ADVERTISEMENT

ಕಲಬುರಗಿ | ಸಂಗೊಳ್ಳಿ ರಾಯಣ್ಣ ಕಟ್ಟೆ ಧ್ವಂಸ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಜನವರಿ 2024, 15:58 IST
Last Updated 23 ಜನವರಿ 2024, 15:58 IST

ಕಲಬುರಗಿ: ‘ತಾಲ್ಲೂಕಿನ ಜಂಬಗಾ (ಬಿ) ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣನವರ ಭಾವಚಿತ್ರ ಇಟ್ಟ ಕಟ್ಟೆ ಧ್ವಂಸ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಕನ್ನಡ ಸೇನೆಯ ಕಲಬುರಗಿ ನಗರ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ ಒತ್ತಾಯಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಳೆದ ವರ್ಷದ ಆಗಸ್ಟ್‌ನಲ್ಲಿ ಗ್ರಾಮದಲ್ಲಿ ಕಟ್ಟೆ ನಿರ್ಮಿಸಲಾಗಿತ್ತು. ಕೆಲ ಕಿಡಿಗೇಡಿಗಳು ಕಟ್ಟೆಯನ್ನು ಬೀಳಿಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಗ್ರಾಮದ ಮುಖಂಡರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಪೊಲೀಸರು ಕಟ್ಟೆ ನಿರ್ಮಿಸಲು ಸರ್ಕಾರಿ ಜಾಗ ನೀಡುವುದಾಗಿ ರಾಜಿ ಮಾಡಿಸಿದ್ದರು. ಆದರೆ ಜಾಗ ತೋರಿಸಿಲ್ಲ’ ಎಂದು ದೂರಿದರು.

ಹಲವು ಬಾರಿ ಮನವಿ ಮಾಡಿದರೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಪಂದಿಸಿಲ್ಲ. ಆದ್ದರಿಂದ ಅದೇ ಜಾಗದಲ್ಲಿ ಮತ್ತೆ ಕಟ್ಟೆ ನಿರ್ಮಿಸಲಾಗಿದೆ. ಗ್ರಾ.ಪಂ ಅಧ್ಯಕ್ಷರ ನೇತೃತ್ವದಲ್ಲಿ ಗ್ರಾಮಸಭೆ ನಡೆಸಿ ಕಟ್ಟೆ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂಬ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೂ ಕಟ್ಟೆ ತೆರವುಗೊಳಿಸುವಂತೆ ಪಿಡಿಒ ನೋಟಿಸ್ ಅಂಟಿಸಿದ್ದಾರೆ. ಆದ್ದರಿಂದ ಪಿಡಿಒ ಅವರನ್ನು ವಜಾ ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಅಂಬಾರಾಯ ಸಾಹುಕಾರ, ಸೂರ್ಯಕಾಂತ ಬಾಲಖೇಡ, ರಮೇಶ ಕನಗೊಂಡ, ರಾಹುಲ್ ಕಾಂಬಳೆ, ರವಿ, ಅಶೋಕ ಧೋನಿ ಹಾಗೂ ಲಿಂಗರಾಜು ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.