ಕಲಬುರ್ಗಿ: ‘ಮಾರ್ಕ್ಸ್‌ವಾದವು ಮಾತ್ರ ಇಂದಿನ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯ. ಈ ರಾಜಕೀಯ ಸಿದ್ಧಾಂತದ ಆಧಾರದ ಮೇಲೆ, ರಷ್ಯಾ ಕ್ರಾಂತಿಯ ಪಾಠಗಳೊಂದಿಗೆ ಭಾರತದಲ್ಲಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ ಕ್ರಾಂತಿಯನ್ನು ಸಾಕಾರಗೊಳಿಸಬೇಕಿದೆ’ ಎಂದು ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ದಿವಾಕರ್ ಆಶಿಸಿದರು.
1917ರಲ್ಲಿ ನವೆಂಬರ್ 7ರಿಂದ 17ರವರೆಗೆ ನಡೆದ ರಷ್ಯಾದ ಸಮಾಜವಾದಿ ಕ್ರಾಂತಿಗೆ 102ನೇ ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ನಗರದಲ್ಲಿ ಪಕ್ಷದ ವತಿಯಿಂದ ಗುರುವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿದರು.
‘ಎಸ್‌ಯುಸಿಐ ಸಂಸ್ಥಾಪಕ ಶಿವದಾಸ್ ಘೋಷ್ ಅವರ ಸಮಾಜವಾದಿ ರಾಷ್ಟ್ರ ಸ್ಥಾಪಿಸುವ ಕನಸು ನೆರವೇರಿಸಲು ರಷ್ಯಾ ಕ್ರಾಂತಿಯ ಪಾಠಗಳನ್ನು ಕಲಿಯುವ ಅವಶ್ಯಕತೆ ಇದೆ. ಅಮೋಘ ಯಶಸ್ಸು ಸಾಧಿಸಿದ ರಷ್ಯಾದ ಕ್ರಾಂತಿ ಜೋಸೆಫ್ ಸ್ಟಾಲಿನ್ ಅವರ ನಂತರ ವಿನಾಶದ ಹಾದಿ ಹಿಡಿಯಿತು. ಅತ್ಯಂತ ಹಿಂದುಳಿದ ರಷ್ಯಾದಲ್ಲಿ, ಮಾರ್ಕ್ಸ್‌ವಾದಿ ನಾಯಕ ವಿ.ಐ. ಲೆನಿನ್ ಆ ದೇಶಕ್ಕೆ ಅನುಗುಣವಾಗಿ ಮಾರ್ಕ್ಸ್‌ವಾದವನ್ನು ಅಳವಡಿಸಿ, ಸಮಾಜವಾದಿ ಕ್ರಾಂತಿ ನೆರವೇರಿಸಿದರು. ನಂತರ ಬಂದ ಸ್ಟಾಲಿನ್ ಹಿಟ್ಲರ್ ಅಟ್ಟಹಾಸವನ್ನು ಕೊನೆಗಾಣಿಸಿದರು. ಇಡೀ ಜಗತ್ತನ್ನು ಹಿಟ್ಲರನ ಫ್ಯಾಸಿವಾದದಿಂದ ಉಳಿಸಿದ ಶ್ರೇಯ ಸ್ಟಾಲಿನ್ ನೇತೃತ್ವದ ರಷ್ಯಾಗೆ ಸಲ್ಲಬೇಕು’ ಎಂದರು.
ಸ್ಥಳೀಯ ಸಮಿತಿ ಕಾರ್ಯದರ್ಶಿ ಮಹೇಶ್ ಎಸ್.ಬಿ. ಮಾತನಾಡಿ, ‘ಇಂದು ದೇಶದ ಅನೇಕ ಸಮಸ್ಯೆಗಳ ವಿರುದ್ಧ ದೇಶವ್ಯಾಪಿ ಹೋರಾಟ ಜರುಗಬೇಕಾಗಿದೆ. ರಷ್ಯಾದಲ್ಲಿ ನಡೆದ ಕ್ರಾಂತಿಯು, ಸಮಾಜವಾದಿ ರಾಷ್ಟ್ರವನ್ನು ಸ್ಥಾಪಿಸುವ ನಮ್ಮೆಲ್ಲರ ಹೋರಾಟಕ್ಕ ಸ್ಪೂರ್ತಿ ನೀಡುತ್ತದೆ. ಈ ದಿನವನ್ನು ನೆನೆಯುವುದ ಬರೀ ಆಚರಣೆ ಅಲ್ಲ. ಬದಲಾಗಿ ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಬಲಿಷ್ಠ ಹೋರಾಟ ಕಟ್ಟಲು ಸ್ಪೂರ್ತಿ ಪಡೆಯುವ ದಿನ’ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಕ್ಷದ ವಾಡಿ ಸಮಿತಿ ಕಾರ್ಯದರ್ಶಿ ಆರ್.ಕೆ.ವೀರಭದ್ರಪ್ಪ ಮಾತನಾಡಿ, ‘ಬಂಡವಾಳಶಾಹಿ ವರ್ಗವು ಇಂದು ಜನರ ಬಂಡವಾಳಶಾಹಿ ವಿರೋಧಿ ಹೋರಾಟಗಳನ್ನು ಹತ್ತಿಕ್ಕಲು ಸರ್ವ ಪ್ರಯತ್ನ ನಡೆಸುತ್ತಿದೆ. ಜಾತಿ, ಮತ, ಧರ್ಮಗಳ ಆಧಾರದ ಮೇಲೆ ಜನರ ಒಗ್ಗಟ್ಟನ್ನು ಮುರಿಯುತ್ತಿದೆ. ಬಂಡವಾಳಶಾಹಿಗಳ ಹಾಗೂ ಅವರ ಕೈಗೊಂಬೆ ರಾಜಕಾರಣಿಗಳ ಈ ಹುನ್ನಾರವನ್ನು ಮುರಿಯಬೇಕಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.