ADVERTISEMENT

ಸೇಡಂ: ಆತಂಕದಲ್ಲೇ ಆಡಳಿತಾಧಿಕಾರಿ ಕೆಲಸ

ಮಳಖೇಡ: ಸಂಪೂರ್ಣ ಶಿಥಿಲಗೊಂಡ ಗ್ರಾಮ ಆಡಳಿತಾಧಿಕಾರಿ ಕಚೇರಿ

ಅವಿನಾಶ ಬೋರಂಚಿ
Published 28 ಆಗಸ್ಟ್ 2024, 5:02 IST
Last Updated 28 ಆಗಸ್ಟ್ 2024, 5:02 IST
ಸೇಡಂ ತಾಲ್ಲೂಕು ಮಳಖೇಡ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಕಚೇರಿ ಕಟ್ಟಡ ಶಿಥಿಲಗೊಂಡಿರುವುದು
ಸೇಡಂ ತಾಲ್ಲೂಕು ಮಳಖೇಡ ಗ್ರಾಮದ ಗ್ರಾಮ ಆಡಳಿತಾಧಿಕಾರಿ ಕಚೇರಿ ಕಟ್ಟಡ ಶಿಥಿಲಗೊಂಡಿರುವುದು   

ಸೇಡಂ: ತಾಲ್ಲೂಕಿನ ಮಳಖೇಡ ಗ್ರಾಮದಲ್ಲಿರುವ ಗ್ರಾಮ ಆಡಳಿತಾಧಿಕಾರಿ ಕಚೇರಿ ಕಟ್ಟಡ ಶಿಥಿಲಗೊಂಡು ಬೀಳುವ ಹಂತದಲ್ಲಿದೆ.

ಕಟ್ಟಡ ನಿರ್ಮಿಸಿ ಅನೇಕ ದಶಕಗಳು ಕಳೆದಿದ್ದು ಗೋಡೆಗಳು ಅಲ್ಲಲ್ಲಿ ಬಿರುಕು ಬಿಟ್ಟು. ಮಳೆಗೆ ಸೋರುತ್ತಿದೆ. ಇದರಿಂದ ಕಚೇರಿಯ ದಾಖಲೆಪತ್ರಗಳು, ಸಾಮಾಗ್ರಿಗಳನ್ನು ರಕ್ಷಿಸಿಡಬೇಕಾದರೆ ಹರಸಾಹಸಪಡಬೇಕಾಗಿದೆ. ಕಟ್ಟಡದ ಚಾವಣಿಯ ಪದರಗಳು ಉದುರಿ ಬಿದ್ದ್ದು ಅಲ್ಲಲ್ಲಿ ಕಬ್ಬಿಣದ ರಾಡ್ ಕಾಣುತ್ತಿವೆ.

ಇರುವ ಮೂರು ಕೋಣೆಗಳಲ್ಲಿ ಎರಡು ಕೋಣೆಗಳು ನಿರುಪಯುಕ್ತವಾಗಿವೆ. ಶೌಚಾಲಯ, ಸಾರ್ವಜನಿಕರು ಕುಳಿತುಕೊಳ್ಳುವ ಕೋಣೆ ಸಂಪೂರ್ಣ ಹಾಳಾಗಿದೆ. ಇಲಿ, ಹೆಗ್ಗಣ, ಕಪ್ಪೆ, ಚೇಳುಗಳು, ಹಲ್ಲಿಗಳು ಹರಿದಾಡುತ್ತಿವೆ. ಲೆಕ್ಕಾಧಿಕಾರಿ ಕುಳಿತುಕೊಳ್ಳುವ ಕೋಣೆಯ ಬಾಗಿಲುಗಳು, ಕಿಟಕಿಗಳು, ಮುರಿದು ಹೋಗಿವೆ. ಗೋಡೆ ಬಿರುಕು ಬಿಟ್ಟು, ಶಿಥಿಲಗೊಂಡಿದೆ.

ADVERTISEMENT

‘ಕಚೇರಿ ಕಡತಗಳ ರಕ್ಷಣೆ ದುಸ್ತರವಾಗಿದ್ದು ಸುರಕ್ಷತೆ ಎಂಬಿದೇ ಇಲ್ಲ. ಲೆಕ್ಕಾಧಿಕಾರಿ ಕುಳಿತುಕೊಳ್ಳುವ ಕಚೇರಿ ಕೋಣೆಯಂತೂ ಬೀಳುವ ಹಂತದಲ್ಲಿದೆ. ಕಚೇರಿಯಲ್ಲಿ ಕುಳಿತುಕೊಳ್ಳಬೇಕಾದರೆ ಭಯವಾಗುತ್ತಿದೆ. ಸಾರ್ವಜನಿಕರೂ ಆತಂಕವನ್ನು ಎದುರಿಸುತ್ತಿದ್ದಾರೆ. ಕಚೇರಿ ದುರ್ಸತಿ ಮಾಡಿಸಿ’ ಎಂದು ದೂರುತ್ತಿದ್ದಾರೆ ಎಂದು ಸಿಬ್ಬಂದಿ ಹಣಮಂತ ಮತ್ತು ಬಾಬುಲಾಲ್ ಹೇಳುತ್ತಾರೆ.

ತಾಲ್ಲೂಕು ಕೇಂದ್ರ ಸೇಡಂನಿಂದ 12 ಕಿ.ಮಿ ಅಂತರದಲ್ಲಿರುವ ಮಳಖೇಡ ರಾಜ್ಯ ಹೆದ್ದಾರಿ-10 ಸೇಡಂ-ಕಲಬುರಗಿ ಜಿಲ್ಲಾ ಸಂಪರ್ಕದ ಮಧ್ಯದಲ್ಲಿದೆ. ಮಳಖೇಡ ಅತ್ಯಂತ ದೊಡ್ಡ ಹೋಬಳಿ ಪ್ರದೇಶವಾಗಿದ್ದು ದೊಡ್ಡದಾದ ಗ್ರಾಮ ಪಂಚಾಯಿತಿಯನ್ನು ಸಹ ಹೊಂದಿದೆ.

ಮಳಖೇಡ, ನೃಪತುಂಗ ನಗರ, ಮಳಖೇಡ(ಕೆ), ರಾಜೀವನಗರ, ಸಮಖೇಡ, ತೊಟ್ನಳ್ಳಿ, ಮೀನಹಾಬಾಳ, ಸಂಗಾವಿ(ಎಂ), ಬಿಜನಳ್ಳಿ, ಮಳಖೇಡ (ಜೆ) ಸೇರಿದಂತೆ ಇನ್ನಿತರ ಗ್ರಾಮಗಳ ರೈತರು ಮಳಖೇಡ ಹೋಬಳಿಗೆ ಆಗಮಿಸುತ್ತಾರೆ. ಹೊಲದ ಪಹಣಿ, ಬೆಳೆ, ಬಿದ್ದ ಮನೆಗಳ ಪರಿಹಾರ ಸೇರಿದಂತೆ ವಿವಿಧ ಕೆಲಸಗಳಿಗಾಗಿ ಗ್ರಾಮ ಲೆಕ್ಕಾಧಿಕಾರಿ ಕಚೇರಿಗೆ ಆಗಮಿಸುತ್ತಾರೆ.

ತಮ್ಮ ಕೆಲಸಕ್ಕೆ ಕಚೇರಿಗೆ ಆಗಮಿಸುವ ಸಾರ್ವಜನಿಕರನ್ನು ಕಚೇರಿಯಲ್ಲಿ ಕುಳಿತುಕೊಂಡು ಸಮಸ್ಯೆ ಇತ್ಯರ್ಥಗೊಳಿಸಲು ಆಗುತ್ತಿಲ್ಲ. ಹೊರಗಡೆ ಕುಳಿತುಕೊಳ್ಳೊಣ ಬನ್ನಿ ಎನ್ನುತ್ತಿದ್ದಾರೆ. ಕಚೇರಿ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ‘ಪ್ರಜಾವಾಣಿ’ಗೆ ಗ್ರಾಮಾಡಳಿತಾಧಿಕಾರಿ ಚಂದ್ರಕಾಂತ ಬಾವಿ ಮಾಹಿತಿ ನೀಡಿದರು.

ಗ್ರಾಮ ಆಡಳಿತಾಧಿಕಾರಿ ಕುಳಿತು ಕೆಲಸ ಮಾಡುವ ಕೋಣೆಯ ಚಾವಣಿಯ ಸಿಮೆಂಟ್‌ ಪದರು ಉದುರಿರುವುದು
ಕಚೇರಿ ಕಟ್ಟಡ ಶಿಥಿಲಗೊಂಡ ಕುರಿತು ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಈವರೆಗೂ ಸಮಸ್ಯೆ ಇತ್ಯರ್ಥಗೊಂಡಿಲ್ಲ. ಅದೇ ಕಚೇರಿ ಅನಿವಾರ್ಯವಾಗಿದ್ದು ಜೀವಭಯದಲ್ಲಿ ಕೆಲಸ ಮಾಡುವಂತಾಗಿದೆ
ಚಂದ್ರಕಾಂತ ಬಾವಿ ಗ್ರಾಮ ಆಡಳಿತಾಧಿಕಾರಿ ಮಳಖೇಡ
ಮಳಖೇಡ ಅಭಿವೃದ್ಧಿಗೆ ಸಚಿವರು ಯಾವಾಗಲೂ ಬ್ಲಾಂಕ್ ಚೆಕ್ ನೀಡುವುದಾಗಿ ಹೇಳುತ್ತಾರೆ. ಗ್ರಾಮ ಆಡಳಿತಾಧಿಕಾರಿ ಕಚೇರಿ ಶಿಥಿಲಗೊಂಡಿದ್ದು ಅನುದಾನ ನೀಡಿ ನೂತನ ಕಟ್ಟಡ ನಿರ್ಮಿಸಬೇಕು
ರಾಜು ಕಟ್ಟಿ ಸಾಮಾಜಿಕ ಕಾರ್ಯಕರ್ತ
ಮಳೆಗಾಲದಲ್ಲಿ ಕಚೇರಿ ಸೋರುವುದರಿಂದ ಗ್ರಾಮ ಆಡಳಿತಾಧಿಕಾರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಉನ್ನತ ಅಧಿಕಾರಿಗಳು ಇದರತ್ತ ಗಮನ ಹರಿಸಬೇಕು
ದೊಡ್ಡಪ್ಪ ಬೈಯ್ಯಾರ್ ಸಾಮಾಜಿಕ ಕಾರ್ಯಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.