ADVERTISEMENT

ಕಲಬುರಗಿ: ಎನ್‌ಇಪಿ ಮುಂದುವರಿಸಲು ಒತ್ತಾಯಿಸಿ ಎಬಿವಿಪಿ ಸಹಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2023, 14:34 IST
Last Updated 18 ನವೆಂಬರ್ 2023, 14:34 IST
ಕಲಬುರಗಿಯ ಎನ್.ವಿ. ಕಾಲೇಜಿನಲ್ಲಿ ಎಬಿವಿಪಿ ಕಾರ್ಯಕರ್ತರು ಸಹಿ ಸಂಗ್ರಹ ಅಭಿಯಾನ ನಡೆಸಿದರು
ಕಲಬುರಗಿಯ ಎನ್.ವಿ. ಕಾಲೇಜಿನಲ್ಲಿ ಎಬಿವಿಪಿ ಕಾರ್ಯಕರ್ತರು ಸಹಿ ಸಂಗ್ರಹ ಅಭಿಯಾನ ನಡೆಸಿದರು   

ಕಲಬುರಗಿ: ಕೇಂದ್ರ ಸರ್ಕಾರ ರೂಪಿಸಿದ್ದ, ಹಿಂದಿನ ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕಾಂಗ್ರೆಸ್ ಸರ್ಕಾರ ಮುಂದುವರಿಸಲು ನಿರಾಕರಿಸಿದ್ದನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ನಗರದ ನೂತನ ವಿದ್ಯಾಲಯ ಕಾಲೇಜಿನಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಯಾರದ್ದೋ ಮರ್ಜಿಗೆ ಒಳಗಾಗಿ ಅಥವಾ ಇನ್ಯಾರದೋ ಸ್ವಾರ್ಥ ಸಾಧನೆಗಾಗಿ ಸಿದ್ಧಗೊಂಡ ನೀತಿ ಇದಲ್ಲ. ಈ ನೀತಿ ಸಿದ್ಧಗೊಳಿಸುವ ಸಂದರ್ಭದಲ್ಲಿ 2.5 ಲಕ್ಷ ಗ್ರಾಮಗಳಲ್ಲಿ, 676 ಜಿಲ್ಲೆಗಳಲ್ಲಿ, 36 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಭೆ ನಡೆದು 2 ಲಕ್ಷಕ್ಕೂ ಅಧಿಕ ಸಲಹೆಗಳ ಸ್ವೀಕೃತಿಯೊಂದಿಗೆ ಅಂತಿಮ ರೂಪ ಪಡೆದಿದೆ. ದೇಶದ ಪರಂಪರೆ, ಅಗತ್ಯತೆ, ಆಸಕ್ತಿಗಳ ಹಿನ್ನೆಲೆಯೊಂದಿಗೆ ಮುಂದಿನ 20 ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಾದ ಬದಲಾವಣೆ ಗಮನದಲ್ಲಿಟ್ಟುಕೊಂಡು ದೇಶದ ಶಿಕ್ಷಣಕ್ಕೆ ಒಂದು ದೃಷ್ಟಿ ಹಾಗೂ ಒಂದು ದಿಕ್ಕನ್ನು ನೀಡಬೇಕೆಂಬ ರಾಷ್ಟ್ರೀಯ ಕಾಳಜಿಯೊಂದಿಗೆ ಹೊರಹೊಮ್ಮಿದ ಸಮಗ್ರ ಶಿಕ್ಷಣ ನೀತಿಯಾಗಿದೆ ಎಂದು ಹೇಳಿದರು.

ಹೀಗಾಗಿ, ರಾಜ್ಯ ಸರ್ಕಾರ ಇದನ್ನು ಪ್ರತಿಷ್ಠೆಯ ಅಂಶವನ್ನಾಗಿ ತೆಗೆದುಕೊಳ್ಳದೇ ಎನ್‌ಇಪಿಯನ್ನು ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ರಾಘವೇಂದ್ರ ಎಂ, ಎಬಿವಿಪಿ ರಾಷ್ಟ್ರೀಯ ಉಪಾಧ್ಯಕ್ಷ ಅಲ್ಲಮಪ್ರಭು ಗುಡ್ಡಾ, ನಗರ ಘಟಕದ ಅಧ್ಯಕ್ಷ ಬಸವಂತಗೌಡ ಪಾಟೀಲ, ನಗರ ಉಪಾಧ್ಯಕ್ಷರಾದ ವಿಶ್ವನಾಥ ಹುಲಿ, ಶಿವರಾಜ ಬುಜುರ್ಕೆ, ನವೀನಕುಮಾರ್, ‍ಪ್ರಮೋದ ನಾಗೂರ, ರಾಷ್ಟ್ರೀಯ ಕಾರ್ಯಕಾರಿಣಿನ ಸದಸ್ಯೆ ಭಾಗ್ಯಶ್ರೀ ಬೆಳ್ಳೆ, ಎನ್.ವಿ. ಕಾಲೇಜಿನ ಪ್ರಾಂಶುಪಾಲ ಮಲ್ಲೇಶ್ವರ ಎಂ. ಹಾಗೂ ವಿದ್ಯಾರ್ಥಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.