ಚಿಂಚೋಳಿ: ತೆಲಂಗಾಣ ಗಡಿಗೆ ಹೊಂದಿಕೊಂಡ ತಾಲ್ಲೂಕಿನ ಮೊಗದಂಪುರ, ಪೋಚಾವರಂ ಗ್ರಾಮಗಳು ಮತ್ತು ಒಂಟಿಚಿಂತಾ ಹಾಗೂ ಒಂಟಿಗುಡ್ಸಿ ತಾಂಡಾಗಳ ಮುಖ್ಯ ಬೀದಿಗಳಲ್ಲಿ ಸೌರ ಬೆಳಕು ಅಳವಡಿಸಲಾಗಿದೆ.
ಕಲಬುರಗಿ ಜಿಲ್ಲೆಯಲ್ಲಿಯೇ ಚಿಂಚೋಳಿ ಮತ್ತು ಜೇವರ್ಗಿತಾಲ್ಲೂಕಿನಲ್ಲಿ ಸೌರ ದೀಪದ ಬೆಳಕಿನ ವ್ಯವಸ್ಥೆ ಮಾಡಲಾಗಿದೆ ತಾಲ್ಲೂಕಿನ ಮೊಗದಂಪುರ ಮತ್ತು ಪೋಚಾವರಂ ಗ್ರಾಮದಲ್ಲಿ ತಲಾ 4 ಕಿಲೊವಾಟ್ ಸಾಮರ್ಥ್ಯದ ಸೌರ್ ವಿದ್ಯುತ್‌ನಿಂದ ಮುಖ್ಯ ಬೀದಿಯಲ್ಲಿ 44 ಬೀದಿ ದೀಪಗಳಿಗಾಗಿ ಕಂಬಗಳನ್ನು ಸ್ಥಾಪಿಸಿ ತಂತಿ ಜೋಡಿಸಲಾಗಿದೆ.
ಕಳೆದ 5 ದಿನಗಳಿಂದ ಎರಡು ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಸೌರದೀಪಗಳು ಉರಿಯುತ್ತಿದ್ದು ಬೆಳಕು ಹರಿದಿದೆ ಎಂದು ಗ್ರಾಮದ ರಮೇಶ ನರಶಿಮ್ಲು ಸವಾರಿ ಮತ್ತು ಪೋಚಾವರಂನ ಶ್ರೀನಿವಾಸ ಪ್ರಜಾವಾಣಿಗೆ ತಿಳಿಸಿದರು.ಇಲ್ಲಿನ ಸಮುದಾಯ ಭವನದ ಕಟ್ಟಡದ ಮೇಲೆ ಸೌರಶಕ್ತಿ ಚಾರ್ಜ್ ಮಾಡಲು ಪೆನಾಲ್ ಅಳವಡಿಸಲಾಗಿದ್ದು ಕಟ್ಟಡದ ಒಳಗಡೆ ಬ್ಯಾಟರಿ ಇಟ್ಟು ಸೌರ ಶಕ್ತಿಯ ಉಪ ಕೇಂದ್ರ ಸ್ಥಾಪಿಸಿದ್ದಾರೆ.ಇಲ್ಲಿಂದಲೇ ಮುಖ್ಯ ಬೀದಿಗಳಲ್ಲಿ ಸ್ಥಾಪಿಸಿದ ಕಂಬಗಳಿಗೆ ಶಕ್ತಿ ಪ್ರವಹಿಸಿ ದೀಪ ಬೆಳಗುವ ವ್ಯವಸ್ಥೆ ಎಂದರು.
ಇದೇ ಪೋಚಾವರಂ ಗ್ರಾಮದಲ್ಲಿ ಕಾಮಗಾರಿ ನಡೆಸಲಾಗಿದೆ. ಜತೆಗೆ ಒಂಟಿಚಿಂತಾ ಹಾಗೂ ಒಂಟಿಗುಡ್ಸಿ ತಾಂಡಾಗಳಲ್ಲಿ ಕೂಡ ಸೌರ ಬೆಳಕಿನ ಕೆಲಸ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.2017–18ನೇ ಸಾಲಿನಲ್ಲಿ ನವಿಕರಿಸಬಹುದಾದ ಇಂಧನ ಮೂಲಗಳ ಯೋಜನೆ ಅಡಿಯಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆಯಿಂದ (ಜಿಲ್ಲಾ ಪಂಚಾಯಿತಿ)ಯಿಂದ ₹25 ಲಕ್ಷ ಅಂದಾಜು ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ ಎಂದು ಇಲಾಖೆಯ ಯೋಜನೆ ನಿರ್ದೇಶಕ ಸೂರ್ಯಕಾಂತ ತಿಳಿಸಿದರು.
ಮೊಗದಂಪುರ 4 ಕಿಲೋವಾಟ್, ಪೋಚಾವರಂದಲ್ಲಿ 4 ಕಿಲೋ ವಾಟ್, ಒಂಟಿಚಿಂತಾ 2 ಕಿಲೋ ವಾಟ್ ಹಾಗೂ ಒಂಟಿಗುಡ್ಸಿಯಲ್ಲಿ 2 ಕಿಲೋವಾಟ್ ಮೂಲಕ ಸೌರ್ ವಿದ್ಯುತ್ ಉತ್ಪಾದನೆಗೆ ಪೆನಲ್ ಕೂಡಿಸಿ ಅದರ ನೆರವಿನಿಂದ ಬೀದಿ ದೀಪಗಳು ಉರಿಯುವಂತೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.