ಕಲಬುರ್ಗಿ: ‘ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಹಾಲಿ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ ಅವರು ಆಡಳಿತ ಮಂಡಳಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸಂಸ್ಥೆಯ ಅಭಿವೃದ್ಧಿಗೆ ಅಡ್ಡಗಾಲಾಗಿದ್ದಾರೆ’ ಎಂದು ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ವಿಧಾನಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಆರೋಪಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಟೆಂಡರ್ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗಿದೆ.ಕೋಟ್ಯಂತರ ಹಣ ದುರುಪಯೋಗವಾಗಿದೆ’ ಎಂದು ದೂರಿದರು.
‘ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಸೀಟುಗಳಿಗೆ ಬೇಡಿಕೆಯೇ ಇಲ್ಲದಂತಾಗಿದೆ. ಮೂಲಸೌಕರ್ಯಗಳ ಅಭಿವೃದ್ಧಿಯ ಬಗ್ಗೆ ಕಾಳಜಿಯೇ ಇಲ್ಲದಂತಾಗಿದೆ. ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಪಿಡಿಎ ಕಾಲೇಜಿಗೆ 10 ಕೋರ್ಸುಗಳಿಗೆ ಮಾನ್ಯತೆ ದೊರಕಿಸಿಕೊಟ್ಟಿದ್ದೆ. ಟೆಕ್ವಿಪ್ ಯೋಜನೆಯಡಿ ಕೋಟ್ಯಂತರ ಅನುದಾನ ಬಂದಿತ್ತು. ಇತ್ತೀಚೆಗೆ ಕೇವಲ ಐದು ಕೋರ್ಸುಗಳಿಗೆ ಮಾನ್ಯತೆ ದೊರಕಿದೆ. ಹೋಮಿಯೊಪಥಿ ವಿಭಾಗದ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣದ ₹ 10.50 ಕೋಟಿಯ ಗುತ್ತಿಗೆಯನ್ನು ₹ 1ರಿಂದ ₹ 2 ಲಕ್ಷ ಮೊತ್ತದ ಗುತ್ತಿಗೆ ಕೆಲಸವವನ್ನು ನಿರ್ವಹಿಸುವವರಿಗೆ ಕೊಡಲಾಗಿದೆ‘ ಎಂದು ಆರೋಪಿಸಿದರು.
‘ಮಹಾದೇವಪ್ಪ ರಾಂಪೂರೆ ಅವರು ಕಷ್ಟಪಟ್ಟು ಈ ಸಂಸ್ಥೆಯನ್ನು ಬೆಳೆಸಿದ್ದರು. ಅಕ್ರಮವನ್ನು ಪ್ರಶ್ನಿಸುವ ಸದಸ್ಯರನ್ನು ಹೊರಹಾಕಲಾಗುತ್ತಿದೆ. ಆರೋಪ ಎದುರಿಸುತ್ತಿರುವ ಸಹ ಪ್ರಾಧ್ಯಾಪಕರನ್ನು ಆಡಳಿತ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. 2013ರಲ್ಲಿ ನನ್ನ ಅವಧಿಯಲ್ಲಿ ಸಿಬಿಎಸ್‌ಇ ಪಠ್ಯಕ್ರಮದ ಶಾಲೆಯನ್ನು ಆರಂಭಿಸಲು ಬ್ಯಾಂಕ್‌ನಲ್ಲಿ ಸಾಲ ಮಂಜೂರಾಗಿತ್ತು. ಆದರೆ, ಭೀಮಾಶಂಕರ ಬಿಲಗುಂದಿಅವರು ಸಾಲ ಮಂಜೂರು ಮಾಡದಂತೆ ಬ್ಯಾಂಕಿಗೆ ತಕರಾರು ಅರ್ಜಿ ಸಲ್ಲಿ
ಸಿದ್ದರು. ಆ ಸಂದರ್ಭದಲ್ಲಿ ₹ 6ರಿಂದ ₹ 8 ಕೋಟಿಯಲ್ಲಿ ಮುಕ್ತಾಯವಾಗುತ್ತಿದ್ದ ಶಾಲಾ ಕಟ್ಟಡಕ್ಕೆ ಇಂದು ₹ 22 ಕೋಟಿ ಖರ್ಚು ಮಾಡುತ್ತಿದ್ದಾರೆ’ ಎಂದರು.
ಎಚ್‌ಕೆಇ ಆಡಳಿತ ಮಂಡಳಿ ಸದಸ್ಯ ಸಂಪತ್‌ಕುಮಾರ್ ಲೋಯಾ ಮಾತನಾಡಿ, ‘ಆಡಳಿತ ಮಂಡಳಿ ಸದಸ್ಯರ ಯಾವ ಅಭಿಪ್ರಾಯಕ್ಕೂ ಬೆಲೆ ಸಿಗುತ್ತಿಲ್ಲ. ಹೇಗಾದರೂ ಮಾಡಿ ಚುನಾವಣೆ ಗೆಲ್ಲಬೇಕು ಎಂಬುದೇ ಅವರ ಗುರಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮೋಶಿ ಪೆನಲ್‌ನಿಂದ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಆರ್.ಎಸ್.ಹೊಸಗೌಡ, ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿರುವ ಜಿ.ಡಿ.ಅಣಕಲ್, ಶಿವರಾಜ ನಿಗ್ಗುಡಗಿ, ಡಾ. ವಿಲಾಸಬಾಬು ಕೊರವಾರ ಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.