ADVERTISEMENT

ಶಿಕ್ಷಣದಿಂದ ವಂಚಿತರಾಗುತ್ತಿರುವ ಮಾಂಗ್‌ ಗಾರುಡಿ ಸಮುದಾಯದ ನೂರಾರು ಮಕ್ಕಳು

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 7:36 IST
Last Updated 12 ಜುಲೈ 2024, 7:36 IST
ಕಲಬುರಗಿಯ ಬಾಪುನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆ ಕಟ್ಟಡದ ದುಸ್ಥಿತಿ
ಕಲಬುರಗಿಯ ಬಾಪುನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆ ಕಟ್ಟಡದ ದುಸ್ಥಿತಿ   

ಕಲಬುರಗಿ: ಶಾಲೆ ಕಟ್ಟಡ ಶಿಥಿಲಗೊಂಡ ಕಾರಣ ಮಾಂಗ್‌ ಗಾರುಡಿ ಸಮುದಾಯದ ಜನ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆ. ಪ್ರತಿದಿನ ಶಾಲೆಯಲ್ಲಿ ಇರಬೇಕಾದ ನೂರಾರು ಮಕ್ಕಳು ಗಲ್ಲಿಗಲ್ಲಿಗಳಲ್ಲಿ ಚೌಕಾಬಾರ, ಕುಂಟಾಬಿಲ್ಲೆ, ಕ್ರಿಕೆಟ್‌ ಸೇರಿದಂತೆ ಇನ್ನಿತರ ಆಟ ಆಡುತ್ತಾ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

ನಗರದ ಜಿಲ್ಲಾ ಆಸ್ಪತ್ರೆ ಎದುರಿನ ಬಾಪುನಗರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆ ಇದೆ. 1ರಿಂದ 7ನೇ ತರಗತಿವರೆಗಿನ ಈ ಶಾಲೆಯಲ್ಲಿ 130 ಮಕ್ಕಳ ದಾಖಲಾತಿ ಇದ್ದರೂ ಬಹುತೇಕ ಮಕ್ಕಳು ಶಾಲೆಗೆ ಹಾಜರಾಗದೆ ಕಾಲೊನಿಯ ಬೀದಿಗಳಲ್ಲಿ ಕಾಲ ಕಳೆಯುತ್ತಾರೆ. ಭಯ–ಭೀತಿಯಲ್ಲಿ ಮಕ್ಕಳು ಪಾಠ ಕಲಿಯುವ ಬದಲು ಹೊರಗಡೆಯಾದರೂ ಆಟ ಆಡಿಕೊಂಡು ಇರಲಿ ಎಂದು ಪಾಲಕರು ಕೂಡ ಸುಮ್ಮನಾಗುತ್ತಾರೆ.

ಶಾಲೆಯ ಕಟ್ಟಡ 55 ವರ್ಷಗಳಷ್ಟು ಹಳೆಯದಾದ ಕಾರಣ ಒಟ್ಟು 11 ಕೊಠಡಿಗಳಲ್ಲಿ 6 ಶಿಥಿಲವಾಗಿವೆ. ಕೆಲ ಕೋಣೆಗಳ ಚಾವಣಿ ಪದರು ಕುಸಿದು ಬಿದ್ದಿದೆ. ರಾಡ್‌ಗಳು ಜೋತು ಬಿದ್ದಿವೆ. ಬಾವಲಿಗಳ ವಾಸಸ್ಥಾನವಾಗಿ ಪರಿವರ್ತನೆಯಾಗಿದ್ದು, ವಿಪರೀತ ದುರ್ವಾಸನೆ ಬೀರುತ್ತದೆ. ಮಕ್ಕಳು ಅಪ್ಪಿತಪ್ಪಿ ಈ ಪಾಳುಬಿದ್ದ ಕೊಠಡಿಗಳಲ್ಲಿ ಕಾಲಿಟ್ಟರೆ ಅಪಾಯ ತಪ್ಪಿದ್ದಲ್ಲ. ಇಂತಹ ವಾತಾವರಣದಲ್ಲಿಯೇ ಇರುವ ಬಾಕಿ 1 ಕೋಣೆ ಕಾರ್ಯಾಲಯವಾದರೆ, 4 ಕೊಠಡಿಗಳಲ್ಲಿ ತರಗತಿಗಳಲ್ಲಷ್ಟೇ ನಡೆಸುವುದು ಅನಿವಾರ್ಯವಾಗಿದೆ.

ADVERTISEMENT

1 ಮತ್ತು 2ನೇ ತರಗತಿ ಮಕ್ಕಳು ಒಂದೇ ಕೊಠಡಿಯಲ್ಲಿ ಅಭ್ಯಾಸ ಮಾಡುತ್ತಾರೆ. ಅದರಂತೆ 3 ಮತ್ತು 4ನೇ ತರಗತಿ, 5 ಮತ್ತು 6ನೇ ತರಗತಿ ಮಕ್ಕಳನ್ನು ತಲಾ ಒಂದೊಂದು ಕೋಣೆಯಲ್ಲಿ ಕೂಡಿಸಿ ಶಿಕ್ಷಕರು ಪಾಠ ಮಾಡುತ್ತಾರೆ. 6ನೇ ತರಗತಿಯ ಮಕ್ಕಳಿಗೆ ಬೋಧನೆ ಮಾಡುವಾಗ 5ನೇ ತರಗತಿ ಮಕ್ಕಳಿಗೆ ತೊಂದರೆ ಆಗುವುದು ಸಹಜ. 7ನೇ ತರಗತಿಗೆ ಮಾತ್ರ ಪ್ರತ್ಯೇಕ ಕೊಠಡಿ ಇದೆ. ಕಟ್ಟಡ ಶಿಥಿಲಗೊಂಡಿರುವುದರಿಂದ ಈ ಎಲ್ಲ ತರಗತಿಗಳ ವಿದ್ಯಾರ್ಥಿಗಳು ಆತಂಕದಲ್ಲೇ ಪಾಠ ಆಲಿಸುವಂತಾಗಿದೆ.

ಅಲೆಮಾರಿ ಜನ

‘ಅಲೆಮಾರಿ ಮತ್ತು ಅರೆಅಲೆಮಾರಿಯ ಮಾಂಗ್‌ ಗಾರುಡಿ(ಪರಿಶಿಷ್ಟ ಜಾತಿ) ಸಮುದಾಯದ ಜನರಾದ ನಾವು ಪ್ಲಾಸ್ಟಿಕ್ ಆಯುವುದು, ಎಮ್ಮೆ ಕೂದಲು ಬೋಳಿಸುವುದು, ಕುದುರೆಗಳಿಗೆ ನಾಲಾ ಕಟ್ಟುವುದು, ತರಕಾರಿ ಹೆಚ್ಚುವ ಈಳಿಗೆ ಮಾರಾಟ ಸೇರಿದಂತೆ ಇನ್ನಿತರ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ನಮ್ಮ ಮಕ್ಕಳಾದರೂ ಒಳ್ಳೆಯ ಶಿಕ್ಷಣ ಪಡೆದರೆ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಅನುಕೂಲವಾಗುತ್ತದೆ. ಆದರೆ, ಅವರ ಶಿಕ್ಷಣಕ್ಕೆ ಶಿಥಿಲ ಕಟ್ಟಡ ಅಡ್ಡಿಯಾಗಿದೆ’ ಎಂದು ಪಾಲಕರು ಹೇಳುತ್ತಾರೆ.

ಕಲಬುರಗಿಯ ಬಾಪುನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಒಂದೇ ಕೊಠಡಿಯಲ್ಲಿ 5 ಮತ್ತು 6ನೇ ತರಗತಿಗಳ ಪಾಠ ನಡೆಯುತ್ತಿರುವುದು

ಶಾಲೆ ಕಟ್ಟಡ ಹಳೆಯದಾದ ಕಾರಣ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯವಾಗುತ್ತಿದೆ. ಹೊಸ ಕಟ್ಟಡ ನಿರ್ಮಿಸಿ ನಮ್ಮ ಸಮುದಾಯದ ಶಿಕ್ಷಣಕ್ಕೆ ಅನುಕೂಲ ಮಾಡಿಕೊಡಬೇಕು.

–ಗಾಯಿತ್ರಿ ಮುಖೇಶ ನಿವಾಸಿ

ಬಾಪುನಗರದಲ್ಲಿ ಶಿಥಿಲಗೊಂಡಿರುವ ಸರ್ಕಾರಿ ಮರಾಠಿ ಶಾಲೆ ವಿದ್ಯಾರ್ಥಿಗಳು ಕೂಡಲು ಕಟ್ಟಡ ಯೋಗ್ಯವಾಗಿಲ್ಲ. ಶಾಲೆಯ ಹೊಸ ಕಟ್ಟಡ ನಿರ್ಮಾಣಕ್ಕೆ ಕೆಕೆಆರ್‌ಡಿಬಿಯಿಂದ ₹1 ಕೋಟಿ ನೀಡಬೇಕು.

–ಸುಧೀರ್‌ ಎಸ್‌.ಉಪಾಧ್ಯಾಯ ಕಾರ್ಯದರ್ಶಿ ಮಾಂಗ್‌ ಗಾರುಡಿ ಅಭಿವೃದ್ಧಿ ಸೇವಾ ಸಂಘ

‘ಕನ್ನಡ ಮಾಧ್ಯಮ ಶಾಲೆ ಮಾಡಿ’

‘ಬಾಪುನಗರ ಶಾಲೆಯಲ್ಲಿ 7ನೇ ತರಗತಿಯವರೆಗೆ ಮರಾಠಿ ಮಾಧ್ಯಮದಲ್ಲಿ ಕಲಿಯುವ ಮಕ್ಕಳು ಮುಂದಿನ ಶಿಕ್ಷಣಕ್ಕೆ ಮರಾಠಿ ಮಾಧ್ಯಮದ ಶಾಲೆಯನ್ನೇ ಹುಡುಕಿಕೊಂಡು ಹೋಗಬೇಕಾಗುತ್ತದೆ. ಬೇರೆ ಮಾಧ್ಯಮದ ಶಾಲೆ ಆಯ್ಕೆ ಮಾಡಿಕೊಂಡರೆ ಇತರೆ ಮಕ್ಕಳೊಂದಿಗೆ ಸ್ಪರ್ಧೆ ಮಾಡಲು ಸಾಧ್ಯವಾಗುವುದಿಲ್ಲ. ಅಲ್ಲದೆ ನಮ್ಮ ಗಲ್ಲಿ ಬಿಟ್ಟು ಹೊರಗಡೆ ಹೋದರೆ ಕನ್ನಡದಲ್ಲೇ ವ್ಯವಹಾರ ಮಾಡಬೇಕು. ಹಾಗಾಗಿ ಕನ್ನಡ ಮಾಧ್ಯಮ ಶಾಲೆ ಮಾಡಿ ಅದರಲ್ಲಿ ಒಂದು ವಿಷಯ ಮರಾಠಿ ಇರಲಿ’ ಎಂದು ಮಾಂಗ್‌ ಗಾರುಡಿ ಅಭಿವೃದ್ಧಿ ಸೇವಾ ಸಂಘದ ಕಾರ್ಯದರ್ಶಿ ಸುಧೀರ್‌ ಎಸ್‌.ಉಪಾಧ್ಯಾಯ ಮತ್ತು ಅಹಿಂದ ಜನಪರ ವೇದಿಕೆಯ ಕಾರ್ಮಿಕ ಘಟಕದ ಅಧ್ಯಕ್ಷ ರಮೇಶ ಇ.ಉಪಾಧ್ಯಾಯ ಒತ್ತಾಯಿಸುತ್ತಾರೆ.

‘ಹೊಸ ಕಟ್ಟಡಕ್ಕೆ ಶಿಫಾರಸು’

‘ಬಾಪುನಗರ ಮರಾಠಿ ಶಾಲೆಗೆ ಗುರುವಾರ ಸಿಆರ್‌ಪಿ ಜೊತೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕಟ್ಟಡ ಹಳೆಯದಾದ ಕಾರಣ ಶಿಥಿಲವಾಗಿದ್ದು ಇಡೀ ಕಟ್ಟಡ ನೆಲಸಮಗೊಳಿಸಿ ಹೊಸದಾಗಿ ನಿರ್ಮಿಸಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಶಾಸಕರ ಸೂಚನೆಯಂತೆ ಅನುದಾನಕ್ಕಾಗಿ ಕೆಕೆಆರ್‌ಡಿಬಿಗೆ ಮನವಿ ಸಲ್ಲಿಸುತ್ತೇವೆ’ ಎಂದು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕನ್ನಡ ಮಾಧ್ಯಮಕ್ಕೆ ಮರಾಠಿ ಶಾಲೆ ಪರಿವರ್ತನೆಯ ಬೇಡಿಕೆಗೆ ಸಂಬಂಧಿಸಿದಂತೆ ಎಸ್‌ಡಿಎಂಸಿ ಅಧ್ಯಕ್ಷರು ಸದಸ್ಯರು ಮತ್ತು ಪಾಲಕರ ಸಭೆ ಕರೆದು ಚರ್ಚಿಸಿ ಮುಂದಿನ ನಿರ್ಣಯ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.