ADVERTISEMENT

ಸೇಡಂ: 117 ಮಠ-ಮಂದಿರಗಳಿಗೆ ₹10 ಕೋಟಿ ಅನುದಾನ

ನಿರ್ಮಾಣ ಮತ್ತು ಜೀರ್ಣೋದ್ಧಾರಕ್ಕೆ ಶರತ್ತುಬದ್ಧ ಅನುದಾನ

ಅವಿನಾಶ ಬೋರಂಚಿ
Published 6 ಅಕ್ಟೋಬರ್ 2024, 4:56 IST
Last Updated 6 ಅಕ್ಟೋಬರ್ 2024, 4:56 IST
ಸೇಡಂ ತಾಲ್ಲೂಕು ಮೋತಕಪಲ್ಲಿ ಗ್ರಾಮದ ಆರಾಧ್ಯ ದೈವ ಬಲಭೀಮಸೇನ ದೇವಾಲಯ
ಸೇಡಂ ತಾಲ್ಲೂಕು ಮೋತಕಪಲ್ಲಿ ಗ್ರಾಮದ ಆರಾಧ್ಯ ದೈವ ಬಲಭೀಮಸೇನ ದೇವಾಲಯ   

ಸೇಡಂ: ತಾಲ್ಲೂಕು ಸೇರಿದಂತೆ ವಿಧಾನಸಭಾ ಕ್ಷೇತ್ರದ 117 ಮಠ-ಮಂದಿರಗಳ ನಿರ್ಮಾಣ ಮತ್ತು ಜೀರ್ಣೋದ್ಧಾರಕ್ಕಾಗಿ ರಾಜ್ಯ ಸರ್ಕಾರ ₹10 ಕೋಟಿ ಮಂಜೂರು ಮಾಡಿದೆ. ತಾಲ್ಲೂಕಿನ 90, ಸೇಡಂ ವಿಧಾನಸಭಾ ಕ್ಷೇತ್ರದ ಚಿಂಚೋಳಿ ತಾಲ್ಲೂಕಿನ 27 ಮಠ-ಮಂದಿರಗಳ ಜೀರ್ಣೋದ್ಧಾರಕ್ಕೆ ಮಂಜೂರಾತಿ ಸಿಕ್ಕಿದ್ದು ಕಾಮಗಾರಿ ಆರಂಭಿಸಬೇಕಿದೆ.

ಕ್ಷೇತ್ರದ ಶಾಸಕ, ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಪ್ರಯತ್ನದಿಂದಾಗಿ ಧಾರ್ಮಿಕ ಕ್ಷೇತ್ರಕ್ಕೆ ಅನುದಾನ ಬಂದಿದ್ದು, ಮುಖ್ಯಮಂತ್ರಿಗಳ ವಿಶೇಷ ಅನುದಾದಡಿ ಮಂಜೂರಾತಿ ದೊರೆತಿದೆ. ವಿವಿಧ ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿ, ಜೀರ್ಣೋದ್ಧಾರ ಕಾಮಗಾರಿಗಳಿಗೆ ಅನುದಾನ ಬಳಸುವಂತೆ ಷರತ್ತುಬದ್ಧ ನಿಯಮಾವಳಿಗಳನ್ನು ರೂಪಿಸಿ ಮುಜರಾಯಿ ಇಲಾಖೆಯ ಮೂಲಕ ಕೈಗೊಳ್ಳಲು ಆದೇಶಿಸಲಾಗಿದೆ.

₹2 ಲಕ್ಷದಿಂದ ₹2 ಕೋಟಿ ವರೆಗೆ ನೀಡಿಕೆ: ತಾಲ್ಲೂಕಿನ ಮೋತಕಪಲ್ಲಿ ಗ್ರಾಮದ ಬಲಭೀಮಸೇನ ದೇವಸ್ಥಾನಕ್ಕೆ ₹2 ಕೋಟಿ, ಪಟ್ಟಣದ ಹಾಲಪ್ಪಯ್ಯ ವಿರಕ್ತ ಮಠಕ್ಕೆ ₹65 ಲಕ್ಷ, ತಾಲ್ಲೂಕಿನ ಊಡಗಿ ಗ್ರಾಮದ ಲೋಕೇಶ್ವರ ದೇವಸ್ಥಾನಕ್ಕೆ ₹50 ಲಕ್ಷ, ಸೇಡಂ ವಿಧಾನಸಭಾ ಕ್ಷೇತ್ರದ ಶಿರೋಳ್ಳಿ ಗ್ರಾಮದ ನಾಗಲಿಂಗೇಶ್ವರ ದೇವಸ್ಥಾನಕ್ಕೆ ₹25 ಲಕ್ಷ. ತಾಲ್ಲೂಕಿನ ಹಂದರಕಿ ಗ್ರಾಮದ ಲೋಕೇಶ್ವರ ದೇವಾಲಯಕ್ಕೆ ₹20 ಲಕ್ಷ, ದುಗನೂರು ಗ್ರಾಮದ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ₹15 ಲಕ್ಷ ನೀಡಲಾಗಿದೆ. 

ADVERTISEMENT

ಸುಮಾರು 17 ದೇವಾಲಯಗಳಿಗೆ ತಲಾ ₹10 ಲಕ್ಷ ತಲಾ ನೀಡಲಾಗಿದೆ. 87 ಮಠ-ಮಂದಿರಗಳಿಗೆ ತಲಾ ₹5 ಲಕ್ಷ, 1 ದೇವಸ್ಥಾನಕ್ಕೆ ₹4 ಲಕ್ಷ, 4 ದೇವಾಯಲಗಳಿಗೆ ₹3 ಲಕ್ಷ, 2 ದೇವಾಲಗಳಿಗೆ ₹2 ಲಕ್ಷ ಸೇರಿ ಒಟ್ಟು 117 ದೇವಾಲಯಗಳಿಗೆ ₹10 ಕೋಟಿ ಅನುದಾನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ತೆಲ್ಕೂರ ಅವಧಿಯಲ್ಲಿಯೂ ₹8 ಕೋಟಿ: ಮಾಜಿ ಶಾಸಕ ರಾಜಕುಮಾರ ಪಾಟೀಲ ತಲ್ಕೂರ ಅವರ ಆಡಳಿತ ಅವಧಿಯಲ್ಲಿ ಸೇಡಂ ತಾಲ್ಲೂಕು ಸೇರಿದಂತೆ ವಿಧಾನಸಭಾ ಕ್ಷೇತ್ರದ 19 ದೇವಾಲಯಗಳಿಗೆ ₹8 ಕೋಟಿ ಅನುದಾನ ಸರ್ಕಾರ ನೀಡಿತ್ತು.

ಧಾರ್ಮಿಕ ದತ್ತಿ ಇಲಾಖೆಯಿಂದ ಏಕಕಾಲಕ್ಕೆ ₹8 ಕೋಟಿ ಅನುದಾನವನ್ನು ಆಗಿನ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಂಜೂರು ಮಾಡಿಸಿ, ಜೀರ್ಣೋದ್ಧಾರಗೊಳಿಸಿದ್ದರು. ಜತೆಗೆ ಶಾಸಕರ ನಿಧಿಯ ಅನುದಾನವನ್ನು ಸಹ ಮಂದಿರಳ ಜೀರ್ಣೋದ್ಧಾರಕ್ಕೆ ನೀಡಿದ್ದರು

ಜನರ ಅಭಿಪ್ರಾಯ ಮತ್ತು ಬೇಡಿಕೆ ಮೇರೆಗೆ ಮಠ-ಮಂದಿರಗಳ ಜೀರ್ಣೋದ್ಧಾರಕ್ಕೆ ಅನುದಾನ ನೀಡಲಾಗಿದೆ. ಸರ್ಕಾರದಿಂದ ಮಂಜೂರಾತಿ ದೊರೆತಿದ್ದು ಕಾಮಗಾರಿ ಆರಂಭಗೊಳ್ಳಲಿವೆ
ಡಾ.ಶರಣಪ್ರಕಾಶ ಪಾಟೀಲ ಸಚಿವ
ಹಿಂದೂ ಮಠ-ಮಂದಿರಗಳ ಜೀರ್ಣೋದ್ಧಾರಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ ₹10 ಕೋಟಿ ಅನುದಾನ ನೀಡುವ ಮೂಲಕ ರಾಜ್ಯ ಸರ್ಕಾರದ ಸರ್ವಜನಾಂಗದ ಅಭಿವೃದ್ಧಿಯನ್ನು ಸಾಬಿತುಪಡಿಸಿರುವುದು ಸ್ವಾಗತಾರ್ಹ
ಬಸವರಾಜ ರೇವಗೊಂಡ ಮುಖಂಡ
ನಮ್ಮೂರಿನ ಲೋಕೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ ರಾಜ್ಯ ಸರ್ಕಾರ ₹20 ಲಕ್ಷ ಅನುದಾನ ಮಂಜೂರು ಮಾಡಿರುವುದು ಸಂತಸ ತಂದಿದೆ
ಮಲ್ಲಿಕಾರ್ಜುನ ಬೇಂಡ್ಲೆ ಗ್ರಾಮಸ್ಥ ಹಂದರಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.