ಸೇಡಂ: ಪಟ್ಟಣದ ಬಸವೇಶ್ವರ ವೃತ್ತದಿಂದ ವಾಸವದತ್ತ ಕಂಪನಿವರೆಗೆ ಚಥುಷ್ಪಥ ರಸ್ತೆ ವಿಸ್ತರಣೆಗೆ 2023-2024ನೇ ಸಾಲಿನಡಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ₹6 ಕೋಟಿ ಅನುದಾನ ಮಂಜೂರು ಮಾಡಿದೆ.
ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಒಳಗೊಂಡಿವೆ. ಚಥುಷ್ಪಥದ ಡಾಂಬಾರ್ ರಸ್ತೆ, ರಸ್ತೆ ಮಧ್ಯೆ 1.5 ಮೀಟರ್ ಅಗಲದ ವಿಭಜಕ, ವಿಭಜಕದಲ್ಲಿ ವಿದ್ಯುತ್ ಬೀದಿ ದೀಪ, ರಸ್ತೆ ಎರಡು ಕಡೆಗಳಲ್ಲಿ ಸಿಸಿ ಟಿವಿ ಕ್ಯಾಮೆರಾ, ಚರಂಡಿ, ಬಣ್ಣ ಬಳಿಯುವುದು ಸೇರಿದಂತೆ ಇನ್ನಿತರ ಕಾಮಗಾರಿಗಳನ್ನು ಹೊಂದಿದೆ. ಸುಮಾರು 700 ಮೀಟರ್ ಉದ್ದ 22 ಮೀಟರ್ ಅಗಲದ ರಸ್ತೆ ನಿರ್ಮಾಣವಾಗಲಿದೆ. ಪ್ರತ್ಯೇಕ ದ್ವಿಪಥ ರಸ್ತೆಯಿರಲಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ರಾಜ್ಯ ಹೆದ್ದಾಗಿ-10 ಕಲಬುರಗಿ-ರಿಬ್ಬನಪಲ್ಲಿ ಆಂಧ್ರ ಮತ್ತು ತೆಲಂಗಾಣಕ್ಕೆ ಸಂಪರ್ಕಿಸುತ್ತದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ವಾಸವದತ್ತ, ಶ್ರೀ ಸಿಮೆಂಟ್ ಮತ್ತು ರಾಜಶ್ರೀ ಸಿಮೆಂಟ್ ಕಂಪೆನಿಗೆ ತೆರಳುವ ಭಾರಿ ವಾಹನಗಳು ಇದೇ ರಸ್ತೆ ಅವಲಂಬಿಸಿದ್ದು ಪಟ್ಟಣದಲ್ಲಿಯೇ ಅತಿ ಹೆಚ್ಚು ಓಡಾಡುವ ಪ್ರಮುಖ ರಸ್ತೆ ಇದಾಗಿದೆ. ಶಾಲಾ-ಕಾಲೇಜು, ನೌಕರರು, ಕಾರ್ಮಿಕರು, ಪ್ರಯಾಣಿಕರು ಸೇರಿದಂತೆ ಲಕ್ಷಾಂತರ ಪ್ರಯಾಣಿಕರು ಇದೇ ರಸ್ತೆ ಅವಲಂಬಿಸಿದ್ದಾರೆ. ಇಕ್ಟಟ್ಟಿನ ರಸ್ತೆಯೂ ಆಗಿದ್ದರಿಂದ ದಿನಕ್ಕಿಷ್ಟು ವಾಹನಗಳ ದಟ್ಟಣೆಗಳ ಸಂಖ್ಯೆ ಹೆಚ್ಚುತ್ತಿದೆ. ಅತಿ ಹೆಚ್ಚು ಅಪಘಾತಗಳಾದ ರಸ್ತೆ ಎಂಬ ಹೆಸರನ್ನು ಪೊಲೀಸ್ ದಾಖಲೆಗಳಲ್ಲಿ ಪಡೆದುಕೊಂಡಿದೆ. ಈಚೆಗೆ ತಿಂಗಳಲ್ಲಿಯೇ ಮೂರು ಪ್ರತ್ಯೇಕ ಅಪಘಾತಗಳು ಸಂಭವಿಸಿ ಪ್ರಾಣ ಕಳೆದುಕೊಂಡಿದ್ದರು.
‘ಚಥುಷ್ಪಥ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿರುವುದು ಸ್ವಾಗತಾರ್ಹ. ಆದರೆ ಕಲಬುರಗಿ ಜಿಲ್ಲೆಯಿಂದ-ರಿಬ್ಬನಪಲ್ಲಿ ರಸ್ತೆಗೆ ಸಂಪರ್ಕಿಸಲು ರಿಂಗ್ ರಸ್ತೆ ನಿರ್ಮಿಸಬೇಕು. ಈ ಹಿಂದೆ ಕಲಬುರಗಿ ರಸ್ತೆಯ ಶೆಟ್ಟಿ ಹೂಡಾ ಬಳಿಯಿಂದ-ರಿಬ್ಬನಪಲ್ಲಿ ರಸ್ತೆಯ ಬಟಗೇರಾ ಕ್ರಾಸ್‌ವರೆಗೆ ರಿಂಗ್ ರಸ್ತೆ ನಿರ್ಮಾಣಕ್ಕೆ ಯೋಜನೆ ಹಾಕಲಾಗಿತ್ತು ಎಂಬ ಮಾಹಿತಿ ಇದೆ. ಆದರೆ ಇಲ್ಲಿಯವರೆಗೆ ಅಧಿಕೃತವಾಗಿ ಮಾಹಿತಿ ಸಿಕ್ಕಿಲ್ಲ. ಸಾರ್ವಜನಿಕರು ಈ ಯೋಜನೆಯಂತೆ ಬೈಪಾಸ್ ರಿಂಗ್ ರಸ್ತೆ ನಿರ್ಮಿಸಬೇಕು’ ಎನ್ನುವುದು ಜನರ ಅಭಿಪ್ರಾಯ.
ಸಾರ್ವಜನಿಕರು ಅತಿ ಹೆಚ್ಚು ಇದೇ ರಸ್ತೆಯನ್ನೇ ಅವಲಂಬಿಸಿದ್ದರಿಂದ ದಟ್ಟಣೆ ಹೆಚ್ಚುತ್ತಿದೆ. ಜನರ ಅನುಕೂಲಕ್ಕಾಗಿ ಚಥುಷ್ಪಥ ರಸ್ತೆ ಮಂಜೂರು ಮಾಡಿಸಲಾಗಿದೆ
-ಡಾ.ಶರಣಪ್ರಕಾಶ ಪಾಟೀಲ ಸಚಿವ
ವಾಹನ ದಟ್ಟಣೆಯ ರಸ್ತೆಯಲ್ಲಿ ನಿತ್ಯ ಸಂಚರಿಸುವುದು ದುಸ್ತರವಾಗಿತ್ತು. ಸರ್ಕಾರ ರಸ್ತೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದ್ದರಿಂದ ಅನುಕೂಲವಾಗಲಿದೆ
-ಜನಾರ್ಧನರೆಡ್ಡಿ ತುಳೇರ ಸಾಮಾಜಿಕ ಕಾರ್ಯಕರ್ತ
ಬೈಕ್ ಮೇಲೆ ಶಾಲೆಗೆ ತೆರಳುವ ರಸ್ತೆ ಇಕ್ಕಟ್ಟಿನದಾಗಿದೆ. ಅನುದಾನ ಮಂಜೂರಾಗಿರುವುದು ಸ್ವಾಗತಾರ್ಹವಾಗಿದ್ದು. ಶೀಘ್ರ ರಸ್ತೆ ವಿಸ್ತರಣೆಯಾದರೆ
- ಅನುಕೂಲ ರವಿರಾಜ ಆವಂಟಿ ಶಿಕ್ಷಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.