ADVERTISEMENT

ಕಲಬುರಗಿ: ಸೆಪ್ಟೆಂಬರ್‌ನಲ್ಲಿ ಜಯದೇವ ಆಸ್ಪತ್ರೆ ಕಟ್ಟಡ ಉದ್ಘಾಟನೆ

ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 14:30 IST
Last Updated 11 ಜುಲೈ 2024, 14:30 IST
ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಗುರುವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಂಸದ ರಾಧಾಕೃಷ್ಣ ದೊಡ್ಡಮನಿ, ವಿಧಾನ ಪರಿಷತ್‌ ಸದಸ್ಯ ಜಗದೇವ ಗುತ್ತೇದಾರ ಭೇಟಿ ನೀಡಿ ರೋಗಿಯೊಬ್ಬರ ಆರೋಗ್ಯ ವಿಚಾರಿಸಿದರು     –ಪ್ರಜಾವಾಣಿ ಚಿತ್ರ
ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ಗುರುವಾರ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಂಸದ ರಾಧಾಕೃಷ್ಣ ದೊಡ್ಡಮನಿ, ವಿಧಾನ ಪರಿಷತ್‌ ಸದಸ್ಯ ಜಗದೇವ ಗುತ್ತೇದಾರ ಭೇಟಿ ನೀಡಿ ರೋಗಿಯೊಬ್ಬರ ಆರೋಗ್ಯ ವಿಚಾರಿಸಿದರು     –ಪ್ರಜಾವಾಣಿ ಚಿತ್ರ   

ಕಲಬುರಗಿ: ಈ ತಿಂಗಳ ಅಂತ್ಯದಲ್ಲಿ ಇಲ್ಲಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆಯ ಕಟ್ಟಡವನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸುವ ಚಿಂತನೆ ಇದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು. 

ಜಯದೇವ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈಗಾಗಲೇ ₹ 183 ಕೋಟಿ ಅನುದಾನವನ್ನು ಒದಗಿಸಲಾಗಿದ್ದು, ಹೆಚ್ಚುವರಿಯಾಗಿ ₹ 60 ಕೋಟಿ ಅನುದಾನಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಕ್ಯಾಬಿನೆಟ್ ಮುಂದೆ ಇಟ್ಟು ಅನುಮೋದನೆ ಪಡೆದುಕೊಳ್ಳಲಾಗುವುದು. ಈಗಾಗಲೇ ಎರಡು ಕ್ಯಾಥ್‌ಲ್ಯಾಬ್‌ಗಳಿದ್ದು, ಹೊಸದಾಗಿ ಮತ್ತೊಂದನ್ನು ಖರೀದಿಸಲಾಗುವುದು. 371 ಹಾಸಿಗೆ ಸಾಮರ್ಥ್ಯದ ಹಾಸಿಗೆಯ ಆಸ್ಪತ್ರೆಯಾಗಿರುವುದರಿಂದ ಹೆಚ್ಚುವರಿ ಸಿಬ್ಬಂದಿ ಅಗತ್ಯಬಿದ್ದು, ಶೀಘ್ರವೇ ನೇಮಕ ಮಾಡಿಕೊಳ್ಳಲಾಗುವುದು’ ಎಂದರು. 

11 ಕೆವಿ ವಿದ್ಯುತ್ ಪೂರೈಕೆ ಸಾಮರ್ಥ್ಯದ ಘಟಕವನ್ನು ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ. ಶಾಶ್ವತ ನೀರು ಪೂರೈಕೆ ವ್ಯವಸ್ಥೆಗಾಗಿ ಶುಕ್ರವಾರ ಪೈಪ್‌ಲೈನ್‌ ಅಳವಡಿಕೆ ಕಾರ್ಯ ಶುರುವಾಗಲಿದೆ. ಇದರಿಂದಾಗಿ 15 ಲಕ್ಷ ಲೀಟರ್ ನೀರು ಸಂಗ್ರಹಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ADVERTISEMENT

ಮೂರು ವೈದ್ಯಕೀಯ ಕಾಲೇಜು ಮಂಜೂರು: ‘ವೈದ್ಯಕೀಯ ಶಿಕ್ಷಣ ಮಂಡಳಿಯು ರಾಜ್ಯದಲ್ಲಿ ಪಿಇಎಸ್ ವಿಶ್ವವಿದ್ಯಾಲಯ, ಬಾಗಲಕೋಟೆ ಜಿಲ್ಲೆಯ ಬಾಡಗಂಡಿ ಸಮೀಪದ ಎಸ್.ಆರ್. ಪಾಟೀಲ ಶಿಕ್ಷಣ ಸಂಸ್ಥೆ ಸೇರಿದಂತೆ ಒಟ್ಟು ಮೂರು ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ನೀಡಲಾಗಿದೆ. ರಾಮನಗರ ಹಾಗೂ ಕನಕಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಅನುಮತಿ ಕೇಳಿದ್ದೆವು, ಸಿಕ್ಕಿಲ್ಲ’ ಎಂದರು.  

‘ಕಲಬುರಗಿ ಹಾಗೂ ಜೇವರ್ಗಿಯಲ್ಲಿರುವ ತಾಯಿ ಮತ್ತು ಮಗು ಆಸ್ಪತ್ರೆಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ. ಈ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತಂದು ಶೀಘ್ರ ಆರಂಭಿಸುವಂತೆ ತಿಳಿಸಲಾಗುವುದು. ಕಲಬುರಗಿಯ ಜಿಮ್ಸ್ ಆವರಣದಲ್ಲಿರುವ ಜಿಲ್ಲಾ ಆಸ್ಪತ್ರೆಯ ಕಟ್ಟಡವನ್ನು ನೆಲಸಮಗೊಳಿಸಿ ಅಲ್ಲಿ ತಾಯಿ ಮತ್ತು ಮಗು ಆಸ್ಪತ್ರೆ ಕಟ್ಟಡ ನಿರ್ಮಿಸಲು ಟೆಂಡರ್ ಕರೆಯಲಾಗಿದೆ’ ಎಂದರು.

ನಂತರ ಸಚಿವ ಡಾ. ಶರಣಪ್ರಕಾಶ ಅವರು ಸಂಸದ ರಾಧಾಕೃಷ್ಣ ದೊಡ್ಡಮನಿ ಅವರೊಂದಿಗೆ ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಡೆಂಗಿ ಪ್ರಕರಣಗಳ ಮಾಹಿತಿ ಪಡೆದರು.

ಡೆಂಗಿ ಜ್ವರ ಸಂತ್ರಸ್ತರ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡದಂತೆ ನಾವು ಯಾರಿಗೂ ಸೂಚನೆ ನೀಡಿಲ್ಲ. ನಮ್ಮದು ಮಾಹಿತಿಯ ಮುಕ್ತ ಹರಿವಿಗೆ ಅವಕಾಶ ಕೊಡುವ ಸರ್ಕಾರ. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡುವೆ

-ಡಾ. ಶರಣಪ್ರಕಾಶ ಪಾಟೀಲ ವೈದ್ಯಕೀಯ ಶಿಕ್ಷಣ ಸಚಿವ

ಜಿಟಿಟಿಸಿ ಸೀಟು 2 ಸಾವಿರಕ್ಕೆ ಹೆಚ್ಚಳ

ರಾಜ್ಯದಲ್ಲಿ ಕೌಶಲ ತರಬೇತಿ ನೀಡುವ ಜಿಟಿಟಿಸಿ ಹಾಗೂ ಕೆಜಿಟಿಟಿಐಗಳಲ್ಲಿ ಪ್ರಸ್ತುತ ರಾಜ್ಯದಾದ್ಯಂತ 3 ಸಾವಿರ ಸೀಟುಗಳಿದ್ದು ಅವುಗಳಿಗೆ ಮತ್ತೆ ಎರಡು ಸಾವಿರ ಹೊಸ ಸೀಟುಗಳನ್ನು ಮಂಜೂರು ಮಾಡಲಾಗಿದ್ದು ಒಟ್ಟಾರೆ ಪ್ರತಿ ವರ್ಷ ಐದು ಸಾವಿರ ಪದವೀಧರರು ಹೊರಬರಲಿದ್ದಾರೆ ಎಂದು ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು. ‘ಕಲಬುರಗಿಯಲ್ಲಿ ₹120 ಕೋಟಿ ವೆಚ್ಚದಲ್ಲಿ ಬಹು ಕೌಶಲ ಅಭಿವೃದ್ಧಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಬಳ್ಳಾರಿಯಲ್ಲಿ ₹ 320 ಕೋಟಿ ವೆಚ್ಚದಲ್ಲಿ ಸ್ಕಿಲ್ ಪಾರ್ಕ್ ಆರಂಭಿಸಲಾಗುವುದು. ಕೊಪ್ಪಳ ಜಿಲ್ಲೆಯ ತಳಕಲ್ ಹಾಗೂ ಮೈಸೂರಿನ ವರುಣಾದಲ್ಲಿಯೂ ಬಹು ಕೌಶಲ ಅಭಿವೃದ್ಧಿ ಕೇಂದ್ರಗಳು ಆರಂಭಗೊಳ್ಳಲಿವೆ’ ಎಂದರು. ‘ಐಟಿಐನಲ್ಲಿ ಓದಿದ ಎಲ್ಲರಿಗೂ ಉದ್ಯೋಗ ಸಿಗುತ್ತಿದೆ. ಹೀಗಾಗಿ ಯುವಕ ಯುವತಿಯರು ಈ ಕೋರ್ಸ್ ಮಾಡಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.