ADVERTISEMENT

ಗೋಟೂರ: ಹಳೆ ವಿದ್ಯಾರ್ಥಿಗಳ ಸ್ನೇಹೋತ್ಸವ ಇಂದು

‘ನಮ್ಮ ಶಾಲೆ ನನ್ನ ಕೊಡುಗೆ’ ಯೋಜನೆ ಅನುಷ್ಠಾನಕ್ಕೆ ಪಣ

ಗುಂಡಪ್ಪ ಕರೆಮನೋರ
Published 13 ಅಕ್ಟೋಬರ್ 2024, 6:03 IST
Last Updated 13 ಅಕ್ಟೋಬರ್ 2024, 6:03 IST
ಕಾಳಗಿ ತಾಲ್ಲೂಕಿನ ಗೋಟೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ
ಕಾಳಗಿ ತಾಲ್ಲೂಕಿನ ಗೋಟೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ   

ಕಾಳಗಿ: ತಾಲ್ಲೂಕಿನ ಗೋಟೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 600ಕ್ಕೂ ಹೆಚ್ಚು ಹಳೆಯ ವಿದ್ಯಾರ್ಥಿಗಳು ‘ನಮ್ಮ ಶಾಲೆ ನನ್ನ ಕೊಡುಗೆ’ ಎಂಬ ಸರ್ಕಾರಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಹೆಜ್ಜೆ ಇಟ್ಟಿದ್ದು, ತಾವು ಕಲಿತ ಸರ್ಕಾರಿ ಶಾಲೆ ಬಲವರ್ಧನಗೆ ಮುಂದಾಗಿದ್ದಾರೆ.

ಗೋಟೂರ ಗೆಳೆಯರ ಬಳಗವು ಗ್ರಾ.ಪಂ, ಎಸ್‌ಡಿಎಂಸಿ ಸಹಯೋಗದಲ್ಲಿ ಅ. 13ರಂದು ‘ಹಳೆಬೇರು-ಹೊಸ ಚಿಗುರು ಸ್ನೇಹೋತ್ಸವ-2024’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಳ್ಳಿ ಶಾಲೆಯಲ್ಲಿ ಕಲಿತು ಉನ್ನತ ಸ್ಥಾನದಲ್ಲಿರುವ ಹಳೆಯ ವಿದ್ಯಾರ್ಥಿಗಳು ಸಂಭ್ರಮದಲ್ಲಿ ಸಾಕ್ಷಿಯಾಗಲಿದ್ದಾರೆ. ₹ 5 ಲಕ್ಷಕ್ಕೂ ಹೆಚ್ಚು ದೇಣಿಗೆ ಸಂಗ್ರಹಿಸಿರುವ ಹಳೆಯ ವಿದ್ಯಾರ್ಥಿಗಳು ತಮ್ಮೂರಿನ ಶಾಲೆಗೆ ಅಗತ್ಯವಿರುವ ಪರಿಕರಗಳನ್ನು(ಪ್ರಿಂಟರ್, ಡಯಾಸ್, ಮೈಕ್ ಸೆಟ್ ಇತರೆ ಸಾಮಾನು) ಕೊಡಲು ಮುಂದಾಗಿದ್ದಾರೆ.

ಹಳೆಯ ವಿದ್ಯಾರ್ಥಿ ಅಮೃತರಾವ ನಡಗಟ್ಟಿ ಅವರು ಬಯಲು ರಂಗಮಂದಿರ ನಿರ್ಮಾಣಕ್ಕೆ ₹ 1.01 ಲಕ್ಷ ಹಾಗೂ ಶಾಲೆಯ ದ್ವಾರ ನಾಮಫಲಕದ ನಿರ್ಮಾಣಕ್ಕೆ ₹ 21 ಸಾವಿರ ಕಾಣಿಕೆ ನೀಡಿ ಸಾರ್ಥಕತೆ ಮೆರೆದಿದ್ದಾರೆ.

ADVERTISEMENT

ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ಊರಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿವಿಧ ಕ್ಷೇತ್ರದ ಸಾಧಕರಿಗೆ, ಪ್ರಗತಿಪರ ರೈತರಿಗೆ, ಕುಲ ಕಸುಬುದಾರರಿಗೆ ಸನ್ಮಾನಿಸಲು ವೇದಿಕೆ ಸಿದ್ಧಗೊಂಡಿದೆ.

ಸ್ಥಳೀಯ ಸಾಹಿತ್ಯಾಸಕ್ತರಿಂದ ಸಿದ್ಧಗೊಂಡಿರುವ ಹಲವು ಲೇಖನ, ಕವನ, ಕತೆ, ಶಾಸನಗಳ ಸಾರ ಒಳಗೊಂಡಿರುವ ‘ಗೋಟೂರ ವೈಭವ’ ಸ್ಮರಣ ಸಂಚಿಕೆ ಲೋಕಾರ್ಪಣೆಗೊಳ್ಳಲಿದೆ.

ಭಾನುವಾರ ಬೆಳಿಗ್ಗೆ 9ಗಂಟೆಗೆ ಗೋಟೇಶ್ವರ ದೇವಸ್ಥಾನದಿಂದ ನಾಡದೇವಿ ಭಾವಚಿತ್ರದ ಮೆರವಣಿಗೆಯೊಂದಿಗೆ ಆರಂಭವಾಗುವ ಸ್ನೇಹೋತ್ಸವ ಕುಂಭಕಳಶ, ಭರತನಾಟ್ಯ, ಸಾಂಸ್ಕೃತಿಕ ರಸಮಂಜರಿ, ಹಲಗೆ-ಡೊಳ್ಳು, ಭಾಜಾಭಜಂತ್ರಿ, ಲೇಜಿಮ್ ಝೇಂಕಾರ ಒಳಗೊಂಡಿದೆ. ಶಾಲಾ ಆವರಣದ ಭವ್ಯ ವೇದಿಕೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಗ್ರಾಮದ ಹಿತೈಷಿಗಳು, ಸಾಧಕರು ಮಾತ್ರ ಎದ್ದುಕಾಣಲಿದ್ದಾರೆ. ಒಟ್ಟಾರೆ ಈ ದಿನದ ಗೋಟೂರ ಗ್ರಾಮದ ಹಿರಿಯ ವಿದ್ಯಾರ್ಥಿಗಳ ವೈಭವ ಇತರ ಗ್ರಾಮಗಳಿಗೆ ಪ್ರೇರಣೆಯಾಗಲಿದೆ ಎಂದು ಸಂಘಟಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರದಿಂದಲೇ ಶಾಲೆಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಸಾಧ್ಯವಿಲ್ಲ. ನಮ್ಮ ಕೊಡುಗೆಯನ್ನೂ ಯೋಜನೆ ಒಳಗೊಂಡಿದ್ದರಿಂದ ಈ ರೀತಿಯ ಕಾರ್ಯಯೋಜನೆ ರೂಪಿಸಿದ್ದೇವೆ
ಶಿವಕುಮಾರ ಕಮಕನೂರ ಅಧ್ಯಕ್ಷ ಗ್ರಾ.ಪಂ ಗೋಟೂರ
ಗ್ರಾಮದ ಹಿರಿಯರು ಹಿರಿಯ ವಿದ್ಯಾರ್ಥಿಗಳ ಸಲಹೆ ಪಡೆದು ಹಳೆ ವಿದ್ಯಾರ್ಥಿಗಳ ಸಂಘ ರಚಿಸಿದ್ದು ಶಾಲೆ ಅಭಿವೃದ್ಧಿಗೆ ಸಂಘದ ಸೇವೆ ನೀಡಿದ್ದೇವೆ
ವಿಶ್ವನಾಥರೆಡ್ಡಿ ಕಾಮರೆಡ್ಡಿ ಅಧ್ಯಕ್ಷ ಹಳೆ ವಿದ್ಯಾರ್ಥಿಗಳ ಸಂಘ ಗೋಟೂರ
ಎಸ್‌ಡಿಎಂಸಿ ಕರ್ತವ್ಯಗಳ ಸಾಕಾರಕ್ಕೆ ಗ್ರಾಮಸ್ಥರೇ ಕಂಕಣಬದ್ಧರಾಗಿ ನಿಂತಿದ್ದಾರೆ. ಶಾಲೆ ಅಭಿವೃದ್ಧಿ ಹೊಂದುವುದರಲ್ಲಿ ಸಂದೇಹವಿಲ್ಲ
ಬಾಬು ಬುಡನೋರ ಅಧ್ಯಕ್ಷ ಎಸ್‌ಡಿಎಂಸಿ ಗೋಟೂರ ಶಾಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.