ತದೆ. ಪ್ರಾಣಿ, ಪಕ್ಷಿ, ಗಿಡ–ಮರ, ಜಲಚರದಂತಹ ಸಕಲ ಜೀವರಾಶಿಗಳಿಗೆ ಒಳಿತನ್ನು ಬಯಸುತ್ತೇವೆ. ಜಗತ್ತಿನಲ್ಲಿ ಇರುವ ಎಲ್ಲ ಒಳ್ಳೆಯ ಅಂಶಗಳು ನಮ್ಮ ಕಡೆ ಹರಿದು ಬರಲಿ ಎಂಬ ಸತ್ವವೂ ಸನಾತ ಧರ್ಮದಲ್ಲಿ ಅಡಗಿದೆ’ ಎಂದರು.

ADVERTISEMENT

‘ಸನಾತನ ಧರ್ಮ ಸಿದ್ಧಾಂತ ಮತ್ತು ಚಿಂತನೆಗಳು ಏನು ಎಂಬುದು ಕೆಲವು ಬುದ್ಧಿಜೀವಿಗಳಿಗೆ ಗೊತ್ತಿಲ್ಲ. ತೆರೆದ ಮನಸು ಮತ್ತು ವಿಶಾಲ ಹೃದಯದಿಂದ ಪುರಾಣ, ವೇದ, ಉಪನಿಷತ್ತುಗಳು, ಶಂಕರ ಭಗವತ್ಪಾದರ ಚಿಂತನೆಗಳು, ಭಗವದ್ಗೀತೆಯನ್ನು ಓದಿದರೆ ಜಗತ್ತಿನಲ್ಲಿಯೇ ಸನಾತನ ಧರ್ಮಕ್ಕಿಂತ ಶ್ರೇಷ್ಠವಾದ ಧರ್ಮ ಮತ್ತೊಂದಿಲ್ಲ ಎಂಬುದು ತಿಳಿಯುತ್ತದೆ’ ಎಂದು ಹೇಳಿದರು.

‘ನಮ್ಮ ಶಿಕ್ಷಣ ವ್ಯವಸ್ಥೆ ಹಾಳಾಗಿದೆ. ನಾವು ಏನ್ನನ್ನು ಹೇಳಿಕೊಡಬೇಕಾಗಿತ್ತೋ ಅದನ್ನು ಹೇಳುತ್ತಿಲ್ಲ. ಸನಾತನ ಧರ್ಮದ ಮೌಲ್ಯಗಳು ಜೀವನದ ಮೌಲ್ಯಗಳಾಗಿವೆ. ಅವುಗಳನ್ನು ಪಠ್ಯಕ್ಕೆ ಸೀಮಿತಗೊಳಿಸಿದ್ದೇವೆ ಹೊರತು ಆಚರಣೆಗೆ ತಂದಿಲ್ಲ. ಐರೋಪ್ಯ ರಾಷ್ಟ್ರಗಳಲ್ಲಿ ವೇದ, ಉಪನಿಷತ್ತುಗಳಲ್ಲಿನ ಶಿಸ್ತು, ಸಮಯದ ಪರಿಪಾಲನೆ, ಶುದ್ಧತೆ, ಸತ್ಯದ ಪಾಲನೆ, ಮೋಸ ಮಾಡಬಾರದು ಎಂಬೆಲ್ಲ ಮೌಲ್ಯಗಳನ್ನು ಅನುಸರಿಸುತ್ತಿದ್ದಾರೆ. ಅವುಗಳ ಪಾಲನೆ ನಮ್ಮವರಿಗೆ ಏಕೆ ಆಗುತ್ತಿಲ್ಲ’ ಎಂದು ಪ್ರಶ್ನಿಸಿದರು.

‘ಧರ್ಮ ಸಾಕ್ಷಾತ್ಕಾರ ಮಾಡಿಕೊಟ್ಟವರು ಶಂಕರಾಚಾರ್ಯರು. ನಾವು ಶಂಕರ ಭಗವತ್ಪಾದರ ಪರಂಪರೆಯವರು ಎಂಬ ಹೆಮ್ಮೆ ಇರಲಿ. ಸನಾತನ ಧರ್ಮ ವಿಶ್ವ ಧರ್ಮವಾಗಿದ್ದು, ಅದನ್ನು ಪ್ರತಿಷ್ಠಾಪಿಸಿದವರು ಭಗವಾನ್ ಶಂಕರಾಚಾರ್ಯರು. ಜಗತ್ತಿನ ಶ್ರೇಯಸ್ಸಿಗಾಗಿ ಸನಾತನ ಧರ್ಮ ಉಳಿಸಬೇಕಿದೆ. ಮುಂದಿನ ಪೀಳಿಗೆಗೆ ಸನಾತನ ಧರ್ಮದ ತತ್ವಗಳ ಬಗ್ಗೆ ತಿಳಿ ಹೇಳಿ, ಸನಾತನ ಸಂಸ್ಕೃತಿಯ ಹಾದಿಯಲ್ಲಿ ಕರೆದೊಯ್ಯಬೇಕಿದೆ’ ಎಂದರು.

‘ಈ ಹಿಂದೆ ಬಹಳ ಮಡಿವಂತಿಕೆ ಮಾಡಿ ವಿಷ್ಣು ಸಹಸ್ರನಾಮ, ಭಗವದ್ಗೀತೆಯನ್ನು ಹೆಣ್ಣು ಮಕ್ಕಳು ಓದಬಾರದು ಎಂದು ಯಾರು ಹೇಳಿದ್ದರೋ ಗೊತ್ತಿಲ್ಲ. ಆದರೆ, ಶಂಕರಾಚಾರ್ಯರು ಜಗದ್ಗುರುವಾಗಿ ಸಕಲ ಜೀವರಾಶಿಗಳಿಗೆ ಮಾರ್ಗದರ್ಶನ ನೀಡಿದರು. ಜಾತಿ, ಕುಲ ನೋಡದೆ, ಗಂಡು– ಹೆಣ್ಣು ಎಂಬ ತಾರತಮ್ಯ ಮಾಡದೆ ಎಲ್ಲರನ್ನು ಸಮನಾಗಿ ಕಂಡರು. ಹೀಗಾಗಿ, ಎಲ್ಲರನ್ನು ಮೋಕ್ಷಕ್ಕೆ ಕರೆದೊಯ್ಯುವುದು ಶಂಕರಾಚಾರ್ಯ ತತ್ವ’ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಪಿ.ಎಚ್‌.ಕುಲಕರ್ಣಿ, ಗಜಾನನ ಮಹಾರಾಜ, ಹಣಮಂತರಾಯ ಕುಲಕರ್ಣಿ, ಚಂದ್ರಕಾಂತ ನಾಗೂರೆ, ಪಾಂಡುರಂಗ ಮೊಹರೆಯರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಲಬುರಗಿಯಲ್ಲಿ ಶನಿವಾರ ನಡೆದ ಬ್ರಹ್ಮಾನಂದ ಭಾರತೀ ಸ್ವಾಮೀಜಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.