ADVERTISEMENT

ಶ್ರಾವಣ ಸೋಮವಾರ: ದೇಗುಲಗಳಲ್ಲಿ ಭಕ್ತರ ದಂಡು

ಶರಣಬಸವೇಶ್ವರ ದೇವಸ್ಥಾನ ಸೇರಿ ವಿವಿಧೆಡೆ ವಿಶೇಷ ಪೂಜೆ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2024, 4:33 IST
Last Updated 27 ಆಗಸ್ಟ್ 2024, 4:33 IST
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶ್ರಾವಣ ಸೋಮವಾರ ಪ್ರಯುಕ್ತ ಭಕ್ತರ ದಂಡು ಕಂಡುಬಂದಿತು
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನ ಆವರಣದಲ್ಲಿ ಶ್ರಾವಣ ಸೋಮವಾರ ಪ್ರಯುಕ್ತ ಭಕ್ತರ ದಂಡು ಕಂಡುಬಂದಿತು   

ಕಲಬುರಗಿ: ಶ್ರಾವಣ ಸೋಮವಾರ ಪ್ರಯುಕ್ತ ನಗರದ ಹಲವು ದೇವಸ್ಥಾನಗಳಲ್ಲಿ ಭಕ್ತರ ದಂಡು ಕಂಡುಬಂದಿತು. ಸರದಿಯಲ್ಲಿ ನಿಂತು ವಿಶೇಷ ಪೂಜೆ ಸಲ್ಲಿಸಿ, ಭಕ್ತಿ ಸಮರ್ಪಿಸಿದರು.

ಕಲ್ಯಾಣ ಕರ್ನಾಟಕದ ಆರಾಧ್ಯ ದೈವ ಶರಣಬಸವೇಶ್ವರ ದೇವಸ್ಥಾನ ಸೇರಿದಂತೆ ರಾಮಮಂದಿರ, ರಾಮತೀರ್ಥ ಮಂದಿರ, ಸಾಯಿಮಂದಿರ, ಸರಾಫ್‌ ಬಜಾರ್‌ನ ಗಣೇಶ ಮಂದಿರ, ರಾಯರ ಮಠ, ವಿವಿಧೆಡೆಯ ಆಂಜನೇಯ ದೇವಸ್ಥಾನ, ಈಶ್ವರ ದೇವಸ್ಥಾನ, ಸಿದ್ಧಿ ವಿನಾಯಕ, ಅಂಬಾಭವಾನಿ, ಯಲ್ಲಮ್ಮದೇವಿ ದೇವಸ್ಥಾನಗಳಲ್ಲಿ ಮಹಿಳೆಯರು, ಮಕ್ಕಳಾದಿಯಾಗಿ ಭಕ್ತರು ಪೂಜೆ ಸಲ್ಲಿಸಿದರು.

ಶರಣಬಸವೇಶ್ವರ ದೇವಸ್ಥಾನದಲ್ಲಿ ನಸುಕಿನ ಜಾವ ಶರಣಬಸವರಿಗೆ ವಿಶೇಷ ಪೂಜೆ, ಅಭಿಷೇಕ ಬಳಿಕ ಆರತಿ ಬೆಳಗಿ ನೈವೇದ್ಯ ಅರ್ಪಣೆ ಮಾಡಲಾಯಿತು. ಮಹಾ ಮಂಗಳಾರತಿ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಭಕ್ತರು ಎರಡು ಸಾಲುಗಳಲ್ಲಿ ನಿಂತು ಗರ್ಭಗುಡಿಯಲ್ಲಿರುವ ಶರಣಬಸವೇಶ್ವರರ ದರ್ಶನ ಪಡೆದರು. ನಂತರ ಕಾಯಿ ಒಡೆದು ಕರ್ಪೂರ, ಊದಿನಕಡ್ಡಿ ಬೆಳಗಿದರು. ದೇವರಿಗೆ ಹೂವು, ಬಿಲ್ವಪತ್ರಿ ಅರ್ಪಿಸಿದರು.

ADVERTISEMENT

ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಜೈ ಭಾರತ ಮಾತಾ ಸೇವಾ ಸಮಿತಿಯಿಂದ ನಿರಗುಡಿ ಹವಾ ಮಲ್ಲಿನಾಥ ಮಹಾರಾಜರ ಜನ್ಮದಿನದ ಅಂಗವಾಗಿ ಟೆಂಟ್‌ ಹಾಕಿ ಭಕ್ತರಿಗೆ ಹುಗ್ಗಿ, ಅನ್ನ ಸಾಂಬಾರು ವಿತರಿಸಲಾಯಿತು. ಕೆಲವರು ವಾಹನಗಳಲ್ಲಿ ಪ್ರಸಾದ ತಂದು ವಿತರಿಸಿದರು. ಕುಟುಂಬ ಸಮೇತರಾಗಿ ಆಗಮಿಸಿದ ಭಕ್ತರು ಕೂಡ ಮನೆಯಿಂದ ತಂದಿದ್ದ ಶಿರಾ, ಬಗೆಬಗೆಯ ಚಿತ್ರಾನ್ನ, ರೊಟ್ಟಿ ಪಲ್ಯೆ, ಬಾಳೆಹಣ್ಣು ಸೇರಿದಂತೆ ಸಿಹಿತಿನಿಸುಗಳನ್ನು ವಿತರಿಸಿದರು. ಕೆಲವರು ಅಲ್ಲಿದ್ದ ನಿರಾಶ್ರಿತರಿಗೆ ಬ್ಲಾಂಕೆಟ್‌ಗಳನ್ನು ನೀಡಿ ಭಕ್ತಿಭಾವ ಮೆರೆದರು.

ಭಕ್ತರದ ದಟ್ಟಣೆ ನಿಯಂತ್ರಿಸಲು ಪೊಲೀಸರೊಂದಿಗೆ ಶರಣಬಸವೇಶ್ವರ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ, ಸ್ವಯಂ ಸೇವಕರು ಕೈಜೋಡಿಸಿದರು. ಸಂಚಾರ ನಿಯಂತ್ರಣಕ್ಕಾಗಿ ಗೋವಾ ಹೋಟೆಲ್‌ನಿಂದ ಲಾಲಗೇರಿ ಕ್ರಾಸ್‌ವರೆಗೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ಎರಡು ಬದಿಯಲ್ಲಿ ಕಟ್ಟಿಗೆಯ ಬ್ಯಾರಿಕೇಡ್‌ ಕಟ್ಟಲಾಗಿತ್ತು. ಸಂಚಾರ ಪೊಲೀಸರು ಸ್ಥಳದಲ್ಲಿದ್ದು, ಭಕ್ತರಿಗೆ ಸಮಸ್ಯೆಯಾಗದಂತೆ ನೋಡಿಕೊಂಡರು.

ಕಲಬುರಗಿ: ಒಬ್ಬರು ಸ್ಟೀಲ್‌ ಡಬ್ಬಿ ಬಿಚ್ಚಿ ಸುತ್ತಲಿನವರಿಗೆ ಸಜ್ಜಕ ಹಂಚಿದರು. ಮತ್ತೊಬ್ಬರು ಬುತ್ತಿ ಬಿಚ್ಚಿ ಮೊಸರನ್ನ ಕೊಟ್ಟರು. ಅಲ್ಲಿಂದ ಎರಡು ಹೆಜ್ಜೆ ಮುಂದೆ ಕಾರಿನ ಡಿಕ್ಕಿ ತೆರೆದು ವ್ಯಕ್ತಿಯೊಬ್ಬರು ಬಾಳೆಹಣ್ಣು ಹಂಚುತ್ತಿದ್ದರು. ಅದರ ಎದುರೇ ವಾಹನಗಳಲ್ಲಿ ದೊಡ್ಡ ಬೊಗಾಣಿಗಳನ್ನಿಟ್ಟು ಕೆಲವರು ಪುಲಾವ ಶಿರಾ ವಿತರಿಸುತ್ತಿದ್ದರು. ಪಕ್ಕದಲ್ಲೇ ಹಾಕಿದ್ದ ಟೆಂಟ್‌ಗಳಲ್ಲಿ ನಿಂತಿದ್ದವರು ಪ್ಲೇಟ್‌ ಹಿಡಿದು ಭಕ್ತರಿಗೆ ಉಣಬಡಿಸಲು ತರಹೇವಾರಿ ಭಕ್ಷ್ಯಗಳೊಂದಿಗೆ ಕಾಯುತ್ತಿದ್ದರು... ಈ ಭಾಗದ ಆರಾಧ್ಯ ದೈವ ಶರಣಬಸವೇಶ್ವರರ ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ಮೂರನೇ ಸೋಮವಾರ ಇಂಥ ದೃಶ್ಯಕಂಡು ಬಂತು. ಒಂದೆಡೆ ಶಿರಾ–ಉಪ್ಪಿಟ್ಟು ಮತ್ತೊಂದೆಡೆ ಪುಲಾವ–ಸಾಂಬಾರ್‌ ಅದರ ಪಕ್ಕದಲ್ಲೇ ಗೋದಿ ಹುಗ್ಗಿ ಮಸಾಲೆ ಅನ್ನ–ಸಾರು ಅದರ ಪಕ್ಕ ಶಿರಾ... ಹೀಗೆ ವಿವಿಧ ಸಂಘ–ಸಂಸ್ಥೆಗಳು ಸಾರ್ವಜನಿಕರು ಪೈಪೋಟಿಗೆ ಬಿದ್ದಂತೆ ಭಕ್ತರಿಗೆ ತರಹೇವಾರಿ ಭಕ್ಷ್ಯಗಳನ್ನು ಉಣಬಡಿಸಿ ದಾಸೋಹ ಗುಣ ಮೆರೆದರು. ಅಲ್ಲಲ್ಲಿ ನೀರಿನ ಪ್ಯಾಕೆಟ್‌ಗಳ ವಿತರಣೆಯೂ ಜರುಗಿತು. ಕಣ್ಣಿ‌ ಮಾರ್ಕೆಟ್ ‌ರೈತ ವ್ಯಾಪಾರಿಗಳ ಸಂಘ ಶರಣ ಬಸವೇಶ್ವರರ ತರುಣ ಸಂಘ ನವ ಕಲ್ಯಾಣ ಕಟ್ಟಡ ಕಾರ್ಮಿಕರ‌ ಸಂಘ ಶಿವಭಕ್ತ ತಿಪ್ಪಣ್ಣಗೌಡರು ಸಂಘ ಶಾಹಬಜಾರನ ಭಾವಗಿ ಪಬ್ಲಿಸಿಟಿ ಟೆಂಟ್ ಹೌಸ್ ಸೇರಿದಂತೆ ಹಲವು ಸಂಘ–ಸಂಸ್ಥೆಗಳು ಟೆಂಟ್‌ ಹಾಕಿ ‘ಪ್ರಸಾದ’ ಉಣಬಡಿಸಿದವು. ಭಕ್ತಸಾಗರ: ಶರಣಬಸವೇಶ್ವರರ ದೇವಸ್ಥಾನದಲ್ಲಿ ಶ್ರಾವಣ ಮಾಸದ 3ನೇ ಸೋಮವಾರ ಭಕ್ತಸಾಗರ ಹರಿದು ಬಂತು. ದಿನವಿಡೀ ದೇವಸ್ಥಾನದ ಆವರಣ ಭಕ್ತರಿಂದ ತುಂಬಿ ತುಳುಕುತ್ತಿತ್ತು.  ಸಂಜೆ ಜರುಗಿದ ಪಲ್ಲಕ್ಕಿ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ನಸುಕಿನ ಜಾವದ ಮೊದಲ ಪೂಜೆಯ ಬಳಿಕ ಭಕ್ತರ ದರುಶನಕ್ಕೆ ಅವಕಾಶ ಕಲ್ಪಿಸಲಾಯಿತು. ಹೊತ್ತು ತಿರುಗಿದಂತೆ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ನಗರ ಮಾತ್ರವಲ್ಲದೇ ಜಿಲ್ಲೆಯ ವಿವಿಧ ತಾಲ್ಲೂಕುಗಳು ನೆರೆಯ ಜಿಲ್ಲೆಗಳ ಭಕ್ತರೂ ಭೇಟಿ ನೀಡಿ ಶರಣಬಸವೇಶ್ವರರ ದರುಶನ ಪಡೆದು ‍ಪುನೀತರಾದರು. ಹಲವರು ಬಿಲ್ವಪತ್ರೆ ತೆಂಗಿನಕಾಯಿ ಕರ್ಪೂರ ಪುಷ್ಪಗಳನ್ನು ಅರ್ಪಿಸಿ ಭಕ್ತಿ ಮೆರೆದರು. ಕೆಲವರು ದೀರ್ಘ ದಂಡ ನಮಸ್ಕಾರ ಹಾಕಿ ಭಕ್ತಿ ಅರ್ಪಿಸಿದರು. ತೆಂಗು ಪತ್ರಿ ಪುಷ್ಪಕ್ಕೆ ಬೇಡಿಕೆ: ದೇವಸ್ಥಾನ ಆವರಣದಲ್ಲಿ ಬಿಲ್ವಪತ್ರೆ ತೆಂಗಿನಕಾಯಿ ವಿವಿಧ ಬಗೆಯ ಪುಷ್ಪಗಳ ಮಾರಾಟ ಜೋರಾಗಿತ್ತು. ಭಕ್ತರು ಬಿಲ್ವ ಪತ್ರೆ ಕಾಯಿ–ಕರ್ಪೂರ ಕೊಂಡು ಶರಣಬಸವೇಶ್ವರರ ದರುಶನಕ್ಕೆ ಸಾಲುಗಟ್ಟುತ್ತಿದ್ದ ದೃಶ್ಯ ಕಂಡು ಬಂತು. ಸಂಚಾರ ನಿಯಂತ್ರಣ: ಶರಣಬಸವೇಶ್ವರ ದೇವಸ್ಥಾನಕ್ಕೆ ತೆರಳುವ ಮುಖ್ಯ ಮಾರ್ಗವಾದ ಗೋವಾ ಹೋಟೆಲ್ ಹತ್ತಿರದಿಂದ ಲಾಲಗೇರಿ ಕ್ರಾಸ್‌ವರೆಗೆ ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಎರಡೂ ಬದಿಯಲ್ಲಿ ಬ್ಯಾರಿಕೇಡ್‌ ಇಟ್ಟು ವಾಹನಗಳ ಸಂಚಾರ ತಡೆಯಲಾಗಿತ್ತು. ಪೊಲೀಸರು ಸ್ಥಳದಲ್ಲಿದ್ದು ಸಂಚಾರ ದಟ್ಟಣೆ ನಿಯಂತ್ರಿಸಿ ಭಕ್ತರಿಗೆ ಅನುವು ಮಾಡಿಕೊಟ್ಟರು. ಆರೋಗ್ಯ ಶಿಬಿರ: ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕದಿಂದ ಸಾರ್ವಜನಿಕರ ಆರೋಗ್ಯ‌ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.