ADVERTISEMENT

ಕಮಲಾಪುರ | ಕೊಚ್ಚಿ ಹೋದ ರಸ್ತೆ, ಸೇತುವೆ: ಸಂಚಾರ ದುಸ್ತರ

ಮಳೆಗಾಲದಲ್ಲಿ ಸಂಪರ್ಕ ಕಡಿತ: ವಿದ್ಯಾರ್ಥಿಗಳ ಗೋಳು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 5:50 IST
Last Updated 24 ಅಕ್ಟೋಬರ್ 2024, 5:50 IST
ಬೋದನ–ಬಿಲಗುಂದಿ ನಡುವಿನ ಸೇತುವೆ ಹಳ್ಳದ ನೀರಿಗೆ ಕೊಚ್ಚಿ ಹೋಗಿರುವುದು
ಬೋದನ–ಬಿಲಗುಂದಿ ನಡುವಿನ ಸೇತುವೆ ಹಳ್ಳದ ನೀರಿಗೆ ಕೊಚ್ಚಿ ಹೋಗಿರುವುದು   

ಕಮಲಾಪುರ: ತಾಲ್ಲೂಕು ಸೇರಿದಂತೆ ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಪ್ರಮುಖ ರಸ್ತೆ ಹಾಗೂ ಸೇತುವೆಗಳು ಮಳೆಯಿಂದಾದ ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ರಸ್ತೆಗಳಲ್ಲಿನ ಗುಂಡಿಗಳು ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಮಾಡುತ್ತಿವೆ.

ಗೊಬ್ಬರವಾಡಿ– ಹೊನ್ನಳಿ ನಡುವಿನ ಹಳ್ಳದ ಪ್ರವಾಹಕ್ಕೆ ಸೇತುವೆ ಬದಿಯ ರಸ್ತೆ ಕೊಚ್ಚಿಕೊಂಡು ಹೋಗಿದೆ. ಗೋಗಿ (ಕೆ) ಗ್ರಾಮದ ರಸ್ತೆಯ ಮೇಲೆ ಕೆರೆಯಂತೆ ನೀರು ನಿಲ್ಲುತ್ತದೆ. ನವನಿಹಾಳ ಛತ್ರುನಾಯಕ ತಾಂಡಾದ ರಸ್ತೆ ಕೆಸರು ಗದ್ದೆಯಂತಾಗಿದೆ.

ದಸ್ತಾಪುರ ರಸ್ತೆಯಲ್ಲಿ ಗುಂಡಿಗಳೇ ಆವರಿಸಿವೆ. ಶ್ರೀಚಂದ– ಅಪಚಂದ– ಮಡಕಿ ರಸ್ತೆ, ಮುದ್ದಡಗಿಯಿಂದ ಲೇಂಗಟಿ ಕ್ರಾಸ್‌ವರೆಗಿನ ರಸ್ತೆಗಳೂ ದುರಸ್ತಿಗಾಗಿ ಕಾಯುತ್ತಿವೆ. ಕಲಬರಗಿ ನಗರದಿಂದ ಮಾಲಗತ್ತಿ, ಹಾಗರಗಾ ರಸ್ತೆ ಕಿತ್ತು ಹೋಗಿದ್ದು ಸಂಚಾರಕ್ಕೆ ಸಂಚಕಾರ ತಂದೊಡ್ಡಿವೆ.

ADVERTISEMENT

ಚಿಂಚನಸೂರ ಮಹಾಪೂರ ತಾಯಿ, ನರೋಣಾದ ಕ್ಷೇಮಲಿಂಗೇಶ್ವರ ಹಾಗೂ ವಾಗ್ದರಗಿಯ ರಾಚ್ಚೋಟೇಶ್ವರ ದೇವಸ್ಥಾನಗಳಿಗೆ ಜಿಲ್ಲೆಯೂ ಸೇರಿದಂತೆ ನೆರೆಯ ತೆಲಂಗಾಣ, ಮಹಾರಾಷ್ಟ್ರದ ಭಕ್ತರು ಬರುತ್ತಾರೆ. ಜಾತ್ರೆ, ಹುಣ್ಣಿಮೆ, ಅಮಾವಾಸ್ಯೆ ವೇಳೆ ಭಕ್ತರ ಸಂಖ್ಯೆ ದುಪ್ಪಟ್ಟಾಗುತ್ತದೆ. ಆದರೆ, ಈ ಮೂರು ಧಾರ್ಮಿಕ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹದಗೆಟ್ಟಿವೆ. ರಸ್ತೆಯುದ್ದಕ್ಕೂ ಹೊಂಡಗಳು ಬಿದ್ದಿದ್ದು ಜೀವ ಭಯದಲ್ಲಿ ಪ್ರಯಾಣಿಸುವಂತಿದೆ.

‘ಚಿಂಚನಸೂರ ಗ್ರಾಮದಿಂದ ಮಹಾಪೂರ ತಾಯಿ ಮಂದಿರ 3 ಕಿ.ಮೀ. ದೂರದಲ್ಲಿದ್ದರೂ ಗುಂಡಿಗಳಿಂದ ಮುಕ್ತವಾಗಿಲ್ಲ. ಕಮಲಾನಗರದಿಂದ ರಾಚೋಟ್ಟೇಶ್ವರವರೆಗಿನ 10 ಕಿ.ಮೀ. ರಸ್ತೆಯಲ್ಲಿ ಗುಂಡಿಗಳದ್ದೆ ಕಾರುಬಾರು. ಎರಡೂ ಬದಿಯಲ್ಲಿ ಮುಳ್ಳು ಕಂಟಿಗಳು ಆವರಿಸಿದ್ದು, ಹಳ್ಳದ ನೀರು ಕಿರಿದಾದ ಸೇತುವೆ ಮೇಲೆ ಹರಿಯುತ್ತದೆ. ಕಾಲ್ನಡಿಗೆಯಲ್ಲಿ ಹೋಗುವವರೂ ಸರ್ಕಸ್‌ ಮಾಡಬೇಕು. ಇನ್ನು ವಾಹನಗಳ ಸ್ಥಿತಿ ಹೇಳವಂತಿಲ್ಲ’ ಎನ್ನುತ್ತಾರೆ ಸ್ಥಳೀಯರು.

ಬೋದನ ದೇವಿಗುಡಿ, ಕಮಲಾನಗರ, ಬಸವನ ಸಂಗೋಳಗಿ, ಕೆರಮಗಿ, ಗೋಳಾ, ನಿಂಗನವಾಡಿ, ಹೊಡಲ್‌, ಕರಹರಿ, ಸಾವಳಗಿ, ಬೆಳಮಗಿ, ಬೋದನ ರಸ್ತೆಗಳು ಸಹ ಹಾಳಾಗಿವೆ.

ಶಾಸಕರ ನಡುವೆ ನಲುಗಿದ ಬಿಲಗುಂದಿ–ದೇಗಾಂವ: ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಲಗುಂದಿ ಹಾಗೂ ಆಳಂದ ವಿಧಾನಸಭಾ ಕ್ಷೇತ್ರದ ದೇಗಾಂವ ಗ್ರಾಮಗಳ ರಸ್ತೆ ಹಾಗೂ ಸೇತುವೆಗಳು ಇಬ್ಬರು ಶಾಸಕರ ನಡುವೆ ಸಿಲುಕಿ ನಲುಗಿವೆ.

ಕಳೆದ ಎರಡು ವರ್ಷಗಳ ಹಿಂದೆ ಪ್ರವಾಹಕ್ಕೆ ಬಿಲಗುಂದಿ–ದೇಗಾಂವ ನಡುವಿನ ಎರಡು ಸೇತುವೆಗಳು ಕೊಚ್ಚಿ ಹೋಗಿ, ವಾಹನಗಳ ಸಂಚಾರ ಕಡಿತವಾಗಿದೆ. ಕೊಚ್ಚಿ ಹೋದ ಸೇತುವೆಗಳನ್ನು ಕಾಲ್ನಡಿಗೆಯಲ್ಲಿ ದಾಟಬೇಕು. ಕೃಷಿ ಚಟುವಟಿಕೆಗಳಿಗಾಗಿ ಜಮೀನುಗಳಿಗೆ ಹೋಗಲು ರೈತರು ಪರದಾಡುತ್ತಿದ್ದಾರೆ.

‘ದೇಗಾಂವ ಗ್ರಾಮಸ್ಥರಿಗೆ ಜಿಲ್ಲಾ ಕೇಂದ್ರ 25 ಕಿ.ಮೀ. ದೂರದಲ್ಲಿ ಇದ್ದರೂ ಆಳಂದ ಮೂಲಕ ತೆರಳಬೇಕು. ವಿದ್ಯಾರ್ಥಿಗಳಿ‌ಗೂ ನಿತ್ಯ ಸಂಕಷ್ಟ ತಪ್ಪಿಲ್ಲ. ಶಾಸಕರಾದ ಬಸವರಾಜ ಮತ್ತಿಮಡು, ಬಿ.ಆರ್‌. ಪಾಟೀಲ ಅವರಿಗೆ ಮನವಿ ಮಾಡಿದ್ದರೂ ಸ್ಪಂದನೆ ಸಿಕ್ಕಿಲ್ಲ’ ಎನ್ನುತ್ತಾರೆ ಹೋರಾಟಗಾರ ಪಾಂಡುರಂಗ ಮಾವಿನ.

ಕಲ್ಲಹಂಗರಗಾ– ಜಂಬಗಾ ಕ್ರಾಸ್‌ ಸಮೀಪದ ಹೆದ್ದಾರಿ ಬದಿಯ ಕಂದಕ
ಕಮಲಾಪುರದ ನರೋಣಾ– ಚಿಂಚನಸೂರ ರಸ್ತೆಯ ದುಸ್ಥಿತಿ
ಅಭಿವೃದ್ಧಿಪಡಿಸಿದ್ದ ರಸ್ತೆಗಳು ಮಳೆಗೆ ಕಿತ್ತುಹೋಗಿದ್ದು ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು. ಬಿಲಗುಂದಿ– ದೇಗಾಂವ ನಡುವೆ ಸೇತುವೆ ನಿರ್ಮಾಣಕ್ಕೆ ಬಿ.ಆರ್‌.ಪಾಟೀಲ ಜತೆಗೆ ಚರ್ಚಿಸುವೆ
ಬಸವರಾಜ ಮತ್ತಿಮಡು ಕಲಬುರಗಿ ಗ್ರಾಮೀಣ ಶಾಸಕ
ಬಿಲಗುಂದಿ–ದೇಗಾಂವ ನಡುವಿನ ಎರಡು ಸೇತುವೆಗಳ ನಿರ್ಮಾಣಕ್ಕೆ ಹೆಚ್ಚಿನ ಹಣದ ಅವಶ್ಯಕತೆ ಇದೆ. ಹೆಚ್ಚಿನ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು
ಬಿ.ಆರ್‌.ಪಾಟೀಲ ಆಳಂದ ಶಾಸಕ
ಮಳೆಯ ಪ್ರವಾಹಕ್ಕೆ ಚಿಂಚನಸೂರ ಸುತ್ತಲಿನ ಗ್ರಾಮಗಳ ಸೇತುವೆ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಕೂಡಲೇ ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು
ಪಾಂಡುರಂಗ ಎಂ.ಮಾವಿನಕರ್‌ ದಲಿತ ಹಕ್ಕುಗಳ ಜಿಲ್ಲಾ ಸಮಿತಿ ‌ಸಂಚಾಲಕ
‘ರಾಜ್ಯ ಹೆದ್ದಾರಿ ಮೃತ್ಯು ಕೂಪ’
‘ಕಲಬುರಗಿಯಿಂದ ಚಿಂಚನಸೂರ ವರೆಗಿನ ರಾಜ್ಯ ಹೆದ್ದಾರಿ 51 ಮೃತ್ಯು ಕೂಪವಾಗಿದೆ. ಕಲ್ಲಹಂಗರಗಾ ಶಾಲೆಯಿಂದ ಜಂಬಗಾ ಕ್ರಾಸ್‌ವರೆಗಿನ ಹೆದ್ದಾರಿಗೆ ಅಂಟಿಕೊಂಡು ಸುಮಾರು 15 ಅಡಿಯಷ್ಟ ಆಳವಾದ ಕಂದಕಗಳಿವೆ’ ಎನ್ನುತ್ತಾರೆ ಚಿಂಚನಸೂರ ಗ್ರಾಮದ ಮುಖಂಡ ಸುಧಾಮ ಧನ್ನಿ. ‘ಈ ರಸ್ತೆಯಲ್ಲಿ ವಾಹನಗಳು ಸ್ವಲ್ಪವೇ ಆಯತಪ್ಪಿದರೆ ಕಂದಕಕ್ಕೆ ಉರುಳುತ್ತವೆ. ರಾತ್ರಿ ಹೊತ್ತು ಈ ರಸ್ತೆಯಲ್ಲಿ ಸಂಚಾರ ಮಾಡುವಂತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.