ADVERTISEMENT

‘ಗೆಲುವಿನಷ್ಟೇ ವೈಫಲ್ಯಗಳ ಮೆಲುಕೂ ಅಗತ್ಯ’

ರೇಷ್ಮೆ ಬಟ್ಟೆ ಕುರಿತ ಸಂವಾದದಲ್ಲಿ ಲೇಖಕ ವಸುಧೇಂದ್ರ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 15:47 IST
Last Updated 22 ಅಕ್ಟೋಬರ್ 2024, 15:47 IST
ಕಲಬುರಗಿಯ ಸಪ್ನ ಬುಕ್‌ ಹೌಸ್‌ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಲೇಖಕ ವಸುಧೇಂದ್ರ ಮಾತನಾಡಿದರು. ಸಂಧ್ಯಾ ಹೊನಗುಂಟಿಕರ್, ವಿಕ್ರಮ ವಿಸಾಜಿ, ಶೈಲಜಾ ಕೊಪ್ಪರ, ಅಮೃತಾ ಕಟಕೆ, ಚಿತ್ಕಲಾ ಮಠಪತಿ ಭಾಗವಹಿಸಿದ್ದರು
ಕಲಬುರಗಿಯ ಸಪ್ನ ಬುಕ್‌ ಹೌಸ್‌ನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಲೇಖಕ ವಸುಧೇಂದ್ರ ಮಾತನಾಡಿದರು. ಸಂಧ್ಯಾ ಹೊನಗುಂಟಿಕರ್, ವಿಕ್ರಮ ವಿಸಾಜಿ, ಶೈಲಜಾ ಕೊಪ್ಪರ, ಅಮೃತಾ ಕಟಕೆ, ಚಿತ್ಕಲಾ ಮಠಪತಿ ಭಾಗವಹಿಸಿದ್ದರು   

ಕಲಬುರಗಿ: ‘ನಮ್ಮ ಇತಿಹಾಸ ಪುಸ್ತಕಗಳಲ್ಲಿ ಗೆದ್ದ ರಾಜಮನೆತನಗಳ ವೈಭವೀಕರಣವೇ ಹೆಚ್ಚಾಗಿರುತ್ತದೆ. ಸೋತವರ ಬಗ್ಗೆ, ವೈಫಲ್ಯಗಳ ಬಗ್ಗೆ ಮಾಹಿತಿಯೇ ಇರುವುದಿಲ್ಲ. ಬೀದಿಗಳಲ್ಲಿ ಚಿನ್ನ, ವಜ್ರ, ವೈಢೂರ್ಯಗಳನ್ನು ಮಾರುತ್ತಿದ್ದ ವಿಜಯನಗರ ಸಾಮ್ರಾಜ್ಯದಲ್ಲಿ ಮಹಿಳೆಯರು ತಮ್ಮ ಪತಿ ತೀರಿಕೊಂಡಾಗ ಚಿತೆಯಲ್ಲಿ ಬಿದ್ದು ಸತಿಯಾಗುತ್ತಿದ್ದರು ಎಂಬುದೂ ವಾಸ್ತವ’ ಎಂದು ಲೇಖಕ ವಸುಧೇಂದ್ರ ಅಭಿಪ್ರಾಯಪಟ್ಟರು.

ಸಪ್ನ ಬುಕ್ ಹೌಸ್, ಸಂಗಮೇಶ್ವರ ಮಹಿಳಾ ಮಂಡಳ, ಲೇಖಕಿಯರ ವೇದಿಕೆ ಸಹಯೋಗದಲ್ಲಿ ಸಪ್ನ ಬುಕ್‌ ಹೌಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ತಾವು ಬರೆದ ರೇಷ್ಮೆ ಬಟ್ಟೆ ಕುರಿತು ಸಂವಾದದಲ್ಲಿ ಮಾತನಾಡಿದ ಅವರು, ‘ಕರ್ನಾಟಕದ ಹಲವೆಡೆ ಮಾಸ್ತಿ ಕಲ್ಲುಗಳು ಸಿಗುತ್ತವೆ. ಸತಿ ಸಹಗಮನ ಪದ್ಧತಿ ಎಷ್ಟೊಂದು ವ್ಯಾ‍ಪಕವಾಗಿತ್ತು ಎಂಬುದನ್ನು ಸೂಚಿಸುತ್ತದೆ’ ಎಂದರು.

‘ರೇಷ್ಮೆ ಬಟ್ಟೆ’ ಕೃತಿಯನ್ನು ಬರೆಯಬೇಕಾದರೆ ‘ಸಿಲ್ಕ್ ರೂಟ್’ ಹಾದಿಯು ಯಾವ ದೇಶಗಳನ್ನು ಹಾಯ್ದು ಹೋಗಿದೆಯೋ ಆ ಬಗ್ಗೆ ವ್ಯಾಪಕ ಅಧ್ಯಯನ ಮಾಡಬೇಕಾಯಿತು. ಬೌದ್ಧ ಧರ್ಮ, ತಾವೊ ಧರ್ಮ, ಝೋರಾಷ್ಟ್ರಿಯನ್ ಧರ್ಮಗಳ ಬಗ್ಗೆ ಅಧ್ಯಯನ ಮಾಡಿದೆ. ನಮ್ಮ ಭಾಷೆ, ಆಚರಣೆಯಲ್ಲದ ಇವುಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಯಿತು’ ಎಂದು ಹೇಳಿದರು.

ADVERTISEMENT

‘ಸಿಲ್ಕ್ ರೂಟ್ ಬಗ್ಗೆ ಇತಿಹಾಸದ ಪಠ್ಯದಲ್ಲಿ ಒಂದು ಸಾಲು ಮಾತ್ರ ಇರುತ್ತದೆ. ಆ ಬಗ್ಗೆ ನಿರಂತರ ಅಧ್ಯಯನ ಮಾಡುವುದರ ಜೊತೆಗೆ ಮಾನವಶಾಸ್ತ್ರ ಹಾಗೂ ಇತಿಹಾಸದ ಅಧ್ಯಯನವೂ ಬೇಕಾಗುತ್ತದೆ. ತೇಜೋ ತುಂಗಭದ್ರಾ ಕಾದಂಬರಿ ಬರೆದಾಗಲೂ ಇಷ್ಟು ಅಧ್ಯಯನ ಮಾಡಿದ್ದೆ. ಅದಕ್ಕಾಗಿ 12 ವರ್ಷಗಳ ಹಿಂದೆ ಉದ್ಯೋಗ ಬಿಟ್ಟಿದ್ದೆ. ಉದ್ಯೋಗದಲ್ಲಿದ್ದರೆ ಇಂತಹ ಅಧಿಕ ಅಧ್ಯಯನವನ್ನು ಬೇಡುವ ಕಾದಂಬರಿಗಳನ್ನು ಬರೆಯಲು ಸಾಧ್ಯವಾಗುವುದಿಲ್ಲ’ ಎಂದು ವಸುಧೇಂದ್ರ ತಿಳಿಸಿದರು.

‘ಇತಿಹಾಸವನ್ನು ಓದುವುದು ನೀರಸ ಎನಿಸುತ್ತದೆ. ಅದೇ ಇತಿಹಾಸವನ್ನು ಕಥನವಾಗಿ ಹೇಳಿದರೆ ಹೆಚ್ಚು ಇಷ್ಟವಾಗುತ್ತದೆ. ತೇಜೋ ತುಂಗಭದ್ರಾ ಕಾದಂಬರಿ ಬರೆದ ಬಳಿಕ ಹೆಚ್ಚು ಜನ ಹಂಪಿಗೆ ಭೇಟಿ ನೀಡಿ ಅಲ್ಲಿನ ದೇವಸ್ಥಾನ, ಬೀದಿಗಳನ್ನು ನೋಡಿದರು’ ಎಂದು ಸ್ಮರಿಸಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ವಿಕ್ರಮ ವಿಸಾಜಿ, ಲೇಖಕಿ ಸಂಧ್ಯಾ ಹೊನಗುಂಟಿಕರ್, ಶೈಲಜಾ ಕೊಪ್ಪರ, ಅಮೃತಾ ಕಟಕೆ, ಚಿತ್ಕಲಾ ಮಠಪತಿ ಸಂವಾದದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.