ಕಲಬುರಗಿ: ಹೊಸ ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಮಣದ ಮುನ್ನ ದಿನವಾದ ಭಾನುವಾರ ನಗರದ ವಿವಿಧ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಕಂಡುಬಂತು.
ಬೆಳಿಗ್ಗೆಯಿಂದಲೇ ನಗರದ ಕಣ್ಣಿ ಮಾರುಕಟ್ಟೆ, ಸುಪರ್ ಮಾರುಕಟ್ಟೆಯಲ್ಲಿ ಸಾಮಗ್ರಿಗಳನ್ನು ಖರೀದಿಸಲು ಜಿಲ್ಲೆಯ ಇತರೆ ಭಾಗದಿಂದ ಬಂದ ಜನ ಕಿಕ್ಕಿರಿದು ಸೇರಿದ್ದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಭಾನುವಾರ ಮಹಿಳೆಯರು ಭೋಗಿಯನ್ನು ಆಚರಿಸಿದರು. ಭೋಗಿಯ ಮಾರನೇ ದಿನವೇ ಹಬ್ಬ ಆಚರಿಸುವುದು ಸಂಪ್ರದಾಯ. ಹಾಗಾಗಿ, ಹಬ್ಬದ ಮುನ್ನಾದಿನವೇ ಮಾರುಕಟ್ಟೆಗೆ ಹೆಚ್ಚು ಜನ ಬಂದು ವಸ್ತುಗಳನ್ನು ಖರೀದಿಸಿದರು.
ಎಳ್ಳುಗಳ ಪ್ಯಾಕೆಟ್ ಮಾರಾಟ:
₹ 20ರಿಂದ ಪ್ರಾರಂಭವಾಗಿ ₹ 150ರ ದೊಡ್ಡ ಪ್ಯಾಕೆಟ್‌ವರೆಗೂ ವಿವಿಧ ನಮೂನೆಯ, ಬಣ್ಣಬಣ್ಣದ ಎಳ್ಳುಗಳ ಪ್ಯಾಕೆಟ್‌ಗಳು ಮಾರಾಟವಾದವು. ಎಳ್ಳು–ಬೆಲ್ಲ ಮಿಶ್ರಣದ ಪ್ಯಾಕೆಟ್‌ಗಳ ಜತೆಗೆ ಕಬ್ಬು, ಬಾಳಿದಿಂಡು, ಬಾರಿಹಣ್ಣು, ಸುಲಗಾಯಿ, ಅಕ್ಕಿ, ಎಳ್ಳಿನ ಉಂಡೆ, ಹೂ, ಹಣ್ಣು, ಬಟ್ಟೆ, ಪೂಜಾ ಸಾಮಗ್ರಿಗಳನ್ನು ಜನರು ಖರೀದಿ ಮಾಡಿದರು.
ಹಬ್ಬಕ್ಕೆ ಬೆಲೆ ಏರಿಕೆ:
ಪ್ರತಿವಾರ ₹ 20ಕ್ಕೆ ಮಾರಾಟವಾಗುತ್ತಿದ್ದ ಕಟ್ಟು ಕಬ್ಬಿಗೆ ₹ 30ಕ್ಕೆ ಮಾರಾಟವಾಯಿತು. ಬಾಳೆಗಿಡ ಎರಡಕ್ಕೆ ಚಿಕ್ಕದು ₹ 50ಕ್ಕೆ ಎರಡು ಮಾರಾಟವಾದರೆ, ದೊಡ್ಡವು ₹ 150ರವರೆಗೆ ಮಾರಾಟವಾಗಿವೆ. ಕಳೆದ ಬಾರೆಹಣ್ಣು ಕೆಜಿಗೆ ₹ 50ಕ್ಕೆ ಮಾರಾಟವಾದರೆ ಈ ವಾರ ₹ 60ರಿಂದ ₹ 70ಕ್ಕೆ ಮಾರಾಟವಾಯಿತು.
ಸುಲಗಾಯಿ ಕಟ್ಟಿಗೆ ₹ 20ರಿಂದ ₹ 30ವರೆಗೆ ಮಾರಾಟವಾಯಿತು. ಮಾರುಕಟ್ಟೆಯಲ್ಲಿ ಹೆಚ್ಚಿನ ಜನರು ಬಂದಿರುವುದರಿಂದ ತರಕಾರಿಗಳು ಹಾಗೂ ವಿವಿಧ ಹಣ್ಣುಗಳು ದುಬಾರಿ ಬೆಲೆ ಮಾರಾಟವಾದವು. ಸೇಬು ಕೆಜಿಗೆ ₹ 100, ಮೂಸಂಬಿ– ₹ 80, ಬಾಳೆಹಣ್ಣು ಡಜನ್‌ಗೆ ₹ 50, ಪೂಜಾಗೆ ಬೇಕಾಗುವ ಸಾಮಗ್ರಿಗಳು ಹೆಚ್ಚಿನ ದರಕ್ಕೆ ಮಾರಾಟವಾದವು.
ಸಂಕ್ರಾಂತಿ ವಿಶೇಷ:
ದಕ್ಷಿಣಾಯಣದಿಂದ ಉತ್ತರಾಯಣ ಗೋಳಕ್ಕೆ ಸಂಚರಿಸುವ ಸೂರ್ಯನು ಸಂಕ್ರಾಂತಿ ದಿನ ಮಕರ ರಾಶಿ ಪ್ರವೇಶಿಸುತ್ತಾನೆ. ಖಗೋಳದಲ್ಲಿ ಸಂಭವಿಸುವ ಈ ಮಹಾ ಪರಿವರ್ತನೆಯನ್ನು ಮಕರ ಸಂಕ್ರಮಣ ಎಂದು ಹೆಸರಿಸಿದ್ದಾರೆ. ಇದೇ ಆಡು ಭಾಷೆಯಲ್ಲಿ ಸಂಕ್ರಾಂತಿ ಹಬ್ಬ ಎಂದು ಕರೆಯಲಾಗುತ್ತದೆ.
ಹಬ್ಬದ ಮುನ್ನ ದಿನಾ ಮಹಿಳೆಯರು ಎಣ್ಣೆ ಸ್ಥಾನವನ್ನು ಮಾಡಿ ದೇವರನ್ನು ಪೂಜೆ ಮಾಡುತ್ತಾರೆ. ಇದನ್ನು ಹೆಣ್ಣು ಮಕ್ಕಳ ಭೋಗಿ ಎಂದು ಕರೆಯಲಾಗುತ್ತದೆ. ಹಬ್ಬ ದಿನ ಪುರುಷರು ಎಣ್ಣೆ ಸ್ನಾನ ಮಾಡಿ ಪುಣ್ಯಕ್ಷೇತ್ರಗಳಿಗೆ ಹೋಗಿ ಪೂಜೆ ಸಲ್ಲಿಸುವುದು ವಾಡಿಕೆ.
ಸಂಕ್ರಾಂತಿ ಅಂಗವಾಗಿ ಎಳ್ಳು–ಬೆಲ್ಲ ವಿನಿಮಯ ಮಾಡಿಕೊಂಡು ಶುಭಾಶಯ ಕೋರುವುದು ಸಂಪ್ರದಾಯ. ವರ್ಷದ ಮೊದಲ ಹಬ್ಬದಂತೆಯೇ ನಾವು ಪರಿವರ್ತನೆ ಆಗಬೇಕು ಎಂಬ ಸಂದೇಶ ಇದೆ ಎನ್ನುತ್ತಾರೆ ಹಿರಿಯರು.
ನಗರ ಹಾಗೂ ಹಳ್ಳಿಗಳಲ್ಲಿ ಎಣ್ಣೆಸ್ನಾನ ಮಾಡಿ, ತಮ್ಮ ಜಾನುವಾರುಗಳಿಗೂ ಮೈ ತೊಳೆದು ಪೂಜೆ ಮಾಡುವುದು ವಾಡಿಕೆ. ಬೈಕ್, ಆಟೊ, ಕಾರು ಮುಂತಾದ ವಾಹನ ಇಟ್ಟು ಕೊಂಡವರು ಬೆಳಿಗ್ಗೆಯೇ ಅವುಗಳನ್ನು ಸ್ವಚ್ಛಗೊಳಿಸಿ, ಪೂಜೆ ಮಾಡುತ್ತಾರೆ. ವಿವಿಧ ಪುಣ್ಯಕ್ಷೇತ್ರ, ತೀರ್ಥಕ್ಷೇತ್ರ, ನದಿಗಳಿಗೆ ಹೋಗಿ ಸ್ನಾನ ಮಾಡುವುದು ಹಬ್ಬದ ವಿಶೇಷವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.