ಕಲಬುರಗಿ: ‘ಸರ್ಕಾರದ ಆಡಳಿತದಲ್ಲಿನ ಪಾರದರ್ಶಕತೆ ಹಾಗೂ ಭ್ರಷ್ಟಾಚಾರ ನಿಯಂತ್ರಣ ಮಾಡುವಲ್ಲಿ ಆರ್‌ಟಿಐ ಕಾಯ್ದೆ ಹೆಚ್ಚು ಮಹತ್ವ ಪಡೆದುಕೊಂಡಿದೆ’ ಎಂದು ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದ ವತಿಯಿಂದ ಮಾಹಿತಿ ಹಕ್ಕು ದಿನಾಚರಣೆ ಪ್ರಯುಕ್ತ ಕಲ್ಯಾಣ ಕರ್ನಾಟಕ ವಿಭಾಗ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗಾಗಿ ಹಮ್ಮಿಕೊಂಡ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ವಿಶ್ವದ 140 ದೇಶಗಳಲ್ಲಿ ಆರ್‌ಟಿಐ ಕಾಯ್ದೆ ಜಾರಿಯಲ್ಲಿದೆ. ಸರ್ಕಾರ ಜಾರಿಗೆ ತಂದ ಯೋಜನೆ ಹಾಗೂ ಇಲಾಖೆಗಳ ಅಂಕಿ ಅಂಶಗಳನ್ನು ಹಂಚಿಕೊಳ್ಳಲು ಇದರಲ್ಲಿ ಅವಕಾಶ ನೀಡಿದೆ. ನಿಬಂಧನೆಗೆ ಒಳಪಡುವ ಅಂಶಗಳನ್ನು ಬಿಟ್ಟು ಎಲ್ಲ ಇಲಾಖೆಗಳ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಅಧಿಕಾರಿಗಳು ಹಂಚಿಕೊಳ್ಳಬಹುದುದಾಗಿದೆ’ ಎಂದು ಹೇಳಿದರು.
‘ಪ್ರಥಮ ಬಾರಿಗೆ ಕಲ್ಯಾಣ ಕರ್ನಾಟಕದ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕಾರ್ಯಾಗಾರ ಹಮ್ಮಿಕೊಂಡಿದೆ. ಅಧಿಕಾರಿಗಳು ಮಾಹಿತಿ ನೀಡುವಲ್ಲಿ ಸಂದೇಹ ಇರುವ ಬಗ್ಗೆ ಮುಕ್ತವಾಗಿ ಚರ್ಚಿಸಿ ಉತ್ತರ ಪಡೆಯಬೇಕು. ನಿಮಗೆ ನೀಡಿದ ಅವಧಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸಬೇಕು’ ಎಂದು ಹೇಳಿದರು.
ರಾಜ್ಯ ಮಾಹಿತಿ ಆಯೋಗ ಕಲಬುರಗಿ ಪೀಠದ ಆಯುಕ್ತ ರವೀಂದ್ರ ಢಾಕಪ್ಪ ಮಾತನಾಡಿ, ‘ಸರ್ಕಾರದ ಮಾಹಿತಿ ಜನರ ಮುಂದಿಡಲು ಕಾಯ್ದೆ ಜಾರಿಗೆ ಬಂದಿದೆ. ಪೀಠದ ಮುಂದೆ 4 ರಿಂದ 5 ಸಾವಿರ ವಿಚಾರಣೆಗಳು ನಡೆಸಬೇಕು ಎಂಬ ನಿರ್ಧಾರಕ್ಕೆ ಬರಲಾಯಿತು. 6 ಸಾವಿರ ಅರ್ಜಿಯನ್ನು ವಿಲೇವಾರಿ ಮಾಡಲು ಟಾರ್ಗೆಟ್ ನೀಡಲಾಗಿತ್ತು’ ಎಂದರು.
ಕಲಬುರಗಿ ವಿಭಾಗದ ಪೀಠದಲ್ಲಿ ಹಿಂದಿನ ಅವಧಿಯಲ್ಲಿ ಪ್ರತಿ ವರ್ಷ 2,300 ಅರ್ಜಿ ವಿಲೇವಾರಿ ಮಾಡಲಾಗಿದೆ. ಆದರೆ ಎರಡು ವರ್ಷದ ಅವಧಿಯಲ್ಲಿ 14,600 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 5 ಸಾವಿರ ಅರ್ಜಿ ಬಾಕಿ ಇದೆ. ಇತರೆ ಪೀಠಗಳಿಗೆ ಹೊಲಿಕೆ ಮಾಡಿದರೆ ಶೇ 8ರಿಂದ 9ರಷ್ಟು ಬಾಕಿ ಇರಬಹುದು’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿಧಿ, ಅಪರಾಧ ವಿಭಾಗದ ಡಿಸಿಪಿ ಪ್ರವೀಣ ನಾಯಕ್ ಹಾಜರಿದ್ದರು.
ಕೊಪ್ಪಳ, ರಾಯಚೂರು, ಯಾದಗಿರಿ, ಬೀದರ್, ವಿಜಯನಗರ, ಬಳ್ಳಾರಿ ಜಿಲ್ಲೆಗಳ ಅಧಿಕಾರಿಗಳು ವರ್ಚುವಲ್ ಸಭೆಯಲ್ಲಿ ಭಾಗಿಯಾಗಿದ್ದರು.
ಸಂಪನ್ನೂಲ ವ್ಯಕ್ತಿಗಳಾದ ಕೆಕೆಆರ್‌ಡಿಬಿ ಅಧೀನ ಕಾರ್ಯದರ್ಶಿ ಪ್ರಕಾಶ ಕುದರಿ ಅವರು ಮಾಹಿತಿ ಹಕ್ಕಿನ ಸೆಕ್ಷನ್ 6(1), ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಅವರು 7(1), ಆಳಂದ ತಾಲ್ಲೂಕು ಪಂಚಾಯಿತಿ ಇಒ ಮಾನಪ್ಪ 6(3), ಜೆಸ್ಕಾಂ ಪತ್ರಾಂಕಿತ ವ್ಯವಸ್ಥಾಪಕ ಆಶಪ್ಪ ಪೂಜಾರಿ 7(2), ಎಸ್‌ಪಿ ಕಚೇರಿಯ ಎಎಒ ಮಲ್ಲಿಕಾರ್ಜುನ ಸೂಗುರು ಇತರ ಅಧಿಕಾರಿಗಳು ಮಾಹಿತಿ ಹಕ್ಕು ಕಾಯ್ದೆಗಳ ವಿವಿಧ ಅಧಿನಿಯಮಗಳ ಬಗ್ಗೆ ಉಪನ್ಯಾಸ ನೀಡಿದರು.
ಅಧಿಕಾರಿಗಳು ಹಾಗೂ ಸಿಬ್ಬಂದಿ ಸಂವಾದ ನಡೆಸಿ ತಮಗೆ ಸಂದೇಹ ಇರುವ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.