ಕಲಬುರ್ಗಿ: ಎರಡು ವರ್ಷಗಳಿಂದ ಕೋವಿಡ್‌ನಿಂದಾಗಿ ಬಹುತೇಕ ಸ್ಥಗಿತಗೊಂಡಿದ್ದ ಶಾಲೆ– ಕಾಲೇಜುಗಳು ಆ.23ರಿಂದ ಆರಂಭವಾಗಲಿದ್ದು, 9ನೇ, 10ನೇ ತರಗತಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ನಡೆಯಲಿವೆ. ಇದಕ್ಕಾಗಿ ಜಿಲ್ಲೆಯಲ್ಲಿ ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ ಸೇರಿದಂತೆ 855 ಪ್ರೌಢಶಾಲೆಗಳು ಹಾಗೂ 287 ಪದವಿ ಪೂರ್ವ ಕಾಲೇಜುಗಳಿವೆ. ಸರ್ಕಾರದ ಮಾರ್ಗಸೂಚಿಯಂತೆ ಪ್ರತಿಯೊಂದು ಶಾಲೆಗಳನ್ನು ಸ್ವಚ್ಛಗೊಳಿಸಿ, ಸ್ಯಾನಿಟೈಸ್ ಮಾಡಲಾಗುತ್ತಿದೆ. ಶಿಕ್ಷಕರು ಹಾಗೂ ಸಿಬ್ಬಂದಿ ಶೈಕ್ಷಣಿಕ ಚಟುವಟಿಕೆಗಳ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ದೃಶ್ಯಗಳು ಶನಿವಾರ ಕಂಡುಬಂದವು.
ಮೊದಲ ಕೋವಿಡ್ ಅಲೆ ಕಡಿಮೆಯಾದ ಸಮಯದಲ್ಲಿ ಸರ್ಕಾರ ‘ವಿದ್ಯಾಗಮ’ ತರಗತಿಗಳನ್ನು ಆರಂಭಿಸಿತ್ತು. ಆದರೆ, ಕೋವಿಡ್ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಅದನ್ನು ಸ್ಥಗಿತಗೊಳಿಸಿತ್ತು. ಈಗ ಮತ್ತೆ ಕೋವಿಡ್ 3ನೇ ಅಲೆಯ ಕಾರ್ಮೋಡ ಕವಿದಿದೆ. ಇದರಿಂದಾಗಿ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ವಿದ್ಯಾರ್ಥಿಗಳ ಸುರಕ್ಷತೆಗೆ ಸಂಬಂಧಿಸಿ ವಿಸ್ತೃತ ಎಸ್‌ಒಪಿಯನ್ನು (ಪ್ರಮಾಣಿತ ಕಾರ್ಯಚರಣಾ ವಿಧಾನ) ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ಶಿಕ್ಷಕರಿಗೆ ಸೂಚಿಸಿದ್ದಾರೆ. ಶಿಕ್ಷಣ ಇಲಾಖೆಯು ಮಕ್ಕಳ ಹಾಜರಾತಿ ಕಡ್ಡಾಯಗೊಳಿಸಿಲ್ಲ. ಪಾಲಕರ ಇಚ್ಛೆ ಮೇಲೆ ಅವಲಂಬಿತ ಎಂದು ಹೇಳಿರುವುದು ಗೊಂದಲಕ್ಕೆ ಕಾರಣವಾಗಿದೆ. ಮನೆಯಿಂದ ಬಿಸಿ ನೀರು, ಊಟ ಹೀಗೆ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಬರುವಂತೆ ತಿಳಿಸಲಾಗಿದೆ.
ಪಿಯು ತರಗತಿಗಳ ಗೊಂದಲ: ಜಿಲ್ಲೆಯಲ್ಲಿ ಈ ಬಾರಿ 38,523 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದು, ಎಲ್ಲರೂ ತೇರ್ಗಡೆಯಾಗಿದ್ದಾರೆ. ಹೀಗಾಗಿ ಕಾಲೇಜುಗಳಲ್ಲಿ ಪಿಯುಸಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಸೀಟುಗಳಿಗೆ ಬೇಡಿಕೆ ಬಂದಿದೆ. ಇದರಿಂದಾಗಿ ಹಲವೆಡೆ ಡೊನೆಶನ್ ಹಾವಳಿಯೂ ಹೆಚ್ಚಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಸದ್ಯ ಇಲಾಖೆಯ ಕೆಲ ಸಿಬ್ಬಂದಿ ಹಾಗೂ ಕಾಲೇಜು ಉಪನ್ಯಾಸಕರು ದ್ವಿತೀಯ ಪಿಯುಸಿ ಪರೀಕ್ಷೆ ಹಾಗೂ ಮಹಾನಗರ ಪಾಲಿಕೆ ಚುನಾವಣೆ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಶೈಕ್ಷಣಿಕ ಚಟುವಟಿಕೆಗಳಿಗೆ ಅಡ್ಡಿಯಾಗುವ ಸಾಧ್ಯತೆಗಳಿವೆ. ಜಿಲ್ಲೆಯಲ್ಲಿ ಆ.23ರಿಂದ ಸಮರ್ಪಕವಾಗಿ ತರಗತಿಗಳು ನಡೆಯುವ ಬಗ್ಗೆ ಗೊಂದಲ ಉಂಟಾಗಿದೆ.
ಈಗಾಗಲೇ ಕಾಲೇಜುಗಳಲ್ಲಿ ಪ್ರವೇಶ ಪ್ರಕ್ರಿಯೆಗಳು ನಡೆದಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಾಲೆಗೆ ಬರುವ ವಿದ್ಯಾರ್ಥಿಗಳು ಪಾಲಕರ ಒಪ್ಪಿಗೆ ಪಡೆಯುವುದು ಅಗತ್ಯ. ಶಾಲೆಗೆ ಬಾರದ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ಮುಂದುವರೆಸುತ್ತೇವೆ
– ಶಂಕ್ರಮ್ಮ ಢವಳಗಿ, ಕ್ಷೇತ್ರ ಶಿಕ್ಷಣಾಧಿಕಾರಿ, ಕಲಬುರ್ಗಿ ದಕ್ಷಿಣ ವಲಯ
ಜಿಲ್ಲೆಯ ವಿದ್ಯಾರ್ಥಿಗಳ ಮಾಹಿತಿ (ಆ.21ರವರೆಗೆ)
9ನೇ ತರಗತಿಗೆ ಪ್ರವೇಶ ಪಡೆದವರು; 50,393
10ನೇ ತರಗತಿಗೆ ಪ್ರವೇಶ ಪಡೆದವರು; 46,890
ಈ ವರ್ಷ ಎಸ್ಸೆಸ್ಸೆಲ್ಸಿ ತೇರ್ಗಡೆಯಾದ ವಿದ್ಯಾರ್ಥಿಗಳು; 38,523
ಜಿಲ್ಲೆಯಲ್ಲಿರುವ ಪ್ರೌಢಶಾಲೆಗಳು; 855
ಪದವಿಪೂರ್ವ ಕಾಲೇಜುಗಳು;287
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.