ಸೇಡಂ: ತೆಲಂಗಾಣ-ಆಂಧ್ರಪ್ರದೇಶ ರಾಜ್ಯಗಳ ಗಡಿ ಹಂಚಿಕೊಂಡಿರುವ ಸೇಡಂ ತಾಲ್ಲೂಕಿನಲ್ಲಿ 7 ರಾಜ್ಯ ಹೆದ್ದಾರಿಗಳು ಹಾದು ಹೋಗಿದ್ದು, ಅವುಗಳಲ್ಲಿ 4ಕ್ಕಿಂತ ಹೆಚ್ಚಿನ ಹೆದ್ದಾರಿ ರಸ್ತೆಗಳು ದುರಸ್ತಿ ಸೇರಿದಂತೆ ವಿಸ್ತರಣೆ ಭಾಗ್ಯಕ್ಕೆ ಬಾಯ್ತೆರೆದಿವೆ.
ಕಿತ್ತು ಹೋದ ಡಾಂಬರು, ತಗ್ಗು ಗುಂಡಿಗಳ ದರ್ಬಾರು, ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯತೆ, ಅಧಿಕಾರಿಗಳ ನಿರಾಸಕ್ತಿ, ಜನಪ್ರತಿನಿಧಿಗಳ ನಿಷ್ಕಾಳಜಿ ಸೇರಿ ವಿವಿಧ ಕಾರಣಗಳಿಂದಾಗಿ ಸಾವಿರಾರು ಪ್ರಯಾಣಿಕರು ಸಂಕಟದಿಂದಲೇ ಸಂಚರಿಸುವಂತಹ ಪರಿಸ್ಥಿತಿ ಕೆಲ ರಸ್ತೆಗಳಲ್ಲಿ ನಿರ್ಮಾಣವಾಗಿದೆ.
‘ಹೆದ್ದಾರಿ ರಸ್ತೆಗಳಲ್ಲಿ ತಗ್ಗು ಗುಂಡಿಗಳು ತಲೆಯೆತ್ತಿದ್ದರಿಂದ ಬೈಕ್, ಆಟೊ, ಕಾರ್, ಬಸ್, ಲಾರಿ ಸೇರಿದಂತೆ ವಾಹನಗಳ ಸಂಚಾರಕ್ಕೆ ಸಂಕಟವಾಗಿ ಪರಿಣಮಿಸಿವೆ. ಮಳೆಗಾಲದಲ್ಲಿ ರಸ್ತೆ ಮೇಲೆ ವಾಹನ ಚಲಾಯಿಸಬೇಕಾದರೆ ಹರಸಾಹಸ ಪಡಬೇಕಿದೆ. ಕೆಲವರು ಆಯ ತಪ್ಪಿ ರಸ್ತೆ ಮೇಲೆ ಬಿದ್ದು ಆಸ್ಪತ್ರೆಗೆ ದಾಖಲಾದ ಉದಾಹರಣೆಗಳು ಚಿಂಚೋಳಿ-ಸೇಡಂ ರಾಜ್ಯ ಹೆದ್ದಾರಿ-15 ಮತ್ತು ಮುಧೋಳ-ಯಲಗೇರ ರಾಜ್ಯ ಹೆದ್ದಾರಿ 127 ರಲ್ಲಿ ಸಂಭವಿಸಿವೆ. ನಿತ್ಯ ನರಕಯಾತನೆ ಅನುಭವಿಸುತ್ತಿರುವ ಪ್ರಯಾಣಿಕರತ್ತ ಅಧಿಕಾರಿಗಳು ಗಮನ ಹರಿಸುತ್ತಿಲ್ಲ’ ಎಂದು ಜನ ದೂರುತ್ತಿದ್ದಾರೆ.
ವನ್ಮಾರಪಲ್ಲಿ-ರಾಯಚೂರು ಸಂಪರ್ಕ ಕಲ್ಪಿಸುವ ಚಿಂಚೋಳಿ-ಸೇಡಂ ರಾಜ್ಯ ಹೆದ್ದಾರಿ-15 ಹದಗೆಟ್ಟಿದ್ದು ತಗ್ಗು ಗುಂಡಿಗಳದ್ದೆ ದರ್ಬಾರು ಎನ್ನುವಂತಾಗಿದೆ. ತಾಲ್ಲೂಕಿನ ಯಲ್ಲಮ್ಮಗೇಟ್‌ನಿಂದ, ಸೂರವಾರ, ಸಟಪಟನಹಳ್ಳಿ– ಸೇಡಂ ಪಟ್ಟಣದವರೆಗೂ ಸುಮಾರು 15 ಕಿ.ಮೀ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಾಜ್ಯ ಅಲ್ಲದೆ ಸೇಡಂನಿಂದ ಕೋಡ್ಲಾವರೆಗೆ ಅಲ್ಲಲ್ಲಿ ತಗ್ಗು ಗುಂಡಿಗಳು ತಲೆಯೆತ್ತಿವೆ. ಶ್ರೀ ಸಿಮೆಂಟ್ ಕಂಪನಿಗೆ ತೆರಳುವ ಭಾರಿ ವಾಹನಗಳ ಸಂಚಾರದಿಂದ ತಗ್ಗು ಗುಂಡಿಗಳು ಉದ್ಭವಿಸಿವೆ.
ಮುಧೋಳ-ಯಲಗೇರಾ ಸಂಪರ್ಕಿಸುವ ರಾಜ್ಯ ಹೆದ್ದಾರಿ 127ರ ರಸ್ತೆ ಹಾಳಾಗಿದ್ದು, ಪ್ರಯಾಣಿಕರ ಸಂಚಾರಕ್ಕೆ ಸಂಚಕಾರ ತಂದಿದೆ. ಮುಧೋಳ, ಮದನಾ, ವೆಂಕಟಾಪುರ, ಮೋತಕಪಲ್ಲಿ, ಶಕಲಾಸಪಲ್ಲಿ, ಇಟಕಾಲ್‌ವರೆಗೂ ಹೊಂಡಗಳೇ ಅಧಿಕವೆಂಬಂತಾಗಿದೆ. ಮೋತಕಪಲ್ಲಿ ದೇವಸ್ಥಾನ ಪ್ರವಾಸಿ ಸ್ಥಳಗಳಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದ್ದು, ಇಲ್ಲಿಗೆ ಪ್ರತಿ ಶನಿವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಡಿಸೆಂಬರ್ ತಿಂಗಳಲ್ಲಿ ಜರುಗುವ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಜೊತೆಗೆ ಯಾನಾಗುಂದಿಯ ಮಾತಾಮಾಣಿಕೇಶ್ವರಿ ದರ್ಶನಕ್ಕೆ ತೆರಳುವ ರಸ್ತೆ ಇದಾಗಿದೆ. ಅತ್ಯಂತ ಪ್ರಮುಖ ಸಂಪರ್ಕ ರಸ್ತೆಗಳಲ್ಲಿ ಇದು ಮುಖ್ಯವೆನಿಸಿದ್ದು, ಇಂತಹ ಪವಿತ್ರ ತಾಣಕ್ಕೆ ತೆರಳುವ ರಸ್ತೆ ಹದಗೆಟ್ಟಿದ್ದರೆ ಭಕ್ತರು ತೆರಳುವುದಾದರೂ ಹೇಗೆ ಎಂಬ ಪ್ರಶ್ನೆ ಎದುರಾಗಿದೆ.
‘ಸಿಂದಗಿ-ಕೋಡಂಗಲ್ ರಾಜ್ಯ ಹೆದ್ದಾರಿ-16 ರಸ್ತೆಯ ಅಲ್ಲಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಡಾಂಬರು ಕಿತ್ತು ಹೋಗಿ, ಅಲ್ಲಲ್ಲಿ ಬಿರುಕು ಬಿಟ್ಟಿದೆ. ಇಟಕಾಲ್ ಕ್ರಾಸ್‌ನಿಂದ ಬುರಗಪಲ್ಲಿ, ಯಾನಾಗುಂದಿ– ಮೇದಕವರೆಗೆ ಸುಮಾರು 17 ಕಿ.ಮೀ ರಸ್ತೆ ದುರಸ್ತಿ ಮಾಡಬೇಕಿದೆ’ ಎನ್ನುವುದು ಪ್ರಯಾಣಿಕರ ಒತ್ತಾಸೆಯಾಗಿದೆ.
ಕಲಬುರಗಿ-ರಿಬ್ಬನಪಲ್ಲಿ ರಾಜ್ಯ ಹೆದ್ದಾರಿ-10ರ ರಸ್ತೆ ಮೇಲೆ ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿದ್ದು, ದುರಸ್ತಿ ಜೊತೆಗೆ ಚತುಷ್ಪಥ ರಸ್ತೆ ನಿರ್ಮಾಣವಾಗಬೇಕು. ವಾಹನಗಳ ಸಂಚಾರ ಹೆಚ್ಚಿದ್ದು, ರಸ್ತೆ ವಿಸ್ತರಣೆಯಾದಾಗ ಮಾತ್ರ ಅಪಘಾತಗಳ ಸಂಖ್ಯೆ ಇಳಿಮುಖವಾಗಲು ಸಾಧ್ಯವೆನ್ನುವುದು ಜನರ ಅಭಿಮತ.
ಕುರಕುಂಟಾ-ಸಿದ್ಧಾಪುರ ರಾಜ್ಯ ಹೆದ್ದಾರಿ -180, ಮರ್ಕಿ-ಹಂದರಕಿ ಸಂಪರ್ಕಿಸುವ ರಾಜ್ಯ ಹೆದ್ದಾರಿ-122, ಯಾನಾಗುಂದಿ-ಚಿತ್ತಾಪುರ ಸಂಪರ್ಕಿಸುವ ರಾಜ್ಯ ಹೆದ್ದಾರಿ 173 ರಸ್ತೆ ದುರಸ್ತಿಯಾಗಬೇಕಿದೆ. ಮುಖ್ಯವಾಗಿ ರಾಜ್ಯ ಹೆದ್ದಾರಿ-15, 10, 127 ದುರಸ್ತಿ ಹಾಗೂ ರಸ್ತೆ ವಿಸ್ತರಣೆಯಾದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯವಾಗಬೇಕಿದೆ ಎಂಬುವುದು ಸಾರ್ವಜನಿಕರ ಒತ್ತಾಸೆ.
ಮದನಾದಿಂದ ಇಟಕಾಲಕ್ರಾಸ್‌ವರೆಗೆ ತೆರಳುವ ರಸ್ತೆ ಹದಗೆಟ್ಟಿದ್ದರಿಂದ ನಿತ್ಯ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರದಲ್ಲಿ ರಸ್ತೆ ದುರಸ್ತಿಯಾಗಬೇಕು.ಅಶೋಕ ಮುನಕಪಲ್ಲಿ, ಪ್ರಯಾಣಿಕ
ಹಂದರಕಿ-ಸೇಡಂ ಸಂಪರ್ಕ ರಸ್ತೆಯಲ್ಲಿ ಭಾರಿ ವಾಹನಗಳ ಸಂಚಾರದಿಂದ ತಗ್ಗು ಗುಂಡಿಗಳು ಬಿದ್ದಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ದುರಸ್ತಿ ಮಾಡುವ ಅವಶ್ಯಕತೆ ಇದೆ.ಮಲ್ಲಿಕಾರ್ಜುನ ಹುಳಗೋಳ, ಮಾಜಿ ಅಧ್ಯಕ್ಷ ಗ್ರಾ.ಪಂ. ಹಂದರಕಿ
ಸಚಿವ ಡಾ.ಶರಣಪ್ರಕಾಶ ಪಾಟೀಲರು ₹25 ಕೋಟಿ ಅನುದಾನವನ್ನು ವೆಂಕಟಾಪುರ-ಇಟಕಾಲ್ ಕ್ರಾಸ್ ರಸ್ತೆಗೆ ಮಂಜೂರು ಮಾಡಿದ್ದು ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯ ಪ್ರಾರಂಭವಾಗಲಿದೆ.ರವಿಂದ್ರ ನಂದಿಗಾಮ, ಅಧ್ಯಕ್ಷ, ಮುಧೋಳ ಬ್ಲಾಕ್ ಕಾಂಗ್ರೆಸ್
‘ರಸ್ತೆಗಳ ದುರಸ್ತಿಗೆ ಕೋಟ್ಯಂತರ ಅನುದಾನ’
‘ತಾಲ್ಲೂಕಿನ ವೆಂಕಟಾಪುರದಿಂದ-ಮೋತಕಪಲ್ಲಿ ಮಾರ್ಗದಿಂದ ಇಟಕಾಲಗೇಟ್‌ವರೆಗೆ ಸುಮಾರು 9 ಕಿ.ಮೀ ದುರಸ್ತಿಗೆ ₹25 ಕೋಟಿ ಇಟಕಾಲ್ ಕ್ರಾಸ್‌ನಿಂದ ಯಾನಾಗುಂದಿ ಮಾರ್ಗದಿಂದ ಮೇದಕವರೆಗೆ ರಾಜ್ಯ ಹೆದ್ದಾರಿ-16 ದುರಸ್ತಿಗೆ ₹5 ಕೋಟಿ ಜೊತೆಗೆ ಯಲ್ಲಮ್ಮಗೇಟ್‌ನಿಂದ ಸೇಡಂ ಸಮೀಪದವರೆಗೆ ₹3.5 ಕೋಟಿ ಹಾಗೂ ಸೇಡಂ ಪಟ್ಟಣದ ಬಸವೇಶ್ವರ ವೃತ್ತದಿಂದ ವಾಸವದತ್ತಾ ಸಿಮೆಂಟ್ ಕಂಪನಿ ವರೆಗಿನ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ₹6 ಕೋಟಿ ಸೇರಿದಂತೆ ಗ್ರಾಮೀಣ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳ ದುರಸ್ತಿಗಾಗಿ ಕೋಟ್ಯಂತರ ಅನುದಾನ ಮಂಜೂರು ಮಾಡಲಾಗಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
ಸೇಡಂ ತಾಲ್ಲೂಕಿಗೆ ಸಂಪರ್ಕ ಹೊಂದಿರುವ ರಾಜ್ಯ ಹೆದ್ದಾರಿಗಳು
(ಕ್ರ.ಸಂ;ರಾ.ಹೆ ಹೆಸರು, ಸಂಖ್ಯೆ;ಮಾರ್ಗ; ತಾಲ್ಲೂಕಿನಲ್ಲಿ ಕ್ರಮಿಸಿದ ದೂರ(ಕಿ.ಮಿಗಳಲ್ಲಿ))
1;ಕಲಬುರಗಿ_ರಿಬನಪಲ್ಲಿ-10;ಕಲಬುರಗಿ,ಮಾಡಬೂಳ, ಗುಂಡಗುರ್ತಿ, ಮಳಖೇಡ, ಸೇಡಂ, ಮುಧೋಳ, ರಿಬನಪಲ್ಲಿ;45
2;ವನ್ಮಾರಪಲ್ಲಿ_ರಾಯಚೂರು-15;ಯಲ್ಲಮ್ಮಗೇಟ್, ಸೇಡಂ, ಕೋಡ್ಲಾ, ಹಂದರಕಿ;38
3.ಸಿಂದಗಿ–ಕೋಡಂಗಲ್-16;ಇಟಕಾಲ್ ಕ್ರಾಸ್, ಯಾನಾಗುಂದಿ, ಮೇದಕ;17
4;ಮುರ್ಕಿ_ಅವರಾದ_122;ಸೇಡಂ, ರಂಜೋಳ, ಕೋಲ್ಕುಂದಾ, ನಾಚವಾರ, ಹಂದರಕಿ;30
5;ಮುಧೋಳ_ಯಲಗೇರ_127;ಮುಧೋಳ, ಮದನಾ, ವೆಂಕಟಾಪುರ, ಮೋತಕಪಲ್ಲಿ, ಇಟಕಾಲ್ ಕ್ರಾಸ್;24
6;ಯಾನಾಗುಂದಿ_ಚಿತ್ತಾಪುರ-173;ಯಾನಾಗುಂದಿ, ಕಾನಗಡ್ಡಾ, ಕೊತ್ತಪಲ್ಲಿ, ಮುಧೋಳ, ರಂಜೋಳ, ಕೋಡ್ಲಾ, ಬೆನಕನಹಳ್ಳಿ;45
7;ಕುರಕುಂಟಾ_ಸಿದ್ಧಾಪುರ-180;ಕುರಕುಂಟಾ-ಬಟಗೇರಾ(ಬಿ), ಬೂತ್ಪೂರ, ಸಿಂಧನಮಡು, ದುಗನೂರು;39
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.