ADVERTISEMENT

ತಾಂತ್ರಿಕ ಯುಗಕ್ಕೆ ಸಂಸ್ಕೃತವೇ ಭೂಷಣ: ಡಾ.ಶರಣಬಸವಪ್ಪ ಅಪ್ಪ ಅಭಿಮತ

ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಡಾ.ಶರಣಬಸವಪ್ಪ ಅಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 6:34 IST
Last Updated 13 ಏಪ್ರಿಲ್ 2021, 6:34 IST
ಸಂಸ್ಕೃತ ಭಾರತೀ ಕಲಬುರಗಿ ವತಿಯಿಂದ ಆನ್‌ಲೈನ್‌ನಲ್ಲಿ ಆಯೋಜಿಸಿದ್ದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಡಾ.ಶರಣಬಸವಪ್ಪ ಅಪ್ಪ ಮಾತನಾಡಿದರು
ಸಂಸ್ಕೃತ ಭಾರತೀ ಕಲಬುರಗಿ ವತಿಯಿಂದ ಆನ್‌ಲೈನ್‌ನಲ್ಲಿ ಆಯೋಜಿಸಿದ್ದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಡಾ.ಶರಣಬಸವಪ್ಪ ಅಪ್ಪ ಮಾತನಾಡಿದರು   

ಕಲಬುರ್ಗಿ: ‘ಸಂಸ್ಕೃತ ಭಾಷೆಯು ಹಿಂದಿನ ದಶಕಗಳಿಗಿಂತ ಇಂದಿನ ಕೌಶಲಯುತ ಹಾಗೂ ತಾಂತ್ರಿಕ ಯುಗದಲ್ಲಿ ಹೆಚ್ಚು ಪ್ರಸ್ತುತ’ ಎಂದು ಮಹಾದಾಸೋಹ ಪೀಠಾಧಿಪತಿ ಡಾ.ಶರಣಬಸವಪ್ಪ ಅಪ್ಪ ಅಭಿಪ್ರಾಯಪಟ್ಟರು.

ಸಂಸ್ಕೃತ ಭಾರತೀ ಕಲಬುರಗಿ ವತಿಯಿಂದ ಏ 1ರಿಂದ 11ರವರೆಗೆ ಗೋವಿಂದ ಶಿಕ್ಷಕರ ಮೂಲಕ ಆನ್‌ಲೈನ್‌ನಲ್ಲಿ ಆಯೋಜಿಸಿದ್ದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಭಾಷಣ ಮಾಡಿದರು.

‘ಇಂದು ಸಂಸ್ಕೃತ ಭಾಷೆಯು ವಿದೇಶಗಳಲ್ಲಿಯೂ ಹೆಚ್ಚು ಅಧ್ಯಯನ ಮಾಡುತ್ತಿರುವ ಭಾಷೆಯಾಗಿದೆ. ಕಂಪ್ಯೂಟರ್ ಮತ್ತು ಮಷಿನರಿ ಜ್ಞಾನ ಅಧ್ಯಯನಕ್ಕೆ ಸೂಕ್ತವಾದ ಭಾಷೆಯಾಗಿದೆ. ಇದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಸಮೇತ ಅನೇಕ ವಿದೇಶಿ ತಾಂತ್ರಿಕ ಅಧ್ಯಯನ ನಿರತ ಸಂಸ್ಥೆಗಳು ಕಂಡುಕೊಂಡಿವೆ’ ಎಂದರು.

ADVERTISEMENT

‘ಸಂಸ್ಕೃತ ಭಾಷೆಯ ಪುನರುಜ್ಜೀವನಕ್ಕಾಗಿ ಸಂಸ್ಕೃತ ಸಂಭಾಷಣಾ ಶಿಬಿರ ಇತ್ಯಾದಿ ಹತ್ತು ಹಲವು ವಿಧಗಳ ಮೂಲಕ ಜನಮಾನಸಕ್ಕೆ ವ್ಯವಹಾರ ಭಾಷೆಯ ರೂಪದಲ್ಲಿ ಕಲಿಸುವುದರಿಂದ ಹಿಡಿದು ಉನ್ನತ ಗುಣಮಟ್ಟದ ಸಂಸ್ಕೃತ ಭಾಷಾ ಶಿಕ್ಷಣ ಕಾರ್ಯದಲ್ಲಿ ನಿರತ ಗೋವಿಂದರಂಥ ಅನೇಕ ಸ್ವಯಂ ಸೇವಕ ಶಿಕ್ಷಕರ, ಕಾರ್ಯಕರ್ತರ ಕೊಡುಗೆ ಇದೆ’ ಎಂದರು.

ಗೋವಿಂದ ಶಿಕ್ಷಕರು ಶಿಬಿರದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ, ‘ಈ ಆನ್‌ಲೈನ್ ಶಿಬಿರದಲ್ಲಿ ಆಯುರ್ವೇದ ವೈದ್ಯರು, ಸಾಫ್ಟ್‌ ವೇರ್ ಎಂಜಿನಿಯರ್, ತಂತ್ರಜ್ಞರು, ಕೃಷಿಕರು, ಗೋ ಸೇವಕರು, ಅರಣ್ಯ ಸಂರಕ್ಷಣಾಧಿಕಾರಿ, ಬಾಲಕ ಬಾಲಕಿಯರು, ಗೃಹಿಣಿಯರು ಸೇರಿ ಪ್ರತಿದಿನ ಅಂದಾಜು 30 ಶಿಬಿರಾರ್ಥಿಗಳು ಪಾಲ್ಗೊಂಡರು. ಸರಳ ಸಂಸ್ಕೃತ ಸಂಭಾಷಣೆಯನ್ನು ಕಲಿತರು’ ಎಂದರು.

ಸಂಸ್ಕೃತ ಭಾರತೀ ಉತ್ತರ ಕರ್ನಾಟಕ ಪ್ರಾಂತ ಸಂಘಟನಾ ಮಂತ್ರಿ ಲಕ್ಷ್ಮೀ ನಾರಾಯಣ ಭುವನಕೋಟೆ ಮಾತನಾಡಿದರು.‌ ಶಿಬಿರಾರ್ಥಿಗಳಾದ ಸಂತೋಷ ರಾಠೋಡ ಸಂಸ್ಕೃತದಲ್ಲಿ ಕಾರ್ಯಕ್ರಮ ನಿರೂಪಿಸಿದರು. ಸಾಹೇಬಗೌಡ ಅತಥಿಗಳ ಪರಿಚಯ ಮಾಡಿಕೊಟ್ಟರು. ನಿತಿನ್ ಸಂಸ್ಕೃತ ಗೀತೆ ಹಾಡಿದರು, ಡಾ.ನಿರ್ಮಲಾ ಮತ್ತು ಅಕ್ಷತಾ ಕೋವಿಡ್-19 ಕುರಿತು ಸಂಸ್ಕೃತ ಸಂವಾದ ನಡೆಸಿದರು. ಶರಣು ಮಠಪತಿ ಸಂಸ್ಕೃತದಲ್ಲಿ ದಿನಚರಿ ವಿವರಿಸಿದರು.

ಚಂದ್ರಿಕಾ, ಶ್ವೇತಾ ಮತ್ತು ವಿಜಯಾ ಅವರು ಯುಗಾದಿ ತಯ್ಯಾರಿ ಮತ್ತು ಆಚರಣೆ ಕುರಿತು ಸಂಸ್ಕೃತ ಸಂವಾದ ನಿರೂಪಿಸಿದರು. ನಿತಿನ್ ತಿವಾರಿ, ಸಾಹೇಬಗೌಡ ಶಿಬಿರದ ಅನುಭವ ಕಥನ ನಿರೂಪಿಸಿದರು.

ಡಾ.ಶಿವಾಚಾರ್ಯ ಸ್ವಾಮಿಗಳು, ಕೊರೊನಾ ಸಮಯದಲ್ಲಿ ತಂತ್ರಜ್ಞಾನ ಬಳಸಿ ಸಂಸ್ಕೃತ ಭಾರತಿಯು ಮಹಾರಾಷ್ಟ್ರದಲ್ಲಿ 2500ಕ್ಕಿಂತ ಹೆಚ್ಚಿನ ಶಿಬಿರಾರ್ಥಿಗಳಿಗೆ ಸಂಭಾಷಣೆ ಶಿಬಿರ ನಡೆಸಿ, ಅವರಲ್ಲಿ ಹೆಚ್ಚಿನ ಆಸಕ್ತ ಶಿಬಿರಾರ್ಥಿಗಳಿಗೆ ಪ್ರಭೋದನ‌ ವರ್ಗ, ಸಂಭಾಷಣೆ ಶಿಬಿರ ಪ್ರಚಾಲನ ವರ್ಗಗಳೆಲ್ಲವನ್ನು ಆನ್ ಲೈನ್ ಮೂಲಕ ನಡೆಸಿ 200ಕ್ಕಿಂತ ಹೆಚ್ಚಿನ ಸಂಸ್ಕೃತ ಸಂಭಾಷಣಾ ಶಿಕ್ಷಕರ ನಿರ್ಮಾಣ ಮಾಡಿದ ಕುರಿತು ತಿಳಿಸಿದರು.

ಸಂಸ್ಕೃತ ಭಾರತೀಯ ಪೂರ್ಣ ಕಾಲಿಕ ಸೇವೆ ಮಾಡುವ ಮತ್ತು ಕರ್ನಾಟಕ ಉತ್ತರ ಪ್ರಾಂತ ಶಿಕ್ಷಣ ಪ್ರಮುಖ ಶಿವರುದ್ರಯ್ಯ ಮಠಪತಿ ಮತ್ತು ಕಲಬುರ್ಗಿ ವಿಭಾಗ ಸಂಯೋಜಕರಾದ ವೀರೇಶ ಶಿರೂರ, ರವಿ ಸಂಗಶಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.