ADVERTISEMENT

ಕಾಳಗಿ: ರೇವಣಸಿದ್ದೇಶ್ವರ ಗುಡ್ಡ ಕಮಲಾಪುರಕ್ಕೆ ಸೇರ್ಪಡೆ

ಕಾಳಗಿ ತಾಲ್ಲೂಕಿನ ಅರಣಕಲ್‌ ಗ್ರಾ.ಪಂ ವ್ಯಾಪ್ತಿಯ 3 ಗ್ರಾಮ, 3 ತಾಂಡಾ ಸೇರ್ಪಡೆ

ತೀರ್ಥಕುಮಾರ
Published 30 ಆಗಸ್ಟ್ 2023, 7:01 IST
Last Updated 30 ಆಗಸ್ಟ್ 2023, 7:01 IST
ರೇವಣಸಿದ್ದೇಶ್ವರ ದೇವಸ್ಥಾನ
ರೇವಣಸಿದ್ದೇಶ್ವರ ದೇವಸ್ಥಾನ   

ಕಮಲಾಪುರ:‌ ಕಾಳಗಿ ತಾಲ್ಲೂಕಿನ ರೇವಗ್ಗಿ ರಟಕಲ್‌ ಗುಡ್ಡ ಸೇರಿದಂತೆ ಮೂರು ಗ್ರಾಮ, ಮೂರು ತಾಂಡಾಗಳನ್ನು ಕಮಲಾಪುರ ತಾಲ್ಲೂಕಿಗೆ ಸೇರಿಸಿ ಸೋಮವಾರ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ಅರಣಕಲ್‌ ಗ್ರಾಮ ಸೇರಿದಂತೆ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೇವಗ್ಗಿ, ಗೊಣಗಿ, ಬುಗಡಿ ತಾಂಡಾ, ಸಿಂಗ್ಯಾಣಿ ತಾಂಡಾ, ಖಿಂಡಿ ತಾಂಡಾಗಳನ್ನು ಕಮಲಾಪುರ ತಾಲ್ಲೂಕಿಗೆ ಸೇರಿಸಲಾಗಿದೆ ಎಂದು ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಎಸ್‌. ಗುರುಮೂರ್ತಿ ಆದೇಶದಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಚಿತ್ತಾಪುರ ತಾಲ್ಲೂಕಿನಲ್ಲಿದ್ದ ಅರಣಕಲ್ ಗ್ರಾಮ ಪಂಚಾಯಿತಿಯನ್ನು ಹೊಸ ತಾಲ್ಲೂಕು ರಚನೆಯಾದಾಗ ಕಾಳಗಿಗೆ ಸೇರಿಸಲಾಗಿತ್ತು. ಅರಣಕಲ್, ಕಮಲಾಪುರಕ್ಕೆ ಕೇವಲ 14 ಕಿ.ಮೀ ಅಂತರದಲ್ಲಿತ್ತು. ಕಾಳಗಿಗೆ ತೆರಳಬೇಕಾದರೆ ಸುಮಾರು 25 ಕಿ.ಮೀ ಕ್ರಮಿಸಬೇಕಿತ್ತು. ಕಾಳಗಿ ಸೇಡಂ ಕಂದಾಯ ಉಪ ವಿಭಾಗಕ್ಕೆ ಒಳಪಡುವುದರಿಂದ ಈ ಗ್ರಾಮಸ್ಥರು ಮತ್ತಷ್ಟು ತೊಂದರೆ ಅನುಭವಿಸುವಂತಾಗಿತ್ತು. ಇದನ್ನು ಮನಗಂಡ ಸಾರ್ವಜನಿಕರು ಅರಣಕಲ್‌ ಗ್ರಾ.ಪಂ ಕಮಲಾಪುರ ತಾಲ್ಲೂಕಿಗೆ ಸೇರಿಸುವಂತೆ ಒತ್ತಾಯಿಸಿದ್ದರು. ಗ್ರಾಮ ಪಂಚಾಯಿತಿ ನಡಾವಳಿ ಹೊರಡಿಸಿ ಕಳೆದ ಎರಡು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಜನಪ್ರತಿನಿಧಿಯೊಬ್ಬರ ವಿರೋಧದಿಂದಾಗಿ ಗ್ರಾಮಸ್ಥರ ಬೇಡಿಕೆಗೆ ಸೂಕ್ತ ಸ್ಪಂದನೆ ಸಿಕ್ಕಿರಲಿಲ್ಲ.

ADVERTISEMENT

ಹೋರಾಟಕ್ಕಿಳಿದ ಸಾರ್ವಜನಿಕರು ಜನಾಭಿಪ್ರಾಯ ಸಂಗ್ರಹಿಸುವಂತೆ ಒತ್ತಾಯಿಸಿದರು. ಜನಾಭಿಪ್ರಾಯ ಸಂಗ್ರಹಿಸಲು ಕಾಳಗಿ ಹಾಗೂ ಕಮಲಾಪುರ ತಹಶೀಲ್ದಾರರು ಅರಣಕಲ್‌ ಗ್ರಾಮ ಸಭೆ ನಡೆಸಿದಾಗ ಕಮಲಾಪುರ ತಾಲ್ಲೂಕಿಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಸಾರ್ವಜನಿಕರು ಒಕ್ಕೊರಲಿನಿಂದ ಮನವಿ ಸಲ್ಲಿಸಿದರು. ಆದರೆ ಅಂದಿನ ಸರ್ಕಾರ ಕಾಳಗಿ ತಾಲ್ಲೂಕಿನಲ್ಲೇ ಮುಂದುವರಿಸಿತು. ರೊಚ್ಚಿಗೆದ್ದ ಸಾರ್ವಜನಿಕರು ಹೈಕೋರ್ಟ್‌ ಮೊರೆ ಹೋದರು.

ಹೈಕೋರ್ಟ್, ಅರಣಕಲ್‌ ಗ್ರಾಮ ಪಂಚಾಯಿತಿಯನ್ನು ಸಮೀಪದ ಕಮಲಾಪುರ ತಾಲ್ಲೂಕಿಗೆ ಸೇರ್ಪಡೆ ಮಾಡುವಂತೆ ಸೂಚಿಸಿ ತೀರ್ಪು ನೀಡಿತು. ಆದರೆ ಸರ್ಕಾರ ಕೇವಲ ಅರಣಕಲ್‌ ಗ್ರಾಮ ಮಾತ್ರ ಕಮಲಾಪುರಕ್ಕೆ ಸೇರ್ಪಡೆ ಮಾಡಿ ಅಧಿಸೂಚನೆ ಹೊರಡಿಸಿತು. ಇದನ್ನು ಪ್ರಶ್ನಿಸಿದ ಸರ್ವಜನಿಕರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗೆ ತೀರ್ಪಿನ ಪೂರ್ಣ ಮಾಹಿತಿ ನೀಡಿ ಮನವರಿಕೆ ಮಾಡಿದರು. ಹೈಕೋರ್ಟ್‌ ತೀರ್ಪಿನ ಪ್ರತಿ ಸರ್ಕಾರಕ್ಕೆ ಸಲ್ಲಿಸಿ ತೀರ್ಪು ಯಥಾವತ್ತಾಗಿ ಅನುಷ್ಠಾನಗೊಳಿಸಬೇಕೆಂದು ಮರು ಮನವಿ ಸಲ್ಲಿಸಿದರು. ಇದನ್ನು ಪರಿಗಣಿಸಿದ ಸರ್ಕಾರ ಕೊನೆಗೂ ಸಮೀಪದ ನೂತನ ಕಮಲಾಪುರ ತಾಲ್ಲೂಕಿಗೆ ಅರಣಕಲ್‌ ಗ್ರಾಮ ಪಂಚಾಯಿತಿ ಸೇರ್ಪಡೆ ಮಾಡಿ ಆದೇಶ ಹೊರಡಿಸಿದೆ.

2022ರ ಮೇ 24ರಂದು ಅಧಿಸೂಚನೆ ಹೊರಡಿಸಿ, ಆಕ್ಷೇಪಣೆ ಹಾಗೂ ಸಲಹೆಗಳಿಗಾಗಿ 30 ದಿನ ಕಾಲಾವಕಾಶ ನೀಡಲಾಗಿತ್ತು. ಕೊನೆಗೆ ಅರಣಕಲ್‌ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಡುವ ರೇವಗ್ಗಿ, ಗೊಣಗಿ, ಬುಗಡಿ ತಾಂಡಾ, ಸಿಂಗ್ಯಾಣಿ ತಾಂಡಾ, ಖಿಂಡಿ ತಾಂಡಾಗಳನ್ನು ಕಮಲಾಪುರ ತಾಲ್ಲೂಕಿಗೆ ಸೇರ್ಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

ಕಮಲಾಪುರ ತಾಲ್ಲೂಕು ನಿರ್ಮಾಣ ಹೋರಾಟ ಸಮಿತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ರೇವಣಸಿದ್ದೇಶ್ವರ ಗುಡ್ಡ ನಮ್ಮ ತಾಲ್ಲೂಕಿಗೆ ಸೇರ್ಪಡೆಯಾಗಿರುವುದು ಸಂತಸದ ಸಂಗತಿಯಾಗಿದೆ
ಸುಭಾಷ ಬಿರಾದಾರ ಕಮಲಾಪುರ ತಾ.ನಿ.ಹೋ.ಸ.ಅಧ್ಯಕ್ಷ
ರೇವಗ್ಗಿ ಗುಡ್ಡದಲ್ಲಿನ ರೇಣುಕಾಚಾರ್ಯರ ಮೂರ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.