ಕಲಬುರಗಿ: ಅಗ್ರ ಶ್ರೇಯಾಂಕದ ಸಿದ್ಧಾಂತ್ ಬಾಂಥಿಯಾ, ಕಬೀರ್ ಹನ್ಸ್, ನಿತಿನ್ ಕುಮಾರ್ ಸಿನ್ಹಾ, ಪಣವ್ ಕಾರ್ತಿಕ್ ಅವರು ಇಲ್ಲಿ ನಡೆಯುತ್ತಿರುವ ಪುರುಷರ ಐಟಿಎಫ್ ಟೆನಿಸ್ ಟೂರ್ನಿಯ ಅರ್ಹತಾ ಎರಡನೇ ಸುತ್ತಿನಲ್ಲಿ ಗೆಲುವು ಸಾಧಿಸುವ ಮೂಲಕ ಮುಖ್ಯ ಸುತ್ತಿಗೆ ಲಗ್ಗೆಯಿಟ್ಟರು.
ಸೋಮವಾರ ನಡೆದ ಅರ್ಹತಾ ಸುತ್ತಿನ ಎರಡನೇ ಪಂದ್ಯದಲ್ಲಿ ಸಿದ್ಧಾಂತ್ ಅವರು ಅಜಯ್ ಮಲಿಕ್ ಅವರ ವಿರುದ್ಧ 6-2, 6-0ರಿಂದ ಸುಲಭದ ಗೆಲುವು ಸಾಧಿಸಿದರು. ಮುಖ್ಯ ಸುತ್ತಿನ ಮೊದಲ ಪಂದ್ಯದಲ್ಲಿ ಸಿದ್ಧಾಂತ್ ಅವರು ಮನೀಶ್ ಸುರೇಶ್ ಕುಮಾರ್ ಅವರನ್ನು ಎದುರಿಸಲಿದ್ದಾರೆ.
ಎರಡನೇ ಶ್ರೇಯಾಂಕದ ಕಬೀರ್ ಹನ್ಸ್ ಅವರು 6–3, 6–1 ರಿಂದ ಶಿವಾಂಕ್ ಭಟ್ನಾಗರ್ ಅವರನ್ನು ಸೋಲಿಸಿ ಮುಖ್ಯಸುತ್ತಿಗೆ ಲಗ್ಗೆಯಿಟ್ಟರು. ಕಬೀರ್ ಮುಖ್ಯ ಸುತ್ತಿನಲ್ಲಿ ಭಾರತದ ಕರಣ್ ಸಿಂಗ್ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಇನ್ನೊಂದರಲ್ಲಿ ಪ್ರಣವ್ ಕಾರ್ತಿಕ್ ಅವರು ಚಿನ್ಮಯ್ ದೇವ್ ಚೌಹಾಣ ವಿರುದ್ಧ 6-2, 6-1 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದರೆ, ನಿತಿನ್ ಕುಮಾರ ಸಿನ್ಹಾ ಅವರು ಯಶ್ ಚೌರಾಸಿಯಾ ವಿರುದ್ಧ 6-3, 6-3 ಅಂತರದಿಂದ ಗೆದ್ದು ಮುಖ್ಯ ಸುತ್ತಿಗೆ ಪ್ರವೇಶಿಸಿದರು. ಇಂಡೊನೇಷ್ಯಾದ ಅಂಥೋನಿ ಸುಸಾಂತೊ ಅವರು ವಿಯೆಟ್ನಾಂನ ಹಾ ಮಿನ್ಹ ಡಕ್ ವು ಅವರನ್ನು 7-5, 6-1 ಅಂತರದಿಂದ ಸೋಲಿಸಿದರು. ಧೀರಜ್ ಕೆ. ಅವರು ಉದಿತ್ ಕಾಂಬೋಜ್ ವಿರುದ್ಧ 6-1, 6-3 ಸೆಟ್‌ಗಳಿಂದ ಸುಲಭ ಜಯಗಳಿಸಿದರು.
ಇಂದಿನಿಂದ ಮುಖ್ಯಸುತ್ತು: ಮಂಗಳವಾರ ಮುಖ್ಯ ಸುತ್ತಿನ ಪಂದ್ಯಗಳು ಆರಂಭವಾಗಲಿವೆ. ಟೂರ್ನಿಯ ಅಗ್ರ ಶ್ರೇಯಾಂಕಿತ ಉಜ್ಬೇಕಿಸ್ತಾನದ ಖುಮೋಯುನ್ ಸುಲ್ತಾನೋವ್, ರಷ್ಯಾದ ಬಾಗ್ದಾನ್ ಬಾಬ್‌ರೋವ್ ಹಾಗೂ ನಾಲ್ಕನೇ ಶ್ರೇಯಾಂಕದ ಭಾರತದ ಕರಣ್ ಸಿಂಗ್ ಹಾಗೂ ಆರ್ಯನ್ ಷಾ ಅವರು ಪ್ರಮುಖ ಆಕರ್ಷಣೆಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.