ADVERTISEMENT

ಕಮಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು | ಉಪನ್ಯಾಸಕರ ಕೊರತೆ: ಗುಣಮಟ್ಟಕ್ಕೆ ಹೊಡೆತ

ಕಮಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ ಕಾಡುತ್ತಿವೆ ಹಲವು ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2024, 5:44 IST
Last Updated 25 ಜೂನ್ 2024, 5:44 IST
ಕಮಲಾಪುರ ಬಾಲಕಿಯರ ಪದವಿ ಪೂರ್ವ ಕಾಲೇಜು ಕಟ್ಟಡ
ಕಮಲಾಪುರ ಬಾಲಕಿಯರ ಪದವಿ ಪೂರ್ವ ಕಾಲೇಜು ಕಟ್ಟಡ   

ಕಮಲಾಪುರ: ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ಒದಗಿಸುತ್ತಿರುವ ಕಮಲಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ಕಾಡುತ್ತಿದೆ. ಇದರಿಂದ ಗುಣಮಟ್ಟದ ಶಿಕ್ಷಣ ನೀಡುವ ಪ್ರಯತ್ನಕ್ಕೆ ಹಿನ್ನೆಡೆಯಾಗುತ್ತಿದೆ.

ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಕಲಾ, ವಿಜ್ಞಾನ, ವಾಣಿಜ್ಯ ವಿಭಾಗ ಸೇರಿ ದ್ವಿತೀಯ ವರ್ಷದಲ್ಲಿ 280, ಪ್ರಥಮ ವರ್ಷದಲ್ಲಿ 180 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇತಿಹಾಸ, ಕನ್ನಡ, ಅರ್ಥಶಾಸ್ತ್ರ ವಿಷಯ ಬೋಧನೆಗೆ ತಲಾ ಇಬ್ಬರು ಉಪನ್ಯಾಸಕರ ಅಗತ್ಯವಿದೆ. ಆದರೆ, ಕಳೆದ 10 ವರ್ಷಗಳಿಂದ ಕನ್ನಡಕ್ಕೆ ಒಬ್ಬ ಉಪನ್ಯಾಸಕರೂ ಇಲ್ಲ. ಐದು ವರ್ಷಗಳಿಂದ ವ್ಯವಹಾರ ಅಧ್ಯಯನ ವಿಷಯ ಬೋಧನೆ ಹಾಗೂ ಎರಡು ವರ್ಷಗಳಿಂದ ಅರ್ಥಶಾಸ್ತ್ರ ಉಪನ್ಯಾಸಕರಿಲ್ಲ. ಈ ವಿಷಯಗಳ ಬೋಧನೆಗೆ ‘ಅತಿಥಿ’ ಉಪನ್ಯಾಸಕರೇ ಆಧಾರ!

ADVERTISEMENT

‘ಕೇವಲ 100 ಅಡಿ X 100 ಅಡಿ ಜಾಗದಲ್ಲಿ ಕಾಲೇಜು ಕಟ್ಟಡವಿದೆ. ಕಟ್ಟಡ ವಿಸ್ತರಿಸಿಕೊಳ್ಳಲೂ ಜಾಗವಿಲ್ಲ. ತರಗತಿ ಕೊಠಡಿಗಳೂ ಚಿಕ್ಕದಾಗಿವೆ. ಕಲಾ ವಿಭಾಗದಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿದ್ದು, ಎರಡು ವಿಭಾಗಗಳಲ್ಲಿ ವಿಂಗಡಿಸುವ ಅಗತ್ಯವಿದೆ. ಇದ್ದ ಕಟ್ಟಡದಲ್ಲಿ ವಿಜ್ಞಾನ ಪ್ರಯೋಗಾಲಯ, ಚಿಕ್ಕದೊಂದು ಗ್ರಂಥಾಲಯವಿದೆ. ಕಳೆದ ಬಾರಿ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಶೇ 57ರಷ್ಟು ಫಲಿತಾಂಶ ಬಂದಿದೆ. ಪ್ರಸಕ್ತ ವರ್ಷದಿಂದ ಕಂಪ್ಯೂಟರ್ ಸೈನ್ಸ್ ವಿಷಯ ಆರಂಭಿಸುವ ಉದ್ದೇಶವಿದ್ದು, ಅನುಮತಿ ಕೋರಿ ಪತ್ರ ಬರೆದಿದ್ದೇವೆ’ ಎಂದು ಪ್ರಾಚಾರ್ಯ ಜಿ.ಪಿ.ಭೂಸಾಳೆ ತಿಳಿಸಿದರು.

ಕಮಲಾಪುರ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಈ ವರ್ಷ ಸುಮಾರು 200 ವಿದ್ಯಾರ್ಥಿಗಳಿದ್ದಾರೆ. ಕಳೆದ 8 ವರ್ಷಗಳಿಂದ ಅರ್ಥಶಾಸ್ತ್ರ ಬೋಧನೆಗೆ ಕಾಯಂ ಉಪನ್ಯಾಸಕರಿಲ್ಲ. 6 ವರ್ಷದಿಂದ ಕನ್ನಡಕ್ಕೆ ಕಾಯಂ ಬೋಧಕರಿಲ್ಲ. ಕಳೆದ ವರ್ಷ ಸಮಾಜಶಾಸ್ತ್ರ ಉಪನ್ಯಾಸಕರೂ ನಿವೃತ್ತಿ ಹೊಂದಿದ್ದಾರೆ. ಕನ್ನಡ, ಅರ್ಥಶಾಸ್ತ್ರ ಅತಿಥಿ ಉಪನ್ಯಾಸಕರು, ಸಮಾಜ ಶಾಸ್ತ್ರವನ್ನು ಪ್ರಾಚಾರ್ಯರಾದ ಶಶಿಕಲಾ ಮಾಲಿಪಾಟೀಲ ಅವರೇ ಬೋಧಿಸುತ್ತಿದ್ದಾರೆ.

ಮಳೆಗಾಲದಲ್ಲಿ ಕಾಲೇಜು ಆವರಣ ಜಲಾವೃತವಾಗುತ್ತದೆ. ಈ ವರ್ಷ ಬೇಗನೆ ಮಳೆಯಾಗಿದ್ದು, ಆವರಣದಲ್ಲಿ ಕೆಸರು ಗದ್ದೆಯಂತಾಗಿದೆ. ಕುಡಿಯುವ ನೀರಿಗೆ ಕೊಳವೆಬಾವಿ ಇದೆ. ಆ ನೀರು ಶುದ್ಧೀಕರಿಸಲು ಶುದ್ಧೀಕರಣ ಯಂತ್ರ ಬೇಕಾಗಿದೆ. ಕಾಲೇಜಿನಲ್ಲಿ ವಿಜ್ಞಾನಕ್ಕೆ ಸಂಬಂಧಿಸಿದ ಸುಸಜ್ಜಿತ ಪ್ರಯೋಗಾಲಯ, ಕಂಪ್ಯೂಟರ್‌ ಲ್ಯಾಬ್, ಗ್ರಂಥಾಲಯ, ಸುಸಜ್ಜಿತ ತರಗತಿ ಕೋಣೆಗಳೂ ಇವೆ. ಅತ್ಯಂತ ಹಳೆಯದಾದ ಈ ಕಾಲೇಜು ಈ ಭಾಗದ ಶೈಕ್ಷಣಿಕ ಏಳಿಗೆಗೆ ಮಹತ್ವದ ಕೊಡುಗೆ ನೀಡಿದೆ.

ಮಹಾಗಾಂವ ಕ್ರಾಸ್‌ ಸರ್ಕಾರಿ ಪದವಿ ಪೂರ್ವ ಕಾಲೇಜು ಮಹಾಗಾಂವ ಕ್ರಾಸ್‌ನಿಂದ ಸುಮಾರು 1.5 ಕಿ.ಮೀ. ದೂರದಲ್ಲಿದ್ದು, ವಿದ್ಯಾರ್ಥಿಗಳಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ.

‘ರಾಷ್ಟ್ರೀಯ ಹೆದ್ದಾರಿಗೆ ಅಂಟಿಕೊಂಡೇ ಈ ಕಾಲೇಜು ಇದೆ. ಬಸ್‌ಗಳ ನಿಲ್ಲುವುದಿಲ್ಲ, ಹೀಗಾಗಿ ನಡೆದುಕೊಂಡೆ ಕಾಲೇಜಿಗೆ ತೆರಳಬೇಕು. ಕಾಲೇಜಿನಿಂದ ಮರಳುವಾಗಲೂ ಬಸ್‌ ನಿಲ್ಲಿಸುವುದಿಲ್ಲ’ ಎಂಬುದು ವಿದ್ಯಾರ್ಥಿಗಳ ಅಳಲು.

ಜಿ.ಪಿ.ಭೂಸಾಳೆ
ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದೆ. ತರಗತಿ ಕೋಣೆಗಳು ಇಕ್ಕಟ್ಟಾಗಿವೆ. ಕಟ್ಟಡದ ಆಚೆ ಒಂದಿಂಚು ಜಾಗವೂ ನಮ್ಮಗಿಲ್ಲ. ಸೂಕ್ತ ವ್ಯವಸ್ಥೆ ಕಲ್ಪಿಸಿ ಇನ್ನಷ್ಟು ಜಾಗ ಒದಗಿಸಿ ಕಟ್ಟಡ ನಿರ್ಮಿಸಬೇಕು
ಜಿ.ಪಿ.ಭೂಸಾಳೆ ಪ್ರಾಚಾರ್ಯ ಸರ್ಕಾರಿ ಬಾಲಕಿಯರ ಪಿಯು ಕಾಲೇಜು
ಶಶಿಕಲಾ ಮಾಲಿಪಾಟೀಲ
ಮಳೆಯಾದಾಗ ಕಾಲೇಜು ಆವರಣದಲ್ಲಿ ಕೆಸರಾಗುತ್ತದೆ ಇದನ್ನು ಸರಿಪಡಿಸಬೇಕು. ವಿದ್ಯಾರ್ಥಿಗಳಿಗೆ ಕುಡಿಯುವ ನೀರು ಶುದ್ಧೀಕರಿಸಲು ಯಂತ್ರ ಒದಗಿಸಬೇಕು
ಶಶಿಕಲಾ ಮಾಲಿಪಾಟೀಲ ಪ್ರಾಚಾರ್ಯೆ ಸರ್ಕಾರಿ ಪಿಯು ಕಾಲೇಜು ಕಮಲಾಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.