ADVERTISEMENT

ದುಶ್ಚಟ ತಡೆಗೆ ಯುವಕರು ರಾಯಭಾರಿಯಾಗಲಿ

ಸರ್ವಜ್ಞ ಕಾಲೇಜಿನಲ್ಲಿ ಮಾದಕ ವಸ್ತುಗಳ ವಿರೋಧಿ ಸಪ್ತಾಹ: ಡಾ.ಸಿ.ಆರ್.ಚಂದ್ರಶೇಖರ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 6:05 IST
Last Updated 10 ಜುಲೈ 2024, 6:05 IST
ಕಲಬುರಗಿಯ ಸರ್ವಜ್ಞ ಕಾಲೇಜಿನಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ಸಪ್ತಾಹದಲ್ಲಿ ಖ್ಯಾತ ಮನೋವೈದ್ಯ ಡಾ.ಸಿ.ಆರ್‌. ಚಂದ್ರಶೇಖರ ಮಾತನಾಡಿದರು –ಪ್ರಜಾವಾಣಿ ಚಿತ್ರ
ಕಲಬುರಗಿಯ ಸರ್ವಜ್ಞ ಕಾಲೇಜಿನಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ಸಪ್ತಾಹದಲ್ಲಿ ಖ್ಯಾತ ಮನೋವೈದ್ಯ ಡಾ.ಸಿ.ಆರ್‌. ಚಂದ್ರಶೇಖರ ಮಾತನಾಡಿದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ತಂಬಾಕಿನಿಂದ ಹಿಡಿದು ಗ್ಯಾಜೆಟ್‌ವರೆಗಿನ ದುಶ್ಚಟಗಳ ತಡೆಗೆ ಯುವಕರು ಮತ್ತು ವಿದ್ಯಾರ್ಥಿಗಳು ರಾಯಭಾರಿಗಳಾಗಬೇಕು’ ಎಂದು ಖ್ಯಾತ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ ಹೇಳಿದರು.

ನಗರದ ಸರ್ವಜ್ಞ ಪಿಯು ವಿಜ್ಞಾನ ಕಾಲೇಜಿನಲ್ಲಿ ಜಸ್ಟಿಸ್ ಶಿವರಾಜ ವಿ. ಪಾಟೀಲ ಫೌಂಡೇಷನ್ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮಂಗಳವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ಸಪ್ತಾಹದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

‘ಧೂಮಪಾನ, ಮದ್ಯಪಾನ, ಗುಟ್ಕಾ, ಬ್ರೌನ್ ಶುಗರ್, ಕೊಕೇನ್‌, ಗಾಂಜಾ ಸೇವನೆಯು ದೇಹದ ಸ್ವಾಸ್ಥ್ಯದ ಜತೆಗೆ ವ್ಯಕ್ತಿಯ ಸಾಮಾಜಿಕ ಮತ್ತು ಕೌಟುಂಬಿಕ ಬದುಕನ್ನು ಹಾಳು ಮಾಡುತ್ತದೆ. ಜೀವನ, ಬುದ್ಧಿ, ಕಣ್ಣು, ದೇಹ ಮತ್ತು ಮನಸಿಗೆ ಘಾಸಿ ಮಾಡುವ ಮಾದಕ ಪದಾರ್ಥಗಳ ಸೇವನೆಯಿಂದ ದೂರ ಇರಬೇಕು’ ಎಂದರು.

ADVERTISEMENT

‘90 ಎಂಎಲ್‌ ಮದ್ಯಪಾನ ಮಾಡಿದರೆ ಮೆದುಳಿನಲ್ಲಿನ 180 ಸೆಲ್‌ಗಳು ಸಾಯುತ್ತವೆ. ಮದ್ಯಪಾನದ ಪ್ರಮಾಣ ಹೆಚ್ಚಾದಷ್ಟು ಅದರ ಗಂಭೀರತೆಯೂ ದುಪ್ಪಟಾಗುತ್ತದೆ. ಹೀಗಾಗಿ ನಾಲಿಗೆ ರುಚಿಗೆ ಮಾರು ಹೋಗಿ ದೇಹದ ಬೊಜ್ಜಿಗೆ ಕಾರಣವಾಗುವ ಪದಾರ್ಥಗಳು ಹಾಗೂ ಪಾನಿಗಳನ್ನು ಸೇವಿಸಬಾರದು’ ಎಂದು ಸಲಹೆ ನೀಡಿದರು.

‘ಕುತೂಹಲ, ಜೊತೆಯಲ್ಲಿದ್ದವರ ಒತ್ತಾಯ, ಸಾಮಾಜಿಕ ಮಾಧ್ಯಮಗಳ ಪ್ರಭಾವ, ಅನುಕರಣೆಯಿಂದ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆಗಳು ದಟ್ಟವಾಗಿವೆ’ ಎಂದು ಎಚ್ಚರಿಸಿದರು. 

ಪೊಲೀಸ್ ಕಮಿಷನರ್ ಚೇತನ್ ಆರ್. ಮಾತನಾಡಿ, ‘ಸಣ್ಣ–ಸಣ್ಣ ನಗರಗಳಲ್ಲಿಯೂ ಡ್ರಗ್ಸ್ ಜಾಲ ಹಬ್ಬುತ್ತಿದ್ದು, ಚಾಕೊಲೇಟ್‌ ರೂಪದಲ್ಲಿ ಫ್ರೀಯಾಗಿ ತಿನ್ನಲು ಕೊಟ್ಟು ಡ್ರಗ್ಸ್‌ ವ್ಯಸನಿಗಳನ್ನಾಗಿ ಮಾಡುತ್ತಾರೆ. ಹೀಗಾಗಿ, ವಿದ್ಯಾರ್ಥಿಗಳು ಅಂತಹ ತಿನಿಸುಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು’ ಎಂದರು.

‘ಡ್ರಗ್ಸ್‌ನಿಂದ ಯುವ ಪೀಳಿಗೆಯನ್ನು ರಕ್ಷಿಸಲು ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು. ವಿದ್ಯಾರ್ಥಿಗಳು ಸಹ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣವೇ ನಿಮ್ಮ ಉಪನ್ಯಾಸಕರು ಅಥವಾ ಪೋಷಕರ ಗಮನಕ್ಕೆ ತರಬೇಕು. ಎಲ್ಲಿ, ಯಾವ ರೀತಿಯಲ್ಲಿ ದುಶ್ಚಟಗಳಿಗೆ ಸಿಲುಕಿಕೊಳ್ಳುತ್ತಾರೆ ಎಂಬುದು ಗೊತ್ತಾಗಲ್ಲ’ ಎಂದು ಎಚ್ಚರಿಸಿದರು.

‘ನಮ್ಮ ಯುವಕರಿಗೆ ಉತ್ತಮ ಶಿಕ್ಷಣ ಕೊಟ್ಟು, ಸರಿಯಾದ ವೇದಿಕೆ ಕಲ್ಪಿಸಿದರೆ ಜಾಗತಿಕ ಮಟ್ಟದಲ್ಲಿ ಮಿಂಚುತ್ತಾರೆ. ವಿದ್ಯಾರ್ಥಿಗಳು ಸಹ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ದೃಢತೆಯಿಂದ ಅಧ್ಯಯನ ಮಾಡಬೇಕು’ ಎಂದು ‘ಪ್ರಜಾವಾಣಿ’ಯ ಸುಭಾಷಿತದಲ್ಲಿ ಪ್ರಕಟವಾದ ಉದ್ಯಮಿ ಅಜೀಂ ಪ್ರೇಮ್‌ಜಿ ಅವರ ಉಕ್ತಿಯನ್ನು ಓದಿ ಸ್ಫೂರ್ತಿದಾಯಕ ಮಾತುಗಳನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಎಂ. ರಡ್ಡಿ, ಸಂಸ್ಥೆಯ ಸಂಸ್ಥಾಪಕ ಪ್ರೊ.ಚನ್ನಾರಡ್ಡಿ ಪಾಟೀಲ, ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಬಾಬುರಾವ ಯಡ್ರಾಮಿ ಉಪಸ್ಥಿತರಿದ್ದರು.

ಕಲಬುರಗಿಯ ಸರ್ವಜ್ಞ ಕಾಲೇಜಿನಲ್ಲಿ ಮಂಗಳವಾರ ನಡೆದ ಅಂತರರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ಸಪ್ತಾಹದಲ್ಲಿ ಪೊಲೀಸ್‌ ಕಮಿಷನರ್ ಚೇತನ್‌ ಆರ್‌. ಮಾತನಾಡಿದರು. ಗಣ್ಯರು ಉಪಸ್ಥಿತರಿದ್ದರು –ಪ್ರಜಾವಾಣಿ ಚಿತ್ರ

‘ಜಾಗತಿಕ ಮಟ್ಟದಲ್ಲಿ ಮಿಂಚದ ಯುವಕರು

’ ‘ದೇಶವು ಶೇ 70ಕ್ಕೂ ಹೆಚ್ಚು ಯುವಕರಿಂದ ಕೂಡಿದೆ. ಕರ್ನಾಟಕ ಗುಜರಾತ್ ರಾಜಸ್ಥಾನ ಮಹಾರಾಷ್ಟ್ರ ರಾಜ್ಯಗಳಷ್ಟು ಭೂಭಾಗ ಹೊಂದಿರುವ ಐರೋಪ್ಯ ಒಕ್ಕಟದಲ್ಲಿನ ರಾಷ್ಟ್ರಗಳು ಫುಟ್‌ಬಾಲ್ ಟೆನಿಸ್‌ನಂತಹ ಕ್ರೀಡೆಗಳಲ್ಲಿ ಮಿಂಚುತ್ತಿವೆ. ನೊಬೆಲ್‌ ಪ್ರಶಸ್ತಿಗೂ ಭಾಜನರಾಗುತ್ತಿವೆ. ಭಾರತೀಯ ಯುವಕರು ಅವರಿಗಿಂತ ಬುದ್ಧಿವಂತರಾಗಿದ್ದರೂ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿಲ್ಲ’ ಎಂದು ಪೊಲೀಸ್ ಕಮಿಷನರ್ ಚೇತನ್ ಆರ್. ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.