ADVERTISEMENT

ಕಾಯಕದಿಂದ ಶ್ರೇಷ್ಠರಾದ ಶಿವಕುಮಾರ ಶ್ರೀ: ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ

ಡಾ.ಶಿವಕುಮಾರ ಸ್ವಾಮೀಜಿ ಜಯಂತಿ ಅಂಗವಾಗಿ ಗುರುವಂದನಾ ಮಹೋತ್ಸವ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 16:12 IST
Last Updated 1 ಏಪ್ರಿಲ್ 2024, 16:12 IST
<div class="paragraphs"><p>ಕಲಬುರಗಿಯಲ್ಲಿ ಸೋಮವಾರ ನಡೆದ ಡಾ.ಶಿವಕುಮಾರ್‌ ಶ್ರೀಗಳ ಗುರುವಂದನಾ ಮಹೋತ್ಸವದಲ್ಲಿ ಪ್ರಗತಿಪರ ಕೃಷಿಕ ಮಹಿಳೆ ಗುರುಬಾಯಿ ಆಳಂದ ಅವರಿಗೆ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ ಹಾಗೂ ಶಿಕ್ಷಕ ಡಿ.ಎನ್‌.ಪಾಟೀಲ ಅವರಿಗೆ ‘ಡಾ.ಶಿವಕುಮಾರ್‌ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. </p></div>

ಕಲಬುರಗಿಯಲ್ಲಿ ಸೋಮವಾರ ನಡೆದ ಡಾ.ಶಿವಕುಮಾರ್‌ ಶ್ರೀಗಳ ಗುರುವಂದನಾ ಮಹೋತ್ಸವದಲ್ಲಿ ಪ್ರಗತಿಪರ ಕೃಷಿಕ ಮಹಿಳೆ ಗುರುಬಾಯಿ ಆಳಂದ ಅವರಿಗೆ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ ಹಾಗೂ ಶಿಕ್ಷಕ ಡಿ.ಎನ್‌.ಪಾಟೀಲ ಅವರಿಗೆ ‘ಡಾ.ಶಿವಕುಮಾರ್‌ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

   

ಕಲಬುರಗಿ: ‘ಜಾತಿ–ಮತಗಳ ಭೇದವಿಲ್ಲದೇ ಮಠಕ್ಕೆ ಬರುವ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಶಿವಕುಮಾರ ಸ್ವಾಮೀಜಿ ಹಳ್ಳಿ–ಹಳ್ಳಿಗಳಿಗೆ ಜೋಳಿಗೆ ಹಿಡಿದು ಹೋಗಿ ಅಹರ್ನಿಶಿ ದುಡಿದಿದ್ದಾರೆ. ಅವರ ಕಾಯಕತತ್ವದ ಫಲವಾಗಿ ಸಿದ್ಧಗಂಗಾ ಮಠದಲ್ಲಿ ಇಂದು ಸಾವಿರಾರು ವಿದ್ಯಾರ್ಥಿಗಳು ತ್ರಿವಿಧ ದಾಸೋಹ ಪಡೆಯುತ್ತಿದ್ದಾರೆ. ಅಲ್ಲಿ ಕಲಿಯುವ ಮಕ್ಕಳು ಬಡವರಲ್ಲ, ಅವರು ಭಾಗ್ಯವಂತರು’ ಎಂದು ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನಹಿಪ್ಪರಗಾ ಶಿವಲಿಂಗೇಶ್ವರ ವಿರಕ್ತ ಮಠದ ಅಭಿನವ ಶಿವಲಿಂಗೇಶ್ವರ ಸ್ವಾಮೀಜಿ ಬಣ್ಣಿಸಿದರು.

ಜಿಲ್ಲಾ ವೀರಶೈವ ಸಮಾಜ ಹಾಗೂ ಸಿದ್ಧಾಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಕಲಬುರಗಿಯಿಂದ ನಗರದ ಪತ್ರಕರ್ತರ ಭವನದ ಮೇಲಿನ ಸಾಂಸ್ಕೃತಿಕ ‌ಭವನದಲ್ಲಿ‌ ಸೋಮವಾರ ಸಿದ್ಧಾಗಂಗಾ ಮಠದ ತ್ರಿವಿಧ ದಾಸೋಹಿ ಡಾ. ಶಿವಕುಮಾರ ಸ್ವಾಮೀಜಿ ಅವರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸಿದ್ಧಾಗಂಗಾ ಶ್ರೀಗಳ 117ನೇ ಗುರುವಂದನಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ADVERTISEMENT

‘ಜಗತ್ತಿನ ಯಾವುದೇ ಮೂಲೆಯಲ್ಲಿ ಬಿಟ್ಟರೂ ಬದುಕಬಲ್ಲ ಸಾಮರ್ಥ್ಯ, ಸಂಸ್ಕಾರವನ್ನು ಸಿದ್ಧಗಂಗಾ ಮಠದಲ್ಲಿ ಓದಿದ ವಿದ್ಯಾರ್ಥಿಗಳು ಪಡೆಯುತ್ತಾರೆ. ಅಂಥ ಸಂಸ್ಕಾರ ಕಲಿಸಿದ ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳ ಹೆಸರು ಕರ್ನಾಟಕದ ಹೆಸರು ಇರುವ ತನಕವೂ ಅಜರಾಮರ’ ಎಂದರು. ಶಿವಕುಮಾರ ಶ್ರೀಗಳೊಟ್ಟಿಗೆ ಲಿಂಗಪೂಜೆಯಲ್ಲಿ ಮಾಡಿದ ಅನುಭವವನ್ನು ಹಂಚಿಕೊಂಡರು.

‘ಊಟ, ವಸತಿ, ಶಿಕ್ಷಣ ಉಚಿತವಾಗಿ ನೀಡುವ ಮೂಲಕ ಮಠಗಳು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿವೆ. ಬೆಳಗಾವಿಯ ನಾಗನೂರು ಮಠ ಇಲ್ಲದಿದ್ದರೆ ಜಗವೆಲ್ಲ ನಗುತಿರಲಿ, ಜಗದಳುವು ನನಗಿರಲಿ ಎಂಬ ಕವಿತೆ ಬರೆದ ಈಶ್ವರ ಸಣಕಲ್‌, ಧಾರವಾಡದ ಮುರುಘಾಮಠ ಇಲ್ಲದಿದ್ದರೆ ಪಾಟೀಲ ಪುಟ್ಟಪ್ಪ ಅವರು ಸಮಾಜಕ್ಕೆ ಸಿಗುತ್ತಿರಲಿಲ್ಲ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ‘ಮಠ–ಮಾನ್ಯಗಳಿಂದ ದೇಶದಲ್ಲಿ ಸಂಸ್ಕಾರ ಉಳಿದಿದೆ. ಮಠಗಳು ಧರ್ಮವನ್ನು ಉಳಿಸುವ ಜೊತೆಗೆ ಮಕ್ಕಳಿಗೆ ಶಿಕ್ಷಣ, ಸಂಸ್ಕಾರವನ್ನೂ ಕೊಡುತ್ತಿವೆ. ಸಿದ್ಧಗಂಗಾ ಅಂಥ ಮಠಗಳಲ್ಲೊಂದು. ಅದಕ್ಕೆ ದಾರಿದೀಪವಾದವರು ಶಿವಕುಮಾರ್ ಸ್ವಾಮೀಜಿ. 12ನೇ ಶತಮಾನದಲ್ಲಿ ಬಸವಣ್ಣನವರು ಬೋಧಿಸಿದ ಕಾಯಕತತ್ವವನ್ನು ಅನುಷ್ಠಾನಗೊಳಿಸಿದ ಕೀರ್ತಿ ಶಿವಕುಮಾರ ಶ್ರೀಗಳಿಗೆ ಸಲ್ಲುತ್ತದೆ’ ಎಂದು ಹೇಳಿದರು.

ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘದ ಅಧ್ಯಕ್ಷರೂ ಆಗಿರುವ ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲಹಂಗರಗಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ‘ಸಿದ್ಧಗಂಗಾ ಮಠವು ನನಗೆ ಬದುಕಿನಲ್ಲಿ ಅನ್ನ ದುಡಿದು ತಿನ್ನಲು ಕಲಿಸಿದ ಸ್ಥಳ. ಸಿದ್ಧಗಂಗಾ ಮಠದ ಬೆಟ್ಟದ ಮೇಲೆ ದೇವನೊಬ್ಬ ನಾಮ ಹಲವು, ಕಾಯಕವೇ ಕೈಲಾಸ ಎಂದು ಬರೆದಿದ್ದಾರೆ. ಮನುಷ್ಯ ಬದುಕಬೇಕಾದರೆ, ಇವೆರಡನ್ನೂ ಅರ್ಥೈಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ’ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ ಮಾತನಾಡಿದರು. ಜಿಲ್ಲಾ ವೀರಶೈವ ಸಮಾಜದ‌ ಉಪಾಧ್ಯಕ್ಷ ಕಲ್ಯಾಣಪ್ಪ ಪಾಟೀಲ ಮಳಖೇಡ, ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಘೂಳಿ ವೇದಿಕೆಯಲ್ಲಿದ್ದರು. ದೇವೇಂದ್ರಪ್ಪ ಅವಂಟಿ ಸ್ವಾಗತಿಸಿ, ವಂದಿಸಿದರು. ಚನ್ನಬಸಯ್ಯ ಗುರುವಿನ ನಿರೂಪಿಸಿದರು.

Cut-off box - ಪ್ರಶಸ್ತಿ ಪ್ರದಾನ ಆಳಂದ ತಾಲ್ಲೂಕಿನ ಧಂಗಾಪುರದ ಪ್ರಗತಿಪರ ಕೃಷಿಕ ಮಹಿಳೆ ಗುರುಬಾಯಿ ಆಳಂದ ಅವರಿಗೆ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ ಹಾಗೂ ಆಳಂದ ತಾಲ್ಲೂಕಿನ ನೆಲ್ಲೂರಿನ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಡಿ.ಎನ್‌.ಪಾಟೀಲ ಅವರಿಗೆ ‘ಡಾ.ಶಿವಕುಮಾರ್‌ ಶ್ರೀ’ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ‘ಪ್ರಜಾವಾಣಿ’ ಹಿರಿಯ ಛಾಯಾಗ್ರಾಹಕ ತಾಜುದ್ದೀನ್‌ ಆಜಾದ್‌ ಹಿರಿಯ ಪತ್ರಕರ್ತ ಮಹಿಪಾಲರಡ್ಡಿ ಮುನ್ನೂರ ಸುಮಂಗಲಿ ಡಿಜಿಟಲ್‌ ಕೇಬಲ್‌ ನೆಟ್‌ವರ್ಕ್‌ನ ಮಾಲೀಕ ವೆಂಕಟೇಶ ಮೂರ್ತಿ ಪರವಾಗಿ ಅವರ ಪುತ್ರಿ ಸಹನಾ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಮಹಿಪಾಲರಡ್ಡಿ ಮುನ್ನೂರು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.