ಕಲಬುರ್ಗಿ: ಸಾಹಿತ್ಯ ಸಮ್ಮೇಳನದ ಎಲ್ಲ ಪೂರ್ವಸಿದ್ಧತೆ ಕಾರ್ಯಗಳನ್ನು ಫೆ. 3ರೊಳಗೆ ಮುಗಿಸಿಕೊಂಡು, ಕಾರ್ಯಾನುಷ್ಠಾನಕ್ಕೆ ಲಭ್ಯವಿರುವ ಬಗ್ಗೆ ಖುದ್ದಾಗಿ ಖಚಿತಪಡಿಸಿಕೊಳ್ಳಬೇಕು ಎಂದು ಸಮ್ಮೇಳನದ ಸ್ವಾಗತ ಸಮಿತಿಯ ಸಂಚಾಲಕರಾಗಿರುವ ಜಿಲ್ಲಾಧಿಕಾರಿ ಶರತ್ ಬಿ. ಅವರು ವಿವಿಧ ಸಮಿತಿಗಳ ಕಾರ್ಯಾಧ್ಯಕ್ಷರಿಗೆ ಸೂಚನೆ ನೀಡಿದರು.
ಸಮ್ಮೇಳನಕ್ಕೆ ಇನ್ನೇನು ಒಂದು ವಾರ ಬಾಕಿ ಇದೆ. ಎಲ್ಲಾ ಸಮಿತಿಗಳು ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಸಮ್ಮೇಳನದ ಹಿಂದಿನ ದಿನದವರೆಗೆ ಕಾಯಬಾರದು ಎಂದರು.
ನಗರವನ್ಲಉ ಮದುವಣಗಿತ್ತಿಯಂತೆ ಸುಂದರಗೊಳಿಸಬೇಕು. ರಸ್ತೆ ಬದಿಯ ಗೋಡೆಗಳ ಮತ್ತು ಚಿತ್ರ, ಬರಹಗಳ ಕಾರ್ಯ ಬೇಗ ಮುಗಿಸಬೇಕು. ಸ್ವಾಗತ ಕಮಾನು ನಿರ್ಮಿಸಿ ಎಲ್ಲೆಡೆ ಕನ್ನಡ ದ್ವಜಗಳು ರಾರಾಜಿಸಬೇಕು. ಧೂಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ನಗರ ಸೌಂದರ್ಯೀಕರಣವಾದ ನಂತರ ಯಾವುದೇ ಸಂಘಟನೆಗಳು ಪೋಸ್ಟರ್, ಭಿತ್ತಿ ಪತ್ರಗಳನ್ನು ನಗರದ ಪ್ರಮುಖ ವೃತ್ತ-ರಸ್ತೆ ಬದಿ ಗೋಡೆಗಳ ಮೇಲೆ ಅಂಟಿಸದಂತೆ ನಿಗಾ ವಹಿಸಬೇಕು ಎಂದು ಅಲಂಕಾರ ಸಮಿತಿಯ ಅಧಿಕಾರಿಗಳಿಗೆ ಸೂಚಿಸಿದರು.
ವಿಶ್ವವಿದ್ಯಾಲಯ ಅವರಣದಲ್ಲಿ ಸಮ್ಮೇಳನದ ನೀರಿಗಾಗಿ ನಾಳೆಯೇ ಬೋರ್‌ವೆಲ್ ಕೊರೆಯಿಸಬೇಕು. ಎಲ್ಲಿಯೂ ಪ್ಲಾಸ್ಟಿಕ್ ವಸ್ತುಗಳನ್ನು ಬಳಕೆಯಾಗದಂತೆ ಎಚ್ಚರ ವಹಿಸಬೇಕು. ಗಣ್ಯರು ಮತ್ತು ನೊಂದಣಿ ಪ್ರತಿನಿಧಿಗಳಿಗೆ ಶಿಷ್ಟಾಚಾರದಂತೆ ಸೂಕ್ತ ವಸತಿ ಕಲ್ಪಿಸಬೇಕು ಎಂದರು.
ಆರೋಗ್ಯ ಸಮಿತಿ: ಸಮ್ಮೇಳನಕ್ಕೆ ಬರುವವರ ಸಂಪೂರ್ಣ ಆರೋಗ್ಯದ ಜವಾಬ್ದಾರಿ ಆರೋಗ್ಯ ಸಮಿತಿ ಮೇಲಿದ್ದು, ಹತ್ತಿರದ ಆಸ್ಪತ್ರೆಗಳೊಂದಿಗೆ ಸಮನ್ವಯತೆ ಸಾಧಿಸಿ ಇದನ್ನು ಮಾಡಬೇಕು. ಸಮ್ಮೇಳನದ ವಾಣಿಜ್ಯ ಮಳಿಗೆಯಲ್ಲಿ ಅರೋಗ್ಯ ಸೇವೆ ನೀಡಲು ಮುಂದೆ ಬಂದಿರುವ 6 ಖಾಸಗಿ ಅಸ್ಪತ್ರೆಗಳು ಸ್ಟಾಲ್ ತೆರೆಯಲು ಅವಕಾಶ ಮಾಡಿಕೊಡಬೇಕು.
ಆರ್ಟ್ ಗ್ಯಾಲರಿಯಲ್ಲಿ ಲೇಖಕರ ಮತ್ತು ಓದುಗರ ನಡುವೆ ಕುಶಲೋಪರಿ ವಿಚಾರಿಸಲು ಲೇಖಕರ ಲಾಂಜ್ ಮಾಡಬೇಕು ಮತ್ತು ವಿವಿಧ ಇಲಾಖೆಗಳ ಜನಪರ ಸಾಧನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನ ಮಳಿಗೆಗೂ ಅವಕಾಶ ಕಲ್ಪಿಸಬೇಕು ಎಂದರು.
ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಅಗತ್ಯ ಪೌರಕಾರ್ಮಿಕ ಸಿಬ್ಬಂದಿ ನಿಯೋಜಿಸಬೇಕು. ವಿವಿಧ ಸಮಿತಿಗಳಿಗೆ ಅವಶ್ಯವಿರುವ ಮಾನವ ಸಂಪನ್ಮೂಲ ಒದಗಿಸಲು ಸ್ವಯಂ ಸೇವಕರ ಸಮಿತಿ ಸಜ್ಜಾಗಿರಬೇಕು ಎಂದು ಷರತ್ ತಿಳಿಸಿದರು.
ಸ್ಮರಣ ಸಂಚಿಕೆ ಸಿದ್ಧಪಡಿಸುವುದು, ಗೋಷ್ಠಿ ಏರ್ಪಾಡು, ಗೋಷ್ಠಿಯಲ್ಲಿ ಸ್ಮರಣ ಸಂಚಿಕೆ ವಿತರಣೆ, ಸನ್ಮಾನ ಕಾರ್ಯಗಳು ಕನ್ನಡ ಸಾಹಿತ್ಯ ಪರಿಷತ್ತಿನ ಜವಾಬ್ದಾರಿಯಾಗಿದೆ. ಈ ಸಂಬಂಧ ಗೋಷ್ಠಿವಾರು ಪಟ್ಟಿ ಸಲ್ಲಿಸಬೇಕು ತಿಳಿಸಿದರು.
ಮುಖ್ಯ ಹಾಗೂ ಸಮಾನಾಂತರ ವೇದಿಕೆಗಳಲ್ಲಿ ಕಾರ್ಯಕ್ರಮಗಳು ಸುಸೂತ್ರವಾಗಿ ಜರುಗಲು ಪ್ರತ್ಯೇಕ ತಂಡಗಳನ್ನು ರಚಿಸಬೇಕು. ಶಾಲು, ಸ್ಮರಣಿಕೆ ವಿತರಣೆ, ವೀಲ್ ಚೇರ್ ವ್ಯವಸ್ಥೆ, ಗಣ್ಯರನ್ನು ವೇದಿಕೆಗೆ ಕರೆದುಕೊಂಡು ಬರುವುದು ಹೀಗೆ ಪ್ರತಿಯೊಂದಕ್ಕೂ ಸಿಬ್ಬಂದಿ ನಿಯೋಜಿಸಿ ಅಗತ್ಯ ಶಿಷ್ಟಾಚಾರ ಪಾಲನೆ ಮಾಡಬೇಕು ಎಂದು ತಿಳಿಸಿದರು.
ಕಲಿಗಳನ್ನು ಆಹ್ವಾನಿಸಿ: ನಗರದ ಬಸವೇಶ್ವರ ಆಸ್ಪತ್ರೆ ಮತ್ತು ಚಂದ್ರಶೇಖರ್ ಪಾಟೀಲ ಆಂಗ್ಲ ಮಾಧ್ಯಮ ಶಾಲೆಯ ಮಧ್ಯ ಸ್ಥಳದಿಂದ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ ನಡೆಯಲಿದ್ದು, ನಾಡಿನ ಸಂಸ್ಕೃತಿ ಬಿಂಬಿಸುವ ಸುಮಾರು 60 ಕಲಾತಂಡಗಳು ಭಾಗವಹಿಸಲಿವೆ. ಇದರಲ್ಲಿ ಜಿಲ್ಲೆಯ ಎಲ್ಲ ಕನ್ನಡಪರ ಸಂಘಟನೆಗಳನ್ನು ಭಾಗವಹಿಸುವಂತೆ ಅವರನ್ನು ಆಮಂತ್ರಿಸಬೇಕು ಎಂದು ಮೆರವಣಿಗೆ ಸಮಿತಿಯವರಿಗೆ ಸೂಚಿಸಲಾಯಿತು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಪಿ.ರಾಜಾ ಮಾತನಾಡಿ, ಹೊರಗಿನಿಂದ 18,000 ಜನ ಪ್ರತಿನಿಧಿಗಳಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಇದಲ್ಲದೆ ಗಣ್ಯರು, ಕೇಂದ್ರ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ವಿವಿಧ ಜಿಲ್ಲೆಯ ಜಿಲ್ಲಾ ಅಧ್ಯಕ್ಷರು ಆಗಮಿಸಲಿದ್ದಾರೆ. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ತಂಗಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಂಕರ್ ವಣಿಕ್ಯಾಳ್, ಪ್ರೊಬೇಷನರಿ ಐ.ಎ.ಎಸ್.ಅಧಿಕಾರಿ ಗೋಪಾಲಕೃಷ್ಣ ಬಿ. ಸೇರಿದಂತೆ ಸಮ್ಮೇಳನದ ವಿವಿಧ ಸಮಿತಿಗಳ ಕಾರ್ಯಾಧ್ಯಕ್ಷರು, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.