ADVERTISEMENT

ಚಿತ್ತಾಪುರ | ಹಣ ದ್ವಿಗುಣ ಆಮಿಷ: ₹15 ಕೋಟಿ ವಂಚನೆ

ಬಟ್ಟೆ ವ್ಯಾಪಾರಿಯಿಂದ ಮೋಸ– ಅಗತ್ಯ ಕಾನೂನು ಕ್ರಮ: ಲೋಕಾಯುಕ್ತ ಎಸ್‌ಪಿ ಆಂಟೋನಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 12:41 IST
Last Updated 13 ಜೂನ್ 2024, 12:41 IST
ಚಿತ್ತಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಶಹಾಬಾದ್ ನಗರದ ನೀಲಕಂಠ ಅವರು ಬಟ್ಟೆ ವ್ಯಾಪಾರಿಯಿಂದ ಆಗಿರುವ ಮೋಸ, ವಂಚನೆ ಕುರಿತು ಲೋಕಾಯುಕ್ತ ಎಸ್.ಪಿ ಜಾನ್ ಆಂಟೋನಿ ಅವರ ಗಮನಕ್ಕೆ ತಂದರು
ಚಿತ್ತಾಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಶಹಾಬಾದ್ ನಗರದ ನೀಲಕಂಠ ಅವರು ಬಟ್ಟೆ ವ್ಯಾಪಾರಿಯಿಂದ ಆಗಿರುವ ಮೋಸ, ವಂಚನೆ ಕುರಿತು ಲೋಕಾಯುಕ್ತ ಎಸ್.ಪಿ ಜಾನ್ ಆಂಟೋನಿ ಅವರ ಗಮನಕ್ಕೆ ತಂದರು   

ಚಿತ್ತಾಪುರ: ಶಹಾಬಾದ್ ನಗರದಲ್ಲಿ ಹಣ ದ್ವಿಗುಣ ಮಾಡುವುದಾಗಿ ಸಾರ್ವಜನಿಕರಿಂದ ₹15 ಕೋಟಿ ಹಣ ಸಂಗ್ರಹಿಸಿ ಪರಾರಿಯಾಗಿರುವ ಬಟ್ಟೆ ವ್ಯಾಪಾರಿ ವಿರುದ್ಧ ದೂರು ಬಂದಿದೆ. ಮೊದಲು ಶಹಾಬಾದ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಅಗತ್ಯ ತನಿಖೆ ನಡೆಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಜಾನ್ ಆಂಟೋನಿ ಹೇಳಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ಶಹಾಬಾದ್ ನಗರದಿಂದ ಆಗಮಿಸಿದ್ದ ನೀಲಕಂಠ ಹಾಗೂ ಶ್ರೀನಿವಾಸ ಅವರು, ‘ಹಣ ಸಂಗ್ರಹಿಸಿ ಹರಜಿತಸಿಂಗ್ ಅವತಾರಸಿಂಗ್ ಭಾಟಿಯಾ ಎಂಬ ಬಟ್ಟೆ ವ್ಯಾಪಾರಿಯು ಪರಾರಿಯಾಗಿದ್ದಾನೆ’ ಎಂದು ಲೋಕಾಯುಕ್ತ ಅಧೀಕ್ಷಕರ ಗಮನಕ್ಕೆ ತಂದರು.

‘ಬಸ್ ನಿಲ್ದಾಣದಲ್ಲಿರುವ ಶೌಚಾಲಯ ಹಾಗೂ ಸಾರ್ವಜನಿಕ ಸಾಮೂಹಿಕ ಶೌಚಾಲಯಗಳ ಸ್ವಚ್ಛತೆ ಕಾಪಾಡುತ್ತಿಲ್ಲ. ಗಬ್ಬೆದ್ದು ನಾರುತ್ತಿವೆ. ಹಾಗಾಗಿ ಜನರು ಶೌಚಾಲಯ ಕಟ್ಟಡ ಪಕ್ಕದಲ್ಲೆ ಶೌಚಕ್ಕೆ ಕೂಡುತ್ತಿದ್ದಾರೆ. ಗ್ರಾಮೀಣ ಭಾಗದಿಂದ ಬಂದ ಮಹಿಳೆಯರು ತೀವ್ರ ಪರದಾಡುವ ದುಃಸ್ಥಿತಿಯಿದೆ. ಸಂಬಂಧಿತರ ವಿರುದ್ಧ ದೂರು ನೀಡಿ ಐಪಿಸಿ ಕಾಯ್ದೆ ಪ್ರಕಾರ ಏಕೆ ಕ್ರಮ ಕೈಗೊಂಡಿಲ್ಲ’ ಎಂದು ತಹಶೀಲ್ದಾರ್ ಅವರನ್ನು ಲೋಕಾಯುಕ್ತ ಎಸ್‌ಪಿ ಖಾರವಾಗಿ ಪ್ರಶ್ನಿಸಿದರು.

ADVERTISEMENT

‘ಪುರಸಭೆ ಅಧಿಕಾರಿಗೆ ಶೌಚಾಲಯಗಳ ಸ್ವಚ್ಛತೆ ನೋಡಿಕೊಳ್ಳಬೇಕು. ಸ್ವಚ್ಛತೆ ನಿರ್ಲಕ್ಷಿಸುವ ಬಸ್ ನಿಲ್ದಾಣದ ಸಾರಿಗೆ ನಿಯಂತ್ರಕರ ವಿರುದ್ಧ ಐಪಿಸಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಬೇಕು. ತಹಶೀಲ್ದಾರ್ ಎಂದರೆ ತಾಲ್ಲೂಕು ಆಡಳಿತದ ಮುಖ್ಯಸ್ಥರು. ನಿಮ್ಮ ವಿರುದ್ಧ ಕ್ರಮಕ್ಕೆ ವರದಿ ಏಕೆ ಹಾಕಬಾರದು’ ಎಂದು ಅವರು ತಹಶೀಲ್ದಾರ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು.

‘ಪಡಿತರ ಅಂಗಡಿಗಳಲ್ಲಿ ಸರಿಯಾಗಿ ಪಡಿತರ ಆಹಾರ ಧಾನ್ಯ ವಿತರಣೆ ಮಾಡದಿರುವ ದೂರು ಬರುತ್ತಿವೆ. ಖುದ್ದಾಗಿ ಪರಿಶೀಲನೆ ಮಾಡಿದಾಗ ಅಂಗಡಿ ಮಾಲೀಕ ಫಲಾನುಭವಿಗಳ ಬಯೊಮೆಟ್ರಿಕ್ ಪಡೆದು, ಚೀಟಿ ಕೊಟ್ಟು ಆಮೇಲೆ ಬರುವಂತೆ ಹೇಳುತ್ತಿದ್ದಾರೆ. ಎರಡು ದಿನ ಮಾತ್ರ ಅಂಗಡಿ ತೆರೆದು, ಆ ಸಮಯದಲ್ಲಿ ಯಾರು ಬರುತ್ತಾರೊ ಅವರಿಗೆ ಮಾತ್ರ ಆಹಾರ ಧಾನ್ಯ ವಿತರಿಸಿ ಅಂಗಡಿ ಬಂದ್ ಮಾಡುತ್ತಾರೆ. ನೀವೇಕೆ ಪರಿಶೀಲನೆ ಮಾಡುತ್ತಿಲ್ಲ. ಜನರ ಪಡಿತರ ಹಕ್ಕಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ ಮತ್ತು ಜವಾಬ್ದಾರಿ’ ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ಮಂಜುನಾಥ ಕೆ.ಗಂಗಲ್, ಇನ್‌ಸ್ಪೆಕ್ಟರ್‌ ಧ್ರುವತಾರ, ತಹಶೀಲ್ದಾರ್ ಅಮರೇಶ ಬಿರಾದಾರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದ ಉಪಸ್ಥಿತರಿದ್ದರು.

ಬಟ್ಟೆ ವ್ಯಾಪಾರಿಯಿಂದ ಆಗಿರುವ ವಂಚನೆ ಕುರಿತು ದೂರು ನೀಡಲು ತಿಳಿಸಿದ್ದೇವೆ. ಒಂದು ವೇಳೆ ಶಹಾಬಾದ್ ಪೊಲೀಸರು ಪ್ರಕರಣ ದಾಖಲಿಸದಿದ್ದರೆ ಮುಂದೆ ಕಾನೂನು ಕ್ರಮ ನಾವು ಜರುಗಿಸುತ್ತೇವೆ

-ಜಾನ್ ಆಂಟೋನಿ ಕಲಬುರಗಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ

ಕೃಷಿ ಇಲಾಖೆ ಕಚೇರಿಗೆ ದಿಢೀರ್ ಭೇಟಿ

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಜಾನ್ ಆಂಟೋನಿ ಅವರು ಪಟ್ಟಣದಲ್ಲಿರುವ ಕೃಷಿ ಇಲಾಖೆ ಕಚೇರಿ ಹಾಗೂ ರೈತ ಸಂಪರ್ಕ ಕೇಂದ್ರಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೃಷಿ ಇಲಾಖೆಯಿಂದ ರೈತರಿಗೆ ನಿಡುವ ಸೌಲಭ್ಯಗಳ ಕುರಿತು ಅಧಿಕಾರಿ ಸರಿಯಾಗಿ ಲಾಟರಿ ಮಾಡುತ್ತಿಲ್ಲ ಎಂದು ಸ್ಥಳದಲ್ಲಿದ್ದ ರೈತ ರವೀಂದ್ರ ಅವರು ಲೋಕಾಯುಕ್ತ ಅಧಿಕಾರಿಗಳಿಗೆ ಮುಂದೆ ದೂರು ಸಲ್ಲಿಸಿದರು. ‘ರೈತರಿಗೆ ಕೃಷಿ ಯೋಜನೆಯ ಸೌಲಭ್ಯಗಳನ್ನು ಸರಿಯಾಗಿ ಪೂರೈಸಬೇಕು. ನೀರಾವರಿಗೆ ಪೈಪುಗಳು ಸಾವಿರಾರು ಸಂಖ್ಯೆಯಲ್ಲಿ ಕಚೇರಿ ಆವರಣದಲ್ಲಿ ದಾಸ್ತಾನು ಇದ್ದು ಬಿಸಿಲಿನಲ್ಲಿ ಅವು ಹಾಳಾಗುತ್ತಿವೆ. ಆದಷ್ಟು ಬೇಗ ರೈತರಿಗೆ ನೀಡಬೇಕು’ ಎಂದು ಕೃಷಿ ಅಧಿಕಾರಿ ಸಂಜೀವಕುಮಾರ ಮಾನಕರ್ ಅವರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.