ಕಲಬುರ್ಗಿ: ಇಲ್ಲಿನ ಡಿಎಆರ್ ಮೈದಾನದಲ್ಲಿ ಬುಧವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರು ನಡೆಸಿದ ಪರೇಡ್‌ನಲ್ಲಿ ಕೆಲ ರೌಡಿಗಳು ಪಾನಮತ್ತರಾಗಿಯೇ ಬಂದಿದ್ದು ಎಸ್ಪಿ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳನ್ನು ಅಚ್ಚರಿಗೀಡು ಮಾಡಿತು.
ಇದರಿಂದ ಗರಂ ಆದ ಎಸ್ಪಿ, ಇಬ್ಬರು ರೌಡಿಗಳ ವಿರುದ್ಧ ಪ್ರಕರಣ ದಾಖಲಿಸುವಂತೆ ಆಯಾ ಠಾಣೆಗಳ ಇನ್‌ಸ್ಪೆಕ್ಟರ್‌ಗಳಿಗೆ ಸೂಚನೆಯನ್ನೂ ನೀಡಿದರು.
ನಗರದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ98 ರೌಡಿಗಳನ್ನು ಮೈದಾನಕ್ಕೆ ಕರೆಸಲಾಗಿತ್ತು. ಈ ಬಗ್ಗೆ ಮುಂಚೆ ಮಾಹಿತಿಯನ್ನೂ ನೀಡಲಾಗಿತ್ತು. ಆದರೂ, ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಲ್ಲಯ್ಯ ಹಾಗೂ ಚೌಕ ಪೊಲೀಸ್ ಠಾಣೆಯ ದೇವಿದಾಸ ಎಂಬುವವರು ಪಾನಮತ್ತರಾಗಿದ್ದರು. ಎಸ್ಪಿ ಅವರ ಸೂಚನೆ ಮೇರೆಗೆ ಶಂಕಿತ ರೌಡಿಗಳನ್ನು ಸ್ಥಳದಲ್ಲೇ ತಪಾಸಣೆಗೆ ಒಳಪಡಿಸಲಾಯಿತು. ಅದರಲ್ಲಿ ಇಬ್ಬರು ಪಾನಮತ್ತರಾಗಿದ್ದರು.
ಪ್ರತಿಯೊಬ್ಬರ ಹಿನ್ನೆಲೆಯನ್ನು ಖುದ್ದು ಅರಿತುಕೊಂಡ ಎಸ್ಪಿ, ಸ್ನೇಹಿತನಿಗೆ ಸುಪಾರಿ ಕೊಟ್ಟು ವ್ಯಕ್ತಿಯೊಬ್ಬರನ್ನು ಕೊಲ್ಲಿಸಿದ ಆರೋಪದ ಮೇರೆಗೆ ವಿಚಾರಣೆ ಎದುರಿಸುತ್ತಿರುವ ರೌಡಿ ಮೇಲೆ ಇನ್ನಷ್ಟು ಪ್ರಕರಣಗಳನ್ನು ದಾಖಲಿಸಿ ಗಡೀಪಾರು ಮಾಡುವ ಪ್ರಕ್ರಿಯೆ ಆರಂಭಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಒಂದೇ ಗ್ಯಾಂಗ್‌ನವರು ಬೇರೆ ಬೇರೆ ಪ್ರಕರಣಗಳಲ್ಲಿ ಬೇಕಾಗಿದ್ದಾರೆ. ಇವರು ಹೊರಗಡೆ ಇರುವುದರಿಂದ ಸಮಾಜದ ಶಾಂತಿಗೆ ಭಂಗವಾಗುತ್ತದೆ. ಹಾಗಾಗಿ, ಜೈಲಿಗೆ ಕಳಿಸಬೇಕು ಎಂದು ಹೇಳಿದರು.
ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿರುವ ರೌಡಿಯೊಬ್ಬನ ವಿಚಾರಣೆ ನಡೆಸಿದ ಎಸ್ಪಿ, ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದೀಯಾ ಎಂದು ಪ್ರಶ್ನಿಸಿದರು. ‘ಇಲ್ಲ. ಸರ್ಕಾರಕ್ಕೆ ರಾಯಧನ ಪಾವತಿಸಿ ಅನುಮತಿ ಪಡೆದ ಗುತ್ತಿಗೆದಾರರ ಮರಳನ್ನಷ್ಟೇ ಸಾಗಿಸುತ್ತೇನೆ’ ಎಂದು ಆ ರೌಡಿ ಪ್ರತಿಕ್ರಿಯೆ ನೀಡಿದ. ಆತ ಚಾಲನೆ ಮಾಡುವ ಟಿಪ್ಪರ್ ಸಂಖ್ಯೆಯನ್ನು ಪಡೆದುಕೊಂಡ ಅವರು, ಆ ಟಿಪ್ಪರ್ ಮಾಲೀಕರು ಯಾರು ಎಂಬುದನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.