ADVERTISEMENT

ಲಕ್ಷ ಪುಷ್ಪ ಬಿಲ್ವಾರ್ಚನೆ, ಇಷ್ಟಲಿಂಗ ಮಹಾಪೂಜೆ

ಶರಣಬಸವಪ್ಪ ಅಪ್ಪ, ದೊಡ್ಡಪ್ಪ ಎಸ್‌. ಅಪ್ಪ, ದಾಕ್ಷಾಯಣಿ ಅಪ್ಪ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 6:19 IST
Last Updated 15 ನವೆಂಬರ್ 2024, 6:19 IST
ಕಲಬುರಗಿಯಲ್ಲಿ ಗುರುವಾರ ಮರುಳಾರಾಧ್ಯ–ಶರಣಬಸವೇಶ್ವರರ ಮೂರ್ತಿಗೆ 9ನೇ ಪೀಠಾಧಿಪತಿ ದೊಡ್ಡಪ್ಪ ಎಸ್‌. ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಿಣಿ ಎಸ್‌. ಅಪ್ಪ ಹಾಗೂ ಕುಟುಂಬಸ್ಥರು ಪೂಜೆ ಸಲ್ಲಿಸಿದರು
ಕಲಬುರಗಿಯಲ್ಲಿ ಗುರುವಾರ ಮರುಳಾರಾಧ್ಯ–ಶರಣಬಸವೇಶ್ವರರ ಮೂರ್ತಿಗೆ 9ನೇ ಪೀಠಾಧಿಪತಿ ದೊಡ್ಡಪ್ಪ ಎಸ್‌. ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಿಣಿ ಎಸ್‌. ಅಪ್ಪ ಹಾಗೂ ಕುಟುಂಬಸ್ಥರು ಪೂಜೆ ಸಲ್ಲಿಸಿದರು   

ಕಲಬುರಗಿ: ಶರಣಬಸವೇಶ್ವರ ಸಂಸ್ಥಾನ ಮಹಾದಾಸೋಹದ 8ನೇ ಪೀಠಾಧಿಪತಿ ಶರಣಬಸವಪ್ಪ ಅಪ್ಪ, 9ನೇ ಪೀಠಾಧಿಪತಿ ದೊಡ್ಡಪ್ಪ ಎಸ್‌. ಅಪ್ಪ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರ್‌ಪರ್ಸನ್ ದಾಕ್ಷಾಯಣಿ ಎಸ್‌. ಅಪ್ಪ ಅವರ ಜನ್ಮದಿನವನ್ನು ಗುರುವಾರ ಸಂಭ್ರಮದಿಂದ ಆಚರಿಸಲಾಯಿತು.‌

ವೀರಶೈವ ಲಿಂಗಾಯತ ಮಹಾ ವೇದಿಕೆಯ ಜಿಲ್ಲಾ ಸಮಿತಿ ವತಿಯಿಂದ ಪೂಜ್ಯರ ಜನ್ಮದಿನದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.

ಬೆಳಗಿನ ಜಾವದಿಂದಲೇ ಶರಣಬಸವೇಶ್ವರರ ಕರ್ತೃ ಗದ್ದುಗೆಯ ಮೂರ್ತಿಗಳನ್ನು ಶುಚಿಗೊಳಿಸಿ, ನಾನಾ ಬಗೆಯ ಹೂಗಳಿಂದ ಅಲಂಕಾರ ಮಾಡಲಾಯಿತು. ಬೆಳಿಗ್ಗೆ 5.30ಕ್ಕೆ ಬೆಳಗುಂಪಿಯ ಅಭಿನವ ಪರ್ವತೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಪುರೋಹಿತರು, ಅರ್ಚಕರ ನೇತೃತ್ವದಲ್ಲಿ ಶರಣಬಸವೇಶ್ವರರ ಗದ್ದುಗೆಗೆ ಲಕ್ಷ ಪುಷ್ಪ ಬಿಲ್ವಾರ್ಚನೆಯ ಆರಂಭವಾಯಿತು. ಮೂರ್ನಾಲ್ಕು ಗಂಟೆಗೆ ನೂರಾರು ಭಕ್ತರು ಭಕ್ತಿಯಿಂದ ಲಕ್ಷ ಪುಷ್ಪ ಬಿಲ್ವಾರ್ಚನೆ ಮಾಡಿದರು.

ADVERTISEMENT

ಪಾಳಾದ ಗುರುಲಿಂಗ ಶಿವಾಚಾರ್ಯರ ನೇತೃತ್ವದಲ್ಲಿ ಬಿಲ್ವಾರ್ಚನೆ, 1001 ಇಷ್ಟಲಿಂಗ ಮಹಾಪೂಜೆ, ಶಿವದೀಕ್ಷೆ, 25 ಜಂಗಮ ವಟುಗಳಿಗೆ ಅಯ್ಯಾಚಾರ ಜರುಗಿತು. ಧಾರ್ಮಿಕ ವಿಧಿ ವಿಧಾನಗಳಂತೆ 300ಕ್ಕೂ ಹೆಚ್ಚು ಭಕ್ತರಿಗೆ ಲಿಂಗದೀಕ್ಷೆ ನೀಡಲಾಯಿತು. ಮಧ್ಯಾಹ್ನ 12ಕ್ಕೆ ಮಹಾಮಂಗಳಾರತಿಯೊಂದಿಗೆ ಮಂಗಲ ಮಾಡಲಾಯಿತು.

ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆಯಿಂದಲೇ ಭಕ್ತರ ದಂಡು ಹರಿದುಬಂತು. ‘ಶರಣಬಸವೇಶ್ವರ ಮಹಾರಾಜ್ ಕೀ ಜೈ’ ಘೋಷಣೆಯೂ ಮೊಳಗಿತು. ಶಾಲು, ಹಾರ–ತುರಾಯಿ, ಹಣ್ಣು–ಹಂಪಲು, ಸಿಹಿ ಹಿಡಿದುಕೊಂಡು ಬಂದು ಶರಣಬಸವಪ್ಪ ಅಪ್ಪ, ದೊಡ್ಡಪ್ಪ ಎಸ್‌. ಅಪ್ಪ ಹಾಗೂ ದಾಕ್ಷಾಯಿಣಿ ಅಪ್ಪ ಅವರಿಗೆ ಶುಭಕೋರಿದರು. ಶುಭಕೋರಲು ಬಂದ ಗಣ್ಯರು ಹಾಗೂ ಭಕ್ತ ಸಮೂಹಕ್ಕೆ ಅಪ್ಪ ಅವರು ಆಶೀರ್ವದಿಸಿದರು.

ಶಾಸಕ ಅಲ್ಲಮಪ್ರಭು ಪಾಟೀಲ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಅವರು ಅಪ್ಪ ಅವರಿಗೆ ಸನ್ಮಾನಿಸಿದರು.

ಬೃಹತ್ ಕಾರ್ಯಕ್ರಮ: ವೇದಿಕೆಯ ಮುಖಂಡ ಶ್ರೀಧರ್ ಎಂ. ನಾಗನಹಳ್ಳಿ ಮಾತನಾಡಿ, ‘ಪೂಜ್ಯರ ಜನ್ಮದಿನದ ಅಂಗವಾಗಿ ಪ್ರತಿ ವರ್ಷ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಪೂಜ್ಯರ ಸಾನ್ನಿಧ್ಯದಲ್ಲಿ 10 ಸಾವಿರ ಭಕ್ತರನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಮಾಡುವ ಸಂಕಲ್ಪ ಹೊಂದಿದ್ದೇವೆ’ ಎಂದರು.

ಕಾರ್ಯಕ್ರಮದಲ್ಲಿ ಶರಣಬಸವ ವಿ.ವಿ ಉಪಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕುಲಸಚಿವ ಎಸ್.ಜಿ. ಡೊಳ್ಳೇಗೌಡರ್, ಡೀನ್ ಲಕ್ಷ್ಮಿ ಪಾಟೀಲ ಮಾಕಾ, ಕುಲಸಚಿವ ಎಸ್.ಎಚ್.ಹೊನ್ನಳ್ಳಿ, ಹಣಕಾಸು ಅಧಿಕಾರಿ ಕಿರಣ ಮಾಕಾ, ಅಲ್ಲಮಪ್ರಭು ದೇಶಮುಖ, ವೇದಿಕೆ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ, ಪ್ರಮುಖರಾದ ಸುನಿಲ್ ಮಹಾಗಾವಂಕರ್, ಮಹೇಶಚಂದ್ರ ಪಾಟೀಲ ಕಣ್ಣಿ, ಆನಂದ ಕಣಸೂರ, ಪರಮೇಶ್ವರ ಯಳಮೇಲಿ, ಗುರುರಾಜ ಅಂಬಾಡಿ, ಸತೀಶ ಮಾಹುರ, ಶಿವಕುಮಾರ ಸಾವಳಗಿ, ಗುರುರಾಜ ಸುಂಟನೂರ, ಸುನಿಲ್ ಕೋಳ್ಕೂರ, ಶರಣು ಕರೇಕಲ್, ಕಿರಣ ಕಣ್ಣಿ, ಪ್ರಜ್ವಲ್ ಕೊರಳ್ಳಿ, ಅಜಯ ರೆಡ್ಡಿ ಉಪಸ್ಥಿತರಿದ್ದರು.

ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಗುರುವಾರ ನಡೆದ ಇಷ್ಟಲಿಂಗ ವೀರಶೈವ ಮಹಾಪೂಜೆಯಲ್ಲಿ ಪಾಲ್ಗೊಂಡಿದ್ದ ಭಕ್ತರು

- ಸಾವಿರಾರು ಭಕ್ತರಿಂದ ಇಷ್ಟಲಿಂಗ ಪೂಜೆ

ಶರಣಬಸವೇಶ್ವರ ದೇವಸ್ಥಾನ ಆವರಣದ ಸಭಾಭವನದಲ್ಲಿ ನಡೆದ ಸಾಮೂಹಿಕ ಇಷ್ಟಲಿಂಗ ಮಹಾಪೂಜೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.  ದೊಡ್ಡಪ್ಪ ಎಸ್‌. ಅಪ್ಪ ದಾಕ್ಷಾಯಣಿ ಎಸ್‌. ಅಪ್ಪ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಶರಣಬಸವಪ್ಪ ಅಪ್ಪ ಅವರ ಪುತ್ರಿಯರಾದ ಶಿವಾನಿ ಭವಾನಿ ಮತ್ತು ಮಹೇಶ್ವರಿ ಅವರೂ ಲಿಂಗಪೂಜೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.