ಸೇಡಂ: ‘ನೋವು, ಕಷ್ಟಗಳನ್ನು ಹೊತ್ತು ಬರುವ ಸಾರ್ವಜನಿಕರ ಮೊಗದಲ್ಲಿ ನಗು ಮೂಡಿಸುವಂತಹ ಜನಸೇವೆಯಲ್ಲಿ ತೊಡಗಿಕೊಂಡಿರುವ ಆಸ್ಪತ್ರೆಯ ಸಿಬ್ಬಂದಿ ಕಾರ್ಯ ಶ್ಲಾಘನೀಯ. ಸಾಮಾಜಿಕ ಕರ್ತವ್ಯದ ಜೊತೆಗೆ ಸಾಹಿತ್ಯದ ಆಸಕ್ತಿ ಬೆಳೆಸಿಕೊಳ್ಳಬೇಕು’ ಎಂದು ನೃಪತುಂಗ ಅಧ್ಯಯನ ಸಂಸ್ಥೆ ಅಧ್ಯಕ್ಷ ಪ್ರಭಾಕರ ಜೋಶಿ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ನಿಮಿತ್ತ ಆಯೋಜಿಸಿದ್ದ ಸ್ಪರ್ಧಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
‘ಒತ್ತಡದ ಬದುಕಿಗೆ ನಿರಾಳತೆಯ ಅವಶ್ಯಕತೆ ಇರುತ್ತದೆ. ಸಾಹಿತ್ಯ, ಸಂಗೀತ, ಕ್ರೀಡೆ ಹೀಗೆ ಒಂದಿಲ್ಲ ಒಂದು ಚಟುವಟಿಕೆಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಮೂಲಕ ಒತ್ತಡದಿಂದ ಹೊರಬರಲು ಸಾಧ್ಯವಾಗುತ್ತದೆ. ಆಸ್ಪತ್ರೆಯ ಸಿಬ್ಬಂದಿ ಕಾವ್ಯ ಸೃಷ್ಟಿಸಬಹುದಾದಂತಹ ಪ್ರತಿಭೆ ಹೊಂದಿದ್ದಾರೆ. ನಿಮಗಾಗಿ ಒಂದು ವೇದಿಕೆ ಕಲ್ಪಿಸಿಕೊಟ್ಟ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ನಾಗರಾಜ ಮನ್ನೆಯವರ ಕಾರ್ಯ ಅಭಿನಂದನಾರ್ಹವಾಗಿದೆ’ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ ಮಾತನಾಡಿ, ‘ಇನ್ನೊಬ್ಬರ ನೋವನ್ನು ಪರಿಹರಿಸುವ ಕೆಲಸ ಮಾಡುವ ನಿಮ್ಮಲ್ಲಿ ಒಬ್ಬ ಕವಿ ಇದ್ದಾನೆ. ನಿಮ್ಮೊಳಗಿನ ಕವಿಯನ್ನು ಜಾಗೃತಗೊಳಿಸುವ ಕೆಲಸ ಮಾಡಬೇಕು. ಯಾವುದೇ ಒಂದು ಸಾಹಿತ್ಯ ರಚನೆ ಮಾಡಬೇಕಾದರೆ ನಮ್ಮಲ್ಲಿ ಶಬ್ದಗಳ ಸಂಗ್ರಹ ಇರಬೇಕು. ನಿತ್ಯ ದಿನಪತ್ರಿಕೆಯ ಓದುವ ಹವ್ಯಾಸ ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದರು.
ಈ ವೇಳೆ ಆಶು ಭಾಷಣ, ಆಶು ಕವಿತೆ, ಸಂಗೀತ ಗಾಯನ, ರಂಗೋಲಿ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.
ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನಾಗರಾಜ ಮನ್ನೆ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು. ಸಿಬ್ಬಂದಿ ಸುಭಾಷ ಆರಬೋಳ ಇದ್ದರು. ಶಿಲ್ಪಾ ಗುಡಿಗಾರ ಪ್ರಾರ್ಥಿಸಿದರು. ಜಾಸ್ಮೀನ್ ಖಲಾಸಿ ನಿರೂಪಿಸಿದರು. ಸಿದ್ದು ಕುಮೋಜಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.