ಕಮಲಾಪುರ: ತಾಲ್ಲೂಕಿನ ನವನಿಹಾಳ ಖೀರು ನಾಯಕ ತಾಂಡಾದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ದುಸ್ತರಗೊಂಡಿದೆ.
ರಾಷ್ಟ್ರೀಯ ಹೆದ್ದಾರಿಯಿಂದ 2.5 ಕಿ.ಮೀ ದೂರದಲ್ಲಿರುವ ಈ ಪುಟ್ಟ ತಾಂಡಾದಲ್ಲಿ 40 ಮನೆಗಳಿವೆ. 300 ಜನಸಂಖ್ಯೆ ಇದೆ. 5ನೇ ತರಗತಿವರೆಗೆ ಶಾಲೆ ಇದೆ. ಮಳೆಗಾಲ ಬಂತೆಂದರೆ ಈ ತಾಂಡಾ ಸಂಪರ್ಕ ಕಳೆದುಕೊಳ್ಳುತ್ತದೆ.
ಈ ತಾಂಡಾಕ್ಕೆ ಕಿರಿದಾದ ರಸ್ತೆ ಇದ್ದು, ಎರಡೂ ಬದಿಗೆ ಹೊಲಗಳ ಬೇಲಿ ಕಿಕ್ಕಿರಿದಿವೆ. ಹೊಲದೊಳಗಿನ ಜೇಡಿ ಮಣ್ಣು ಮಳೆಗೆ ಕೊಚ್ಚಿಕೊಂಡು ಬಂದು ರಸ್ತೆಯುದ್ದಕ್ಕೂ ಹರಡಿದೆ. ರಾಷ್ಟ್ರೀಯ ಹೆದ್ದಾರಿಯಿಂದ ತಾಂಡಾವರೆಗಿನ 2.5 ಕಿ.ಮೀ ರಸ್ತೆಯುದ್ದಕ್ಕೂ ಮೊಣಕಾಲವರೆಗೆ ಹೊಂಡ ಬಿದ್ದಿವೆ. ನಾಲ್ಕು ಚಕ್ರದ ವಾಹನಗಳಂತು ಸಂಚರಿಸುವುದೇ ಇಲ್ಲ. ಹರಸಾಹಸ ಮಾಡಿ ಬೈಕ್ ಕೊಂಡೊಯ್ದರೆ ಬೈಕ್ ಚಕ್ರಗಳಲ್ಲಿ ಕೆಸರು ಸಿಕ್ಕಿಕೊಳ್ಳುವುದು ನಿಶ್ಚಿತ. ಆಚೆ–ಈಚೆ ಸರ್ಕಸ್ ಮಾಡಿ ಓಡಿಸಿದರೆ ಹೊಂಡದಲ್ಲಿ ಬಿದ್ದು ಕೈಕಾಲು ಮುರಿದುಕೊಂಡು ಆಸ್ಪತ್ರೆ ಸೇರುವುದು ಗ್ಯಾರಂಟಿ. ಬೈಕನ್ನು ಎತ್ತಿನ ಗಾಡಿ ಮೇಲೆ ಹೊತ್ತು ತರಬೇಕು. ಅನೇಕ ಬಾರಿ ಈ ರೀತಿಯ ಘಟನೆಗಳು ನಡೆದಿವೆ. ಈ ಉಸಾಬರಿಯೆ ಬೇಡ 2.5 ಕಿ.ಮೀ ನಡೆದುಕೊಂಡು ತೆರಳಬೇಕೆಂದರೆ ಕಾಲಲ್ಲಿ ಚಪ್ಪಲಿ ಧರಿಸುವಂತಿಲ್ಲ. ಒಂದು ವೇಳೆ ಧರಿಸಿದರೆ ಕೆಸರಲ್ಲಿ ಸಿಕ್ಕಿಕೊಂಡ ಚಪ್ಪಲಿ ನಿಮಗೆ ಸಿಗುವುದೇ ಇಲ್ಲ!. ಮುಳ್ಳು, ಕಲ್ಲು ಚುಚ್ಚಿಸಿಕೊಂಡು ಬರಿಗಾಲಲ್ಲೆ ತೆರಳುತ್ತೇವೆ ಎನ್ನುತ್ತಾರೆ ತಾಂಡಾ ನಿವಾಸಿಗಳು.
ದೊಡ್ಡವರು ಹೇಗೋ ನಡೆದುಕೊಂಡು ಹೋಗುತ್ತೇವೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದು ದೊಡ್ಡ ಸಮಸ್ಯೆಯಾಗಿದೆ. ತಾಂಡಾದಲ್ಲಿ ಕೇವಲ 5ನೇ ತರಗತಿ ಇರುವುದರಿಂದ 6ನೇ ತರಗತಿಗೆ ಕಮಲಾಪುರಕ್ಕೆ ತೆರಳಬೇಕು. ಮಕ್ಕಳಿಗೆ ಈ ರಸ್ತೆಯಲ್ಲಿ ನಡೆಯಲಾಗುವುದಿಲ್ಲ. ಖಾಸಗಿ ವಾಹನಗಳು ಬರುವುದೂ ಇಲ್ಲ. ಹೆಗಲ ಮೇಲೆ ಹೊತ್ತು ಸಾಗಿಸುತ್ತಿದ್ದೇವೆ ಎನ್ನುತ್ತಾರೆ ತಾಂಡಾ ಜನ.
ರಸ್ತೆ ಸಮಸ್ಯೆ ಒಂದೆಡೆಯಾದರೆ ರೈಲು ಸೇತುವೆ ಸಮಸ್ಯೆ ಇದಕ್ಕಿಂತ ದೊಡ್ಡದಾಗಿ. ಅವೈಜ್ಞಾನಿಕ ರೈಲು ಸೇತುವೆಯಿಂದ ಕೆಳಗಿರುವ ತಾಂಡಾ ರಸ್ತೆ ಮೇಲೆ ಸೊಂಟದವರೆಗೆ ನೀರು ನಿಲ್ಲುತ್ತದೆ. ಮಳೆಯಾಗಿ ವಾರ ಕಳೆದರೂ ಖಾಲಿಯಾಗುವುದಿಲ್ಲ. ನೀರು ಸರಾಗವಾಗಿ ಸಾಗಲು ಅವಕಾಶವೇ ಇಲ್ಲ. ಅನೇಕ ಬಾರಿ ಈಜಿಕೊಂಡು ಸಾಗಿದ್ದೇವೆ. ಹಾವು, ಚೇಳು, ಕ್ರಿಮಿ ಕೀಟಗಳು ಒಳಗಡೆ ಇರುತ್ತವೆ. ಯಾವಾಗ ಏನಾಗುತ್ತದೊ ಗೊತ್ತಿಲ್ಲ. ಜೀವ ಕೈಯಲ್ಲಿ ಹಿಡಿದು ತೆರಳುತ್ತೇವೆ ಎಂದು ಬಾಬು ರಾಠೋಡ್ ಆತಂಕ ವ್ಯಕ್ತಪಡಿಸಿದರು.
ತಾಲ್ಲೂಕು ಕೇಂದ್ರದಿಂದ ಕೇವಲ 3.5 ಕಿ.ಮೀ ದೂರದಲ್ಲಿರುವ ನಾವು ತಾಂಡಾ ರಸ್ತೆ ಹದಗೆಟ್ಟಿರುವುದರಿಂದ ಯಾವುದೋ ದ್ವೀಪದಲ್ಲಿದ್ದಂತೆ ಭಾಸವಾಗುತ್ತಿದೆ. ರಸ್ತೆ ಅಭಿವೃದ್ಧಿಪಡಿಸಿ ಪುಣ್ಯಕಟ್ಟಿಕೊಳ್ಳಿ
-ಬಾಬು ರಾಠೋಡ ಗ್ರಾ.ಪಂ ಸದಸ್ಯ
ಕೇವಲ 5ನೇ ತರಗತಿವರೆಗೆ ಶಾಲೆ ಇದೆ. 6ನೇ ತರಗತಿಗೆ ಕಮಲಾಪುರಕ್ಕೆ ತೆರಳಬೇಕು. ಮಳೆಗಾಲದಲ್ಲಿ 3 ತಿಂಗಳು ತರಗತಿಗಳಿಗೆ ತೆರಳಲಾಗುತ್ತಿಲ್ಲ ತಾಂಡಾ ಮಕ್ಕಳ ಶಿಕ್ಷಣ ಕುಂಠಿತಗೊಳ್ಳುತ್ತಿದೆ
-ಸಂಜು ರಾಠೋಡ ತಾಂಡಾ ನಿವಾಸಿ
ಕಳೆದ ಬಾರಿ ಅನೇಕ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಈ ಬಾರಿ ಅನುದಾನ ಕೊರತೆಯುಂಟಾಗುತ್ತಿದೆ. ಅನುದಾನ ಬಂದ ತಕ್ಷಣ ತಾಂಡಾ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು
-ಬಸವರಾಜ ಮತ್ತಿಮಡು ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.