ADVERTISEMENT

ಚಿತ್ತಾಪುರ | ಶಾಲೆ ಕಟ್ಟಡ ಶಿಥಿಲ: ಆತಂಕ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 4:32 IST
Last Updated 24 ಸೆಪ್ಟೆಂಬರ್ 2024, 4:32 IST
ಚಿತ್ತಾಪುರ ಪಟ್ಟಣದಲ್ಲಿರುವ ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಕಟ್ಟಡ ಶಿಥಿಲಗೊಂಡು ಛತ್ ಸಿಮೆಂಟ್ ಉದುರಿ ಬೀಳುತ್ತಿದೆ.
ಚಿತ್ತಾಪುರ ಪಟ್ಟಣದಲ್ಲಿರುವ ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಕಟ್ಟಡ ಶಿಥಿಲಗೊಂಡು ಛತ್ ಸಿಮೆಂಟ್ ಉದುರಿ ಬೀಳುತ್ತಿದೆ.   

ಚಿತ್ತಾಪುರ: ಪಟ್ಟಣದ ಬಸ್ ನಿಲ್ದಾಣದ ಎದುರಿರುವ ಸರ್ಕಾರಿ ಬಾಲಕರ ಪ್ರೌಢ ಶಾಲೆ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದೆ. ಕಟ್ಟಡದ ಮೇಲ್ಚಾವಣಿಯ ಸಿಮೆಂಟ್ ಚಕ್ಕಳಿ ಉದುರುತ್ತಿದ್ದು. ಶಾಲೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪ್ರಾಣ ಭೀತಿ ಕಾಡುತ್ತಿದೆ.

ಪ್ರಸ್ತುತ ಶಾಲೆಯಲ್ಲಿ ಕನ್ನಡ ಮತ್ತು ಉರ್ದು ಮಾಧ್ಯಮದ ಒಟ್ಟು 518 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಸತತ ಮಳೆಯಿಂದ ಶಾಲಾ ಕಟ್ಟಡದ ಎಲ್ಲ ತರಗತಿ ಕೊಠಡಿಗಳು ಸೋರುತ್ತಿವೆ. ವಿದ್ಯಾರ್ಥಿಗಳ ಕಲಿಕೆಗೆ ಮತ್ತು ಶಿಕ್ಷಕರು ಪಾಠ ಮಾಡಲು ಸಮಸ್ಯೆಯಾಗುತ್ತಿದೆ. ಇಡೀ ಶಾಲೆ ಕಟ್ಟಡ ಮಳೆ ನೀರಿನಿಂದ ತೇವಗೊಂಡಿದೆ. ಕಚೇರಿ ಕಟ್ಟಡವು ಸೋರಿಕೆಯಾಗಿ ಮಳೆ ನೀರಿನ ತೇವಾಂಶದಿಂದ ವಿದ್ಯುತ್ ಮೀಟರಿನಿಂದ ವಿದ್ಯುತ್ ಗೋಡೆಯೊಳಗೆ ಹರಡಿದರೆ ಹೇಗೆ? ವಿದ್ಯಾರ್ಥಿಗಳ ಪ್ರಾಣಕ್ಕೆ ಸಂಚಕಾರ ಉಂಟಾದರೆ ಹೇಗೆ? ಎನ್ನುವ ಭಯ, ಆತಂಕ ಶಿಕ್ಷಕರನ್ನು ಕಾಡುತ್ತಿದೆ.

ಸರ್ಕಾರಿ ಬಾಲಕರ ಪ್ರೌಢ ಶಾಲೆಯ ಕನ್ನಡ ಮತ್ತು ಉರ್ದು ಮಾಧ್ಯಮದ ವಿದ್ಯಾರ್ಥಿಗಳ ಜತೆಗೆ ಸರ್ಕಾರಿ‌ ಕನ್ಯಾ ಪ್ರೌಢ ಶಾಲೆ ಮತ್ತು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಒಟ್ಟು 500 ವಿದ್ಯಾರ್ಥಿಗಳ ತರಗತಿಗಳು ಇದೇ ಕಟ್ಟಡದಲ್ಲಿ ನಡೆಯುತ್ತಿವೆ. ಒಟ್ಟು 1000 ವಿದ್ಯಾರ್ಥಿಗಳು ಶಿಥಿಲಗೊಂಡಿರುವ ಶಾಲಾ ಕಟ್ಟಡದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.

ADVERTISEMENT

ಶಾಲಾ ಆವರಣದೊಳಗೆ ಮಳೆ ನೀರು ನಿಂತಿವೆ. ಶೈಕ್ಷಣಿಕ ಚಟುವಟಿಕೆ ನಡೆಸಲು ತೀವ್ರ ಸಮಸ್ಯೆಯಾಗುತ್ತಿದೆ. ಮಳೆ ಬಂದಾಗ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಜೀವಭಯ ಕಾಡುತ್ತಿದೆ. ಸರ್ಕಾರ ಮತ್ತು ಶಿಕ್ಷಣ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂಬ ದೂರು ಪಾಲಕರಿಂದ ಕೇಳಿ ಬಂದಿದೆ. ಶಾಲಾ ಕಟ್ಟಡ ಕುರಿತು ಶಿಕ್ಷಣ ಇಲಾಖೆ ಅಧಿಕಾರಿ ಗಮನಕ್ಕೆ ತರಲಾಗಿದೆ. ಶಿಥಿಲಗೊಂಡ ಶಾಲಾ ಕಟ್ಟಡ ತೆರವುಗೊಳಿಸಿ, ನೂತನ ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದ ಮಂಜೂರಾತಿ ದೊರಕಿದೆ. ಕಟ್ಟಡ ನಿರ್ಮಾಣಕ್ಕೆ ಅಗತ್ಯ ಅನುದಾನ ದೊರೆತಿಲ್ಲ ಎಂಬ ಮಾಹಿತಿಯಿದೆ ಎಂದು ಮುಖ್ಯ ಶಿಕ್ಷಕ ಕಾಶಿರಾಯ ಕಲಾಲ ಅವರು ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.