ಕಲಬುರಗಿ: ‘ಇಂದಿನ ಹೊಸ ಪೀಳಿಗೆಗೆ ಸೇವಾ ಮನೋಭಾವ ತಿಳಿಸುವುದು ಅವಶ್ಯವಾಗಿದ್ದು, ಅದನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ಘಟಕ ಮಾಡುತ್ತಿದೆ’ ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಣಿ ಎಸ್.ಅಪ್ಪ ಹೇಳಿದರು.
ನಗರದ ಅಪ್ಪ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಶನಿವಾರ ಸ್ಕೌಟ್ಸ್ ಅಂಡ್ ಗೈಡ್ಸ್ ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲಾ ಪದಾಧಿಕಾರಿಗಳ ಸಮಾಲೋಚನಾ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಎಳೆಯ ಮಕ್ಕಳಲ್ಲಿ ಶಿಸ್ತು ಮತ್ತು ಉತ್ತಮ ಸಂಸ್ಕೃತಿ ಬೆಳೆಸುವ ಸ್ಕೌಟ್ಸ್ ಅಂಡ್ ಗೈಡ್ಸ್ ಘಟಕದ ಕಾರ್ಯ ಶ್ಲಾಘನೀಯ. ಶರಣರು ದಯವೇ ಧರ್ಮದ ಮೂಲವಯ್ಯ ಹಾಗೂ ಕಾಯಕವೇ ಕೈಲಾಸ ಎಂದು ಹೇಳುವ ಮೂಲಕ ಸೇವಾ ಭಾವನೆ ಬೆಳಸಿಕೊಳ್ಳುವಂತೆ ಕರೆ ನೀಡಿದ್ದರು. ಶರಣರ ತತ್ವಗಳನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ಘಟಕ ಪಾಲನೆ ಮಾಡುತ್ತದೆ’ ಎಂದರು.
ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತ ಎಸ್.ಪಿ. ಸುಳ್ಳದ್ ಮಾತನಾಡಿ, ‘ರಾಜ್ಯದ ಪ್ರತಿಯೊಂದು ಶಾಲೆಗಳಿಂದ ಹಿಡಿದು ವಿಶ್ವವಿದ್ಯಾಲಯಗಳ ಹಂತದವರೆಗೆ ಸ್ಕೌಟ್ಸ್ ಅಂಡ್ ಗೈಡ್ಸ್ ಆರಂಭವಾಗಬೇಕು. ಆ ಮೂಲಕ ಮಕ್ಕಳಲ್ಲಿ ಶಿಕ್ಷಣದ ಜತೆಗೆ ಶಿಸ್ತು ಮತ್ತು ಮಾನವೀಯತೆ, ಪರಿಸರ ಪ್ರೇಮ ಬೆಳೆಸಬೇಕು. ಇದು ನಮ್ಮ ಉದ್ದೇಶ’ ಎಂದು ಹೇಳಿದರು.
ಚಿತ್ತಾಪುರ ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ ಈಗಾಗಲೇ ಐದು ಎಕರೆ ಸ್ಥಳ ನೀಡುವುದಾಗಿ ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಅದಿಕಾರಿಗಳಲ್ಲಿ ಕಡತ ಬಾಕಿ ಇದ್ದು, ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನ ನೀಡಬೇಕು. ಇದರಿಂದ ಸ್ಕೌಟ್ಸ್ ಅಂಡ್ ಗೈಡ್ಸ್‌ನ ಚಟುವಟಿಕೆ ವಿಸ್ತರಣೆ ಮಾಡಲು ಅನುಕೂಲ ಆಗುತ್ತದೆ’ ಎಂದರು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಣಿ ಎಸ್.ಅಪ್ಪ ಅವರನ್ನು ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಚನ್ನವೀರಯ್ಯ ಸ್ವಾಮಿ ಘೋಷಣೆ ಮಾಡಿ ಆದೇಶ ಪತ್ರ ನೀಡಿದರು.
ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ, ಡಿಡಿಪಿಯು ಶಿವಶರಣಪ್ಪ ಮುಳೇಗಾಂವ, ಬೀದರ್ ಡಿಡಿಪಿಯು ಚಂದ್ರಕಾಂತ ಶಹಾಬಾದಕರ್, ಬಿಇಒ ಸೋಮಶೇಖರ ಹಂಚಿನಾಳ, ಬೀದರ್ ಜಿಲ್ಲಾ ಆಯುಕ್ತೆ ಗುರಮ್ಮ ಸಿದ್ಧಾರೆಡ್ಡಿ, ಸುಜಾತಾ ಇ.ಮುಲ್ಲಾ, ರಾಜು ಮರಾಠೆ, ಅಯ್ಯಪ್ಪ ಅಂಬರಖೇಡ, ರವಿ ಎಸ್.ಜಿ.ಎ., ಗಂಗಪ್ಪ ಗೌಡ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.