ಕಲಬುರಗಿ: ಜಿಲ್ಲೆಯಲ್ಲಿ ನಿಯಮ ಉಲ್ಲಂಘಿಸಿ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಮಾಡುವ ಮೂಲಕ ರೈತರಿಗೆ ಮೋಸ ಮಾಡುವ ಮಳಿಗೆಗಳ ಸಂಖ್ಯೆ ಹೆಚ್ಚುತ್ತಿದೆ.
ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 340 ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗಿರುವುದು ಇದನ್ನು ಪ್ರತಿಫಲಿಸುತ್ತದೆ.
ಕೃಷಿ ಪರಿಕರ ಮಾರಾಟ ಮಳಿಗೆಗಳ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ ನಕಲಿ ಬಿತ್ತನೆ ಬೀಜ ಮಾರಾಟ, ಪರವಾನಗಿ ಇಲ್ಲದೆ ಪರಿಕರ ಮಾರಾಟ, ಪರಿಕರಗಳ ಮೇಲೆ ಎಚ್ಚರಿಕೆ ಸಂದೇಶ ಪ್ರಕಟಿಸದಿರುವುದು, ಹೆಚ್ಚಿನ ಬೆಲೆಗೆ ಬಿತ್ತನೆ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟ ಮಾಡಿರುವ ಪ್ರಕರಣಗಳು ವರದಿಯಾಗಿವೆ.
2024–25ರಲ್ಲಿ ನಿಯಮ ಉಲ್ಲಂಘಿಸಿದ 14 ಮಾರಾಟ ಮಳಿಗೆಗಳ ಪರವಾನಗಿ ಅಮಾನತು ಮಾಡಲಾಗಿದೆ. ಜೇವರ್ಗಿ ತಾಲ್ಲೂಕು 6, ಕಲಬುರಗಿ 3, ಅಫಜಲಪುರ 2, ಚಿಂಚೋಳಿ 2 ಹಾಗೂ ಆಳಂದ ತಾಲ್ಲೂಕಿನ ಒಂದು ಮಳಿಗೆಯ ಪರವಾನಗಿ ಅಮಾನತು ಮಾಡಲಾಗಿದೆ. ಮೂರು ವರ್ಷಗಳಲ್ಲಿ 21 ಪ್ರಕರಣಗಳಲ್ಲಿ ₹ 1.04 ಕೋಟಿ ಮೌಲ್ಯದ ಕೃಷಿ ಪರಿಕರ ಜಪ್ತಿ ಮಾಡಲಾಗಿದೆ.
43 ಪ್ರಕರಣಗಳಲ್ಲಿ ಮಾರಾಟ ತಡೆ ಆದೇಶ ನೀಡಲಾಗಿದೆ. ಕಲಬುರಗಿ ತಾಲ್ಲೂಕಿನಲ್ಲಿ ಹೆಚ್ಚು ಮಳಿಗೆಗಳಿಗೆ ಪರಿಕರ ಮಾರಾಟಕ್ಕೆ ತಡೆ ನೀಡಲಾಗಿದೆ. 171 ಮಳಿಗೆಗಳ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ದರಪಟ್ಟಿ ಪ್ರಕಟಿಸದ ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ.
‘ಗ್ರಾಮೀಣ ಭಾಗದಲ್ಲಿ ಕೃಷಿ ಪರಿಕರ ಮಾರಾಟ ಮಳಿಗೆಯವರು ನಿರಂತರವಾಗಿ ಮೋಸ ಮಾಡುತ್ತಾರೆ. ಸಾಲ ಮಾಡಿ ಹೆಚ್ಚಿನ ಬೆಲೆಗೆ ಕಳಪೆ ಕೃಷಿ ಪರಿಕರ ಖರೀದಿಸಿ ನಿರೀಕ್ಷಿತ ಫಸಲು ಬಾರದೆ ಸಾಲ ತೀರಿಸಲಾಗದೆ ಪರದಾಡುತ್ತೇವೆ. ಅಧಿಕಾರಿಗಳು ಗ್ರಾಮೀಣ ಪ್ರದೇಶದ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ರೈತರು ಒತ್ತಾಯಿಸುತ್ತಾರೆ.
ಜಿಲ್ಲೆಯಲ್ಲಿ ಕಳಪೆ ಬಿತ್ತನೆ ಬೀಜದ ಹಾವಳಿ ಹೆಚ್ಚಾಗಿದೆ. ಸಾಲ ಮಾಡಿ ಬಿತ್ತನೆ ಬೀಜ ತೆಗೆದುಕೊಂಡು ಹೋಗಿ ಹಾಕಿದ ರೈತರು ಮೊಳಕೆ ಬಾರದೆ ಪರದಾಡುತ್ತಿದ್ದಾರೆ. ಅಧಿಕಾರಿಗಳು ಅಂಥ ಮಳಿಗೆಗಳ ಪರವಾನಗಿ ರದ್ದು ಮಾಡಬೇಕುನಾಗೇಂದ್ರಪ್ಪ ಥಂಬೆ ಜಿಲ್ಲಾ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.