ಕಾಳಗಿ: ಕಲಬುರಗಿ ಮತ್ತು ಬೀದರ್ ನಡುವಿನ ಕಾಳಗಿ ತಾಲ್ಲೂಕಿನಲ್ಲಿ 6 ರಾಜ್ಯ ಹೆದ್ದಾರಿಗಳು, 14 ಜಿಲ್ಲಾ ಮುಖ್ಯ ರಸ್ತೆಗಳು, 75 ಗ್ರಾಮೀಣ ರಸ್ತೆಗಳು ಹಾದು ಹೋಗಿದ್ದು, ನೂರಾರು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿವೆ. ಬಹುತೇಕ ರಸ್ತೆಗಳು ಒಂದಿಲ್ಲಾ ಒಂದು ಕಾರಣದಿಂದ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಕಂಟಕವಾಗಿವೆ.
32 ಕಿ.ಮೀ ಅಂತರದ ಹಳೇ ತಾಲ್ಲೂಕು ಚಿತ್ತಾಪುರ ಸಂಪರ್ಕಿಸುವ ತೆಂಗಳಿ ಮಾರ್ಗದ ರಾಜ್ಯಹೆದ್ದಾರಿ 126ರ ಸ್ಥಿತಿ ಗಂಭೀರವಾಗಿದೆ. ತೆಂಗಳಿ-ತೊನಸನಹಳ್ಳಿ (ಟಿ) ಕ್ರಾಸ್, ಕಲಗುರ್ತಿ-ಹೆಬ್ಬಾಳ ಕ್ರಾಸ್, ಅಶೋಕನಗರ-ಚಿಂಚೋಳಿ (ಎಚ್) ನಡುವೆ ಎಲ್ಲೆಂದರಲ್ಲಿ ತಗ್ಗುಗುಂಡಿ ಬಿದ್ದು, ಜಲ್ಲಿಕಲ್ಲು ಹೊರ ಬಂದಿವೆ.
ಬೇಸಿಗೆಯಲ್ಲಿ ಈ ರಸ್ತೆಯ ಪ್ರಯಾಣಿಕರಿಗೆ ದೂಳಿನ ಹಾಗೂ ಮಳೆಗಾಲದಲ್ಲಿ ಕೆಸರಿನ ಮಜ್ಜನ ಮಾಡಿಸುವಂತೆ ಇದೆ. ಇದೇ ರಸ್ತೆಯಲ್ಲಿ ಕೋರ್ಟ್, ಸಬ್ ರಿಜಿಸ್ಟ್ರಾರ್, ಬಿಇಒ, ತಹಶೀಲ್ದಾರ್, ಸಿಡಿಪಿಒ ಸೇರಿದಂತೆ ಹಲವು ಇಲಾಖೆಗಳ ಅಧಿಕಾರಿಗಳು ಓಡಾಡುತ್ತಾರೆ. ನಾಗಾವಿ ಎಲ್ಲಮ್ಮ ದೇವಸ್ಥಾನಕ್ಕೂ ಇದೇ ರಸ್ತೆ ಸಂಪರ್ಕ ಕಲ್ಪಿಸುತ್ತದೆ.
ಶಹಾಪುರ-ಶಿವರಾಂಪುರ ರಾಜ್ಯಹೆದ್ದಾರಿ-149 ಹೊಸ ಹೆಬ್ಬಾಳ-ಹಳೆ ಹೆಬ್ಬಾಳ, ಚಿಂಚೋಳಿ (ಎಚ್) ನಡುವೆ ದುಃಸ್ಥಿತಿಯಲ್ಲಿದೆ. ಕಲಬುರಗಿ-ಕಾಳಗಿ ನಡುವೆ ಪ್ರಯಾಣಿಸುವವರ ಜೀವ ಹಿಂಡುತ್ತಿದೆ.
ಉಮ್ಮರ್ಗಾ ಕ್ರಾಸ್-ಸುಲೇಪೇಟ್ ರಾಜ್ಯಹೆದ್ದಾರಿ-32 ರಟಕಲ್, ಕಂಚನಾಳ ಕ್ರಾಸ್, ಕೋಡ್ಲಿ ಕ್ರಾಸ್ ಬಳಿ ಅಲ್ಲಲ್ಲಿ ತಗ್ಗುಬಿದ್ದು ಹೆದ್ದಾರಿ ಕಿತ್ತುಹೋಗಿದೆ. ಮೊಘ-ರುಮ್ಮನಗೂಡ-ಪಸ್ತಾಪುರ ನಡುವಿನ ಹೊಸ ರಾಜ್ಯ ಹೆದ್ದಾರಿಯ 7 ಕಿ.ಮೀ. ನೋಡಲಾಗದಷ್ಟು ಹಾಳಾಗಿದೆ. ಚಿಂಚೋಳಿ, ಕಾಳಗಿ, ಚಿಟಗುಪ್ಪ ಹಾಗೂ ಕಲಬುರಗಿ ನಡುವೆ ಸಂಚರಿಸುವವರ ಗೋಳು ಕೇಳುವವರು ಇಲ್ಲದಂತೆ ಆಗಿದೆ.
ತೆಂಗಳಿ ತಾಂಡಾ- ತೆಂಗಳಿ- ಅರಜಂಬಗಾ- ಕಾಳಗಿ- ಹೊಸಳ್ಳಿ (ಎಚ್) ನಡುವಿನ ಹೊಸ ರಾಜ್ಯಹೆದ್ದಾರಿಯು ಅರಜಂಬಗಾ, ಡೊಣ್ಣೂರ ಮತ್ತು ಹೊಸಳ್ಳಿ (ಎಚ್) ಸಮೀಪದಲ್ಲಿ ರಸ್ತೆ ಕಿತ್ತು, ಜಲ್ಲಿಕಲ್ಲು ಹೊರಬಂದಿವೆ. ಫಿರೋಜಾಬಾದ್ ಕ್ರಾಸ್- ಕಮಲಾಪುರ ರಾಜ್ಯಹೆದ್ದಾರಿ-125 ವಚ್ಚಾ ಸೇತುವೆ ಬಳಿಯ ರಸ್ತೆ ಹಾಳಾಗಿದೆ. ಕೋಡ್ಲಿ ಕ್ರಾಸ್ ಕಾಮಗಾರಿಗೆ ಎದುರು ನೋಡುತ್ತಿದೆ. ಹದನೂರ-ಮತ್ತಿಮಡು ಕ್ರಾಸ್ ನಡುವಿನ ಜಿಲ್ಲಾ ಮುಖ್ಯರಸ್ತೆಯಲ್ಲಿ ಗುಂಡಿಗಳ ರಾಶಿಯೇ ಆವರಿಸಿವೆ.
ಶ್ರೀಕ್ಷೇತ್ರ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ಗುಡ್ಡ, ಕೋರವಾರ ಅಣಿವೀರಭದ್ರೇಶ್ವರ ದೇವಸ್ಥಾನ, ಕಾಳಗಿ ನೀಲಕಂಠ ಕಾಳೇಶ್ವರ ಮಂದಿರ, ಸುಗೂರ ವೆಂಕಟೇಶ್ವರ ದೇವಸ್ಥಾನ, ಕನ್ನಡಗಿ ಮಲ್ಲಿಕಾರ್ಜುನ ದೇವರ ಗುಡಿ, ಹೆಬ್ಬಾಳ ಅಣಿವೀರಭದ್ರೇಶ್ವರ ಗುಡಿಗೆ ಬಂದು–ಹೋಗುವ ಭಕ್ತರು ಪರದಾಡುವಂತೆ ಆಗಿದೆ. ಹದಗೆಟ್ಟ ರಸ್ತೆಗಳಿಂದ ಕೆಲವರು ಸುತ್ತಿ ಬಳಸಿ ಪ್ರಯಾಣಿಸುತ್ತಿದ್ದಾರೆ. ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ರಸ್ತೆ ಸ್ಥಿತಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಬದಲಾದ ಬಸ್‌ಗಳ ಮಾರ್ಗ
ಗೋಟೂರ-ಚಿಂಚೋಳಿ (ಎಚ್) ಮತ್ತು ರೇವಗ್ಗಿ-ಅರಣಕಲ್ ನಡುವಿನ ಜಿಲ್ಲಾ ಮುಖ್ಯರಸ್ತೆಗೆ ಹೊಲ ಕಳೆದುಕೊಂಡ ರೈತರಿಗೆ ಪರಿಹಾರ ಸಿಕ್ಕಿಲ್ಲ ಎಂಬ ಕಾರಣಕ್ಕೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಪರಿಣಾಮ ಈ ಎರಡೂ ರಸ್ತೆ ಸಂಪೂರ್ಣ ಹಾಳಾಗಿದ್ದು ಕಾಳಗಿ-ಗೋಟೂರ-ಚಿಂಚೋಳಿ (ಎಚ್) - ಕಲಬುರಗಿ ಮಾರ್ಕೆಟ್ ಬಸ್‌ಗಳ ಮಾರ್ಗವೇ ಬದಲಾಗಿದೆ ಎನ್ನುತ್ತಾರೆ ಸ್ಥಳೀಯರು.
ಸಾವತಖೇಡ-ಬೆಣ್ಣೆತೊರಾ ಜಲಾಶಯ-ಹೇರೂರ ನಡುವಿನ ರಸ್ತೆ ಹಾಗೂ ಕೊಡದೂರ-ರಾಜಾಪುರ ನಡುವಿನ ರಸ್ತೆಯು ಸಂಪೂರ್ಣ ಹಾಳಾಗಿದ್ದು ದುರಸ್ತಿಗೆ ಕಾಯುತ್ತಿವೆ. ಗುಂಡಿಗಳ ರಸ್ತೆಗಳಿಂದಾಗಿ ತೆಂಗಳಿ ಚಿತ್ತಾಪುರ ಮೊಘ-ರುಮ್ಮನಗೂಡ ಪಸ್ತಾಪುರ ಹೆಬ್ಬಾಳ ಡೊಣ್ಣೂರ ಹುಳಗೇರಾ ಮಹಾಗಾಂವ ಕ್ರಾಸ್-ಕೋಡ್ಲಿ ಮಾರ್ಗದಲ್ಲಿ ಬಸ್‌ಗಳ ಸಂಚಾರವೂ ಕಡಿಮೆಯಾಗಿದೆ.
ಸರ್ಕಾರದ ಅನುದಾನದಲ್ಲಿ ಅವಕಾಶ ಇರುವಲ್ಲಿ ರಸ್ತೆ ದುರಸ್ತಿ ಮಾಡಲಾಗುತ್ತಿದ್ದು ಹಾಳಾಗಿರುವ ಹೆದ್ದಾರಿಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆಮಲ್ಲಿಕಾರ್ಜುನ ದಂಡಿ, ಎಇಇ, ಲೋಕೋಪಯೋಗಿ ಇಲಾಖೆ ಉಪವಿಭಾಗ ಕಾಳಗಿ
ಹಾಳಾಗಿರುವ ರಸ್ತೆಗಳ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ಹಲವರು ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ಸುಲೇಪೇಟ ಮಾರ್ಗದಿಂದ 20 ಕಿ.ಮೀ. ಸುತ್ತಿ ಬಳಸಿ ಪ್ರಯಾಣಿಸಬೇಕಿದೆಮಶಾಕ್ ಸಾಬ್ ಮಡಕಿ, ರುಮ್ಮನಗೂಡ ಗ್ರಾಮಸ್ಥ
ಹದಗೆಟ್ಟ ರಸ್ತೆಗಳ ಬಗ್ಗೆ ದುರುಕೊಟ್ಟು ಸಾಕಾಗಿದೆ. ಆರಂಭದಲ್ಲಿ ಒಂದಿಷ್ಟು ಮುರುಮ್ ಹಾಕಿದ್ದು ಬಿಟ್ಟರೆ ಶಾಶ್ವತ ಪರಿಹಾರಕ್ಕೆ ಮುಂದಾಗಿಲ್ಲ.ಅಣ್ಣರಾವ ಸಲಗರ, ಚಿಂಚೋಳಿ (ಎಚ್) ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.