ಕಲಬುರಗಿ: ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಬೈಕ್ಗಳ ಮೇಲೆ ತೆರಳುತಿದ್ದ ಇಬ್ಬರು ಮೃತಪಟ್ಟಿದ್ದಾರೆ.
ಹಡಗಿಲ ಹಾರುತಿ ಕ್ರಾಸ್ ಸಮೀಪದ ರಸ್ತೆಯಲ್ಲಿ ಬೈಕ್ ಸವಾರನ ನಿಯಂತ್ರಣ ತಪ್ಪಿ ಕೆಳಕ್ಕೆ ಬಿದ್ದು ಹಿಂಬದಿಯಲ್ಲಿ ಕುಳಿತಿದ್ದ ಭೀಮಾಶಂಕರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಅಫಜಲಪುರ ತಾಲ್ಲೂಕಿನ ಗೊಬ್ಬೂರ (ಬಿ) ಗ್ರಾಮದ ನಿವಾಸಿಯಾಗಿದ್ದು, ಬೈಕ್ ಓಡಿಸುತ್ತಿದ್ದ ಆತನ ತಮ್ಮ ಈರಣ್ಣ ವಿರುದ್ಧ ಸಂಚಾರ ಪೊಲೀಸ್ ಠಾಣೆ–1ರಲ್ಲಿ ಪ್ರಕರಣ ದಾಖಲಾಗಿದೆ.
ಚಿಕಿತ್ಸೆಗೆ ಸ್ಪಂದಿಸದೆ ಸಾವು: ಆಳಂದ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಶಾಂತಮಲ್ಲಪ್ಪ ಪಟ್ಟಣ (31) ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಸುಧಾಕರ್ ಮತ್ತು ಶಾಂತಮಲ್ಲಪ್ಪ ಅವರು ನವೆಂಬರ್ 8ರ ಮಧ್ಯಾಹ್ನ ಕಲಬುರಗಿಯಿಂದ ಆಳಂದ ಕಡೆಗೆ ಬೈಕ್ ಮೇಲೆ ತೆರಳುತ್ತಿದ್ದರು. ಕೆರೆ ಬೋಸಗಾ ಕ್ರಾಸ್ ಸಮೀಪದಲ್ಲಿ ಸರಕು ವಾಹನ ಡಿಕ್ಕಿ ಹೊಡೆದು, ಶಾಂತಮಲ್ಲಪ್ಪಗೆ ಗಂಭೀರ ಗಾಯವಾಗಿತ್ತು. ಸುಧಾಕರ್ಗೂ ಸಣ್ಣ–ಪುಟ್ಟ ಗಾಯಗಳಾಗಿದ್ದು, ಗುಣಮುಖರಾದರು. ಆದರೆ, ಶಾಂತಮಲ್ಲಪ್ಪ ಗಾಯದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೈಕ್ ಡಿಕ್ಕಿ ಹೊಡೆದು ಪರಾರಿಯಾದ ಸರಕು ವಾಹನ ಚಾಲಕನ ವಿರುದ್ಧ ಸಂಚಾರ ಪೊಲೀಸ್ ಠಾಣೆ–2ರಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.