ಕಲಬುರಗಿ: ಹೊಸ ಬಟ್ಟೆ ತೊಟ್ಟು ಮಿಂಚುತ್ತಿದ್ದ ಮಕ್ಕಳು,ಬಾಯಲ್ಲಿ ನೀರು ತರಿಸುವ ಚೂಡಾ, ಬೆಂಡು– ಬತ್ತಾಸು, ಹೆಣ್ಮಕ್ಕಳನ್ನು ಆಕರ್ಷಿಸುವ ಆಲಂಕಾರಿಕ, ಶೃಂಗಾರ ಸಾಮಗ್ರಿಗಳು. ಪುಟಾಣಿಗಳ ಚಿತ್ತ ಸೆಳೆಯುತ್ತಿರುವ ಆಟಿಕೆ ಸಾಮಾನು...
ಶರಣಬಸವೇಶ್ವರರ 200ನೇ ಜಾತ್ರಾ ಮಹೋತ್ಸವದ ನಿಮಿತ್ತ ದೇವಸ್ಥಾನ ಜಾತ್ರಾ ಮೈದಾನದಲ್ಲಿ ಬುಧವಾರ ಕಂಡು ಬಂದ ದೃಶ್ಯಗಳಿವು.
ಕೋವಿಡ್, ಲಾಕ್‌ಡೌನ್, ಅತಿವೃಷ್ಟಿ ಹೀಗೆ ಸಾಲುಸಾಲು ಸಂಕಷ್ಟಗಳನ್ನು ಕಂಡಿರುವ ವ್ಯಾಪಾರಿಗಳಿಗೆ ಅಪ್ಪನ ಜಾತ್ರೆಯ ‘ಬಣ್ಣದ ಲೋಕ’ ಭರವಸೆ ಮೂಡಿಸಿದೆ. ಎಲ್ಲೆಡೆ ಹಾಕಿರುವ ಮಳಿಗೆಗಳು, ಸಿಹಿ ತಿನಿಸುಗಳ ಮಾರಾಟದ ಭರಾಟೆ ಜಾತ್ರೆಯ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
ಬೆಂಡು– ಬತ್ತಾಸು, ಪೇಡೆ, ಜಿಲೇಬಿ– ಜಹಾಂಗೀರ್‌ನಿಂದ ಹಿಡಿದು ಬಹುಪಾಲು ಸಿಹಿ ತಿನಿಸುಗಳ ಮಳಿಗೆಗಳು ದೇವಸ್ಥಾನ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿವೆ. ಭಜ್ಜಿ, ಪಕೋಡಾ, ಚುರುಮರಿ, ಸೂಸಲಾ, ಪಾನಿಪುರಿ ಸೇರಿದಂತೆ ಬಗೆಬಗೆಯ ಕುರುಕಲು ತಿಂಡಿಗಳಿಗೂ ಇಲ್ಲಿ ಬರವಿಲ್ಲ. ಆದರೆ ಹೆಚ್ಚು ಗಮನ ಸೆಳೆದಿದ್ದು ರುಚಿ– ಖಾರ ಮಿಶ್ರಿತ ಚೂಡಾ. ಅಪ್ಪನ ಜಾತ್ರೆಯಲ್ಲಿ ಈ ಚೂಡಾ ತಿನ್ನದೇ ಹೋದವರಿಲ್ಲ ಎಂಬ ಮಾತಿದೆ.
ದೇವಸ್ಥಾನದ ಮುಖ್ಯದ್ವಾರದ ಬಳಿ ಮಡಕೆಗಳ ವ್ಯಾಪಾರವೂ ಜೋರಾಗಿತ್ತು. ಅಲ್ಲದೆ ವಿಭೂತಿ, ಕುಂಕುಮ, ಕಾಯಿ– ಕರ್ಪೂರದ ಮಳಿಗೆಗಳಿಗೆ ಜನರು ಮುಗಿಬಿದ್ದ ದೃಶ್ಯಗಳು ಕಂಡು ಬಂದವು.
ಅಪ್ಪನ ಜಾತ್ರೆಯಲ್ಲಿ ಅಕ್ಷರಶಃ ಗ್ರಾಮೀಣ ಸೊಗಡು ಅನಾವರಣಗೊಂಡಿತ್ತು. ಮಣ್ಣಿನ ಮಡಕೆ, ಹಂಚು, ಲಟ್ಟಣಿಗೆ, ಬಿದಿರಿನ ಬುಟ್ಟಿ, ಕಿವಿಯೋಲೆ, ಮಕ್ಕಳ ಆಟಿಕೆಗಳು ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳು ಜನರ ಗಮನ ಸೆಳೆದವು. ಅದರಲ್ಲೂ ಬಳೆ ಅಂಗಡಿಗಳು ಹೆಣ್ಮಕ್ಕಳ ಚಿತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಬಳೆಗಾರರಿಂದ ಬಣ್ಣ ಬಣ್ಣದ ಬಳೆಗಳನ್ನು ತೊಡಿಸಿಕೊಳ್ಳುತ್ತಿರುವ ದೃಶ್ಯಗಳು ಎಲ್ಲೆಡೆ ಕಂಡು ಬಂದವು.
ಬಿಸಿಲಿನ ಧಗೆ ಹೆಚ್ಚಿದ ಕಾರಣ ತಂಪು ಪಾನೀಯಗಳಿಗೂ ಬೇಡಿಕೆ ಹೆಚ್ಚಾಗಿತ್ತು. ಹಣ್ಣಿನ ಜ್ಯೂಸ್, ಐಸ್‌ಕ್ರೀಂ, ಕಬ್ಬಿನ ಹಾಲು, ಮಜ್ಜಿಗೆ ಮಾರಾಟ ಮಾಡುವ ಮಳಿಗೆಗಳ ಮುಂದೆ ಜನರ ದಂಡೇ ಸೇರಿತ್ತು.
ನೂರಾರು ಮೈಲು ದೂರದ ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ, ಗುಜರಾತ್, ದೆಹಲಿಯಿಂದ ಬಂದಿರುವ ನೂರಾರು ಬಡ ವ್ಯಾಪಾರಿಗಳು, ಕಲಾವಿದರಿಗೆ ಅಪ್ಪನ ಜಾತ್ರೆ ಜೀವನಾಧಾರವಾಗಿದೆ. ಕಳೆದ ಎರಡು ವರ್ಷಗಳಿಂದ ಹೈರಾಣಾಗಿದ್ದ ವ್ಯಾಪಾರಿಗಳಿಗೆ ಜಾತ್ರೆ ಒಂದಿಷ್ಟು ನೆಮ್ಮದಿ, ಭರವಸೆ ಮೂಡಿಸಿದೆ.
ಎಲ್ಲೆಡೆ ಬೆಲೆ ಏರಿಕೆಯದ್ದೆ ಮಾತು
‘ಎರಡು ವರ್ಷಗಳ ಹಿಂದೆ ಪ್ಲೇಟ್ ₹25 ಇದ್ದ ಚೂಡಾ ಈಗ ₹60 ಆಗಿದೆ. ₹10 ಇದ್ದ ಕಬ್ಬಿಣ ಹಾಲು ಈಗ ₹20 ಆಗಿದೆ. ಹೀಗಾಗಿ ಖರೀದಿ ಕಡಿಮೆ ಮಾಡಿದ್ದೇವೆ’ ಎಂದು ಸೇಡಂನಿಂದ ಜಾತ್ರೆಗೆ ಆಗಮಿಸಿದ್ದ ಪ್ರಕಾಶ ತಿಳಿಸಿದರು.
ಜಾತ್ರೆಗೆ ಆಗಮಿಸಿದ್ದ ಬಹುತೇಕರು ದುಪ್ಪಟ್ಟಾದ ಬೆಲೆಗಳ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಿರುವುದು ಕಂಡು ಬಂತು. ಎರಡು ವರ್ಷಗಳ ಹಿಂದೆ ನಡೆದ ಜಾತ್ರೆಯಲ್ಲಿ ಕೆ.ಜಿಗೆ ₹160 ಇದ್ದ ‘ಕಾರ’ ಈಗ ₹240 ಆಗಿದೆ. ಕೆ.ಜಿಗೆ ₹100 ಇದ್ದ ಜಿಲೇಬಿ ಈ ₹160ಕ್ಕೆ ಮಾರಾಟವಾಗುತ್ತಿವೆ. ಹೀಗೆ ಬಹುತೇಕ ಎಲ್ಲ ವಸ್ತುಗಳ ದರದಲ್ಲೂ ಹೆಚ್ಚಳವಾಗಿರುವುದು ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.