ADVERTISEMENT

ಸೇಡಂ ಅಭಿವೃದ್ಧಿ ಬದ್ಧ: ಡಾ.ಶರಣಪ್ರಕಾಶ ಪಾಟೀಲ

16 ನೇ ಸೇಡಂ ಉತ್ಸವ;ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಜನವರಿ 2024, 16:07 IST
Last Updated 15 ಜನವರಿ 2024, 16:07 IST
ಸೇಡಂನಲ್ಲಿ ಸೋಮವಾರ ನಡೆದ 16ನೇ ಸೇಡಂ ಉತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸತ್ಕರಿಸಲಾಯಿತು
ಸೇಡಂನಲ್ಲಿ ಸೋಮವಾರ ನಡೆದ 16ನೇ ಸೇಡಂ ಉತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಸಾಧಕರನ್ನು ಸತ್ಕರಿಸಲಾಯಿತು    

ಸೇಡಂ: ‘ನಾನು ಈ ಹಿಂದೆ ಶಾಸಕ ಮತ್ತು ಸಚಿವನಾಗಿದ್ದಾಗ ಸೇಡಂ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಈಗ ಜನರ ಮತಾಶೀರ್ವಾದದಿಂದ ಮತ್ತೊಮ್ಮೆ ಸಚಿವನಾಗಿದ್ದೇನೆ. ಕಾರಣಾಂತರಗಳಿಂದ ಸ್ಥಗಿತಗೊಂಡ ಅಭಿವೃದ್ಧಿ ಕಾರ್ಯಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲು ಸೂಚಿಸಿದ್ದು, ಜನರಿಗೆ ಅನುಕೂಲವಾಗಲಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಹೇಳಿದರು.

ಪಟ್ಟಣದ ಕೊತ್ತಲಬಸವೇಶ್ವರ ದೇವಾಲಯದಲ್ಲಿ ಕೊತ್ತಲಬಸವೇಶ್ವರ ದೇವಾಲಯ, ಕೊತ್ತಲಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಪುರಸಭೆ, ನಾಗರಿಕ ಸಮಿತಿ, ಸೇಡಂ ಪರಿವಾರ ಮತ್ತು ಉತ್ಸವ ಸಮಿತಿ ಸೋಮವಾರ ಆಯೋಜಿಸಿದ್ದ 16ನೇ ಸೇಡಂ ಉತ್ಸವದಲ್ಲಿ ಅವರು ಮಾತನಾಡಿದರು.

‘ಸೇಡಂನಲ್ಲಿ ನರ್ಸಿಂಗ್ ಕಾಲೇಜು, ಪ್ಯಾರಾಮೆಡಿಕಲ್ ಮತ್ತು ಈಜುಕೊಳ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುತ್ತದೆ. ನರ್ಸಿಂಗ್ ಕಾಲೇಜು ಆರಂಭದ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತದೆ. ಅಲ್ಲದೆ ಈ ಹಿಂದೆ ನಾನು ಸಚಿವನಾಗಿದ್ದಾಗ ಸೇಡಂನಲ್ಲಿ ಪುರಸಭೆ ಮಳಿಗೆ, ಒಳಕ್ರೀಡಾಂಗಣಕ್ಕೆ ಅನುದಾನ ನೀಡಿದ್ದೆ‌. ಆದರೆ ಕಾರಣಾಂತರಗಳಿಂದ ಪೂರ್ಣಗೊಂಡಿಲ್ಲ. ಮುಂದಿನ ಎರಡು ತಿಂಗಳೊಳಗೆ ಪೂರ್ಣಗೊಳ್ಳಲಿವೆ. ಇದರ ಜೊತೆಗೆ ಕಾಗಿಣಾ ನದಿಯಿಂದ ₹45 ಕೋಟಿ ಅನುದಾನದ ಹೊಸದೊಂದು ಕುಡಿಯುವ ನೀರು ಪೈಪಲೈನ್ ಸಂಪರ್ಕ ಮಾಡಿ, ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಇತ್ಯರ್ಥಪಡಿಸಲಾಗುತ್ತದೆ’ ಎಂದರು.

ADVERTISEMENT

ಸತ್ಕಾರ:ಸೇಡಂ ಉತ್ಸವದಲ್ಲಿ ವಿವಿಧ ಕ್ಷೇತ್ರಗಳ ಸೂರ್ಯಕಾಂತ ಮಾಸ್ತರ ಹಂಗನಳ್ಳಿ (ಚಿತ್ರಕಲೆ), ಶೇಖರ ನಾಟೀಕಾರ (ಚಿತ್ರ ರಂಗ), ಹಣಮಂತ ತವದಿ ಮತ್ತು ಭೀಮರಾವ ಕುಂಬಾರ (ಕೃಷಿ) ಸಾಧಕರನ್ನು ಸತ್ಕರಿಸಲಾಯಿತು. ಅಲ್ಲದೆ ಉತ್ಸವ ನಿಮಿತ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿನ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಕಾರ್ಯಕ್ರಮದಲ್ಲಿ ಕೊತ್ತಲಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಸಂರಕ್ಷಕ ಬಸವರಾಜ ಪಾಟೀಲ, ಕೊತ್ತಲಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ಸೇಡಂ ಪರಿವಾರ ಅಧ್ಯಕ್ಷ ಅನಂತಯ್ಯಾ ಮುಸ್ತಾರ್, ಸಿದ್ದಪ್ಪ ತಳ್ಳಳ್ಳಿ, ಡಾ.ಸದಾನಂದ ಬೂದಿ, ಸಂತೋಷ ಕುಲಕರ್ಣಿ, ನಾಗೇಶ್ವರರಾವ್ ಮಾಲಿಪಾಟೀಲ, ನರೇಂದ್ರ ರುದ್ನೂರ, ಬಸವರಾಜ ಪಾಟೀಲ ಊಡಗಿ, ಜಗದೇವಪ್ಪ ಭೀಮನಳ್ಳಿ, ಆರತಿ ಕಡಗಂಚಿ, ಭಾಗ್ಯಲಕ್ಷ್ಮಿ ನಾಯಿಕೋಡಿ, ಜನಾರ್ಧನರೆಡ್ಡಿ ತುಳೇರ, ಬಸವಪ್ರಭು ಪಾಗಾ, ರಾಜಶೇಖರ ನೀಲಂಗಿ, ಮಹಿಪಾಲರೆಡ್ಡಿ ಮುನ್ನೂರ, ಶಿವಾಜಿ ಇದ್ದರು.

ಸೇಡಂ ಉತ್ಸವ ಸಮಿತಿ ಕಾರ್ಯದರ್ಶಿ ನಾಗೇಂದ್ರಪ್ಪ ಡೊಳ್ಳಾ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಿಕ ಸಮಿತಿ ಅಧ್ಯಕ್ಷ ಬಸವರಾಜ ರೇವಗೊಂಡ ಸ್ವಾಗತಿಸಿದರು. ಪ್ರದೀಪ ಪಾಟೀಲ ನಿರೂಪಿಸಿದರು‌. ಅನಂತಯ್ಯಾ ಮುಸ್ತಾಜರ್ ವಂದಿಸಿದರು.

-----

ಯುವನಿಧಿಗೆ 80 ಸಾವಿರ ನೋಂದಣಿ
ರಾಜ್ಯಸರ್ಕಾರದ 5ನೇ ಗ್ಯಾರಂಟಿ ಯುವನಿಧಿಗೆ ಜ.12ರಂದು ಚಾಲನೆ ನೀಡಲಾಗಿದೆ. ರಾಜ್ಯದಲ್ಲಿ 80 ಸಾವಿರ ಯುವಜನತೆ ನೋಂದಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದರ ಸಂಖ್ಯೆ 5 ಲಕ್ಷ ದಾಟಲಿದೆ‌. ಮುಂದಿನ ವರ್ಷ ಇದರ ಸಂಖ್ಯೆ ದ್ವಿಗುಣಗೊಳ್ಳಲಿದೆ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.