ADVERTISEMENT

ಕಲಬುರ್ಗಿ: ಕೈಗೂಡದ ‘ಸೋಲಾರ್ ಜಿಲ್ಲೆ’ಯ ಕನಸು

ಯಡಿಯೂರಪ್ಪ ಅವರು ಮಂಡಿಸಲಿರುವ ಬಜೆಟ್‌ ಮೇಲೆ ಹೆಚ್ಚಿದ ನಿರೀಕ್ಷೆ

ಗಣೇಶ-ಚಂದನಶಿವ
Published 27 ಫೆಬ್ರುವರಿ 2020, 19:30 IST
Last Updated 27 ಫೆಬ್ರುವರಿ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಲಬುರ್ಗಿ: ‘ಸೋಲಾರ್‌ ಕ್ಲಸ್ಟರ್‌’ ಸ್ಥಾಪಿಸುವ ಮೂಲಕಕಲಬುರ್ಗಿಯನ್ನು ಭಾರತದ ಸೋಲಾರ್ ಜಿಲ್ಲೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂಬ ರಾಜ್ಯ ಸರ್ಕಾರದ ಘೋಷಣೆ ಇನ್ನೂ ಕಾಗದ ಬಿಟ್ಟು ಹೊರಬಂದಿಲ್ಲ. ಈ ಭಾಗ ಅಭಿವೃದ್ಧಿಗೆ ‘ಶಾಪ’ ಎಂದು ಹೇಳಲಾಗುತ್ತಿರುವ ಬಿಸಿಲನ್ನೇ ಸಂಪನ್ಮೂಲವಾಗಿಸಿಕೊಂಡು ಔದ್ಯಮಿಕ ಪ್ರಗತಿ ಮಾಡುವ ಉದ್ದೇಶದ ‘ಸೋಲಾರ್‌ ಪಾರ್ಕ್‌’ ಸ್ಥಾಪನೆಯ ಯೋಜನೆಯೂ ನನೆಗುದಿಗೆ ಬಿದ್ದಿದೆ.

ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಸೋಲಾರ್‌ ಕ್ಲಸ್ಟರ್‌ ಯೋಜನೆ ಘೋಷಿಸಿದ್ದರು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾ.5ರಂದು ಬಜೆಟ್‌ ಮಂಡಿಸಲಿದ್ದು, ಈ ಬಜೆಟ್‌ನಲ್ಲಾದರೂ ಈ ಯೋಜನೆಗಳಿಗೆ ಒತ್ತು ನೀಡಲಾಗುತ್ತಿದೆಯೇ ಎಂದು ಜಿಲ್ಲೆಯ ಜನ ಮತ್ತೊಮ್ಮೆ ಆಸೆಗಣ್ಣಿನಿಂದ ನೋಡುತ್ತಿದ್ದಾರೆ.

ಏನಿದು ಯೋಜನೆ?: ಚೀನಾದೊಂದಿಗೆ ಸ್ಪರ್ಧಿಸುವ (ಕಾಂಪಿಟ್‌ ವಿತ್‌ ಚೈನಾ) ಯೋಜನೆಯಡಿ₹500 ಕೋಟಿ ವೆಚ್ಚದಲ್ಲಿ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸಲಾಗುವುದು ಎಂದು ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿದ್ದರು. ಇದರ ಭಾಗವಾಗಿಸೋಲಾರ್‌ ಉಪಕರಣಗಳ ತಯಾರಿಕೆಯ ಕ್ಲಸ್ಟರ್‌ನ್ನು ಕಲಬುರ್ಗಿ ಜಿಲ್ಲೆಯಲ್ಲಿ ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದರು.

ADVERTISEMENT

ಹೆಚ್ಚು ಬಿಸಿಲು ಇರುವ ಪ್ರದೇಶವಾದ್ದರಿಂದ ಸೌರಶಕ್ತಿ ಉತ್ಪಾದನೆಗೆ ಹೇಳಿ ಮಾಡಿಸಿದ ತಾಣವಿದು. ಮಾನವ ಸಂಪನ್ಮೂಲವೂ ಹೇರಳವಾಗಿರುವುದರಿಂದ ಅವರಿಗೆ ಉದ್ಯೋಗಾವಕಾಶ ಕಲ್ಪಿಸಲು ಅನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ ಕಲಬುರ್ಗಿ ಜಿಲ್ಲೆಯನ್ನು ಈ ಯೋಜನೆಗೆ ಆಯ್ಕೆಮಾಡಿಕೊಳ್ಳಲಾಗಿತ್ತು.

ಸೌರವಿದ್ಯುತ್‍ ಉತ್ಪಾದಿಸಲು ಅಗತ್ಯವಿರುವ ಸೋಲಾರ್ ಪ್ಯಾನಲ್‌ಗಳು, ಇನ್ವರ್ಟರ್‌ಗಳು,ಕೆಪಾಸಿಟರ್‌ಗಳು ಹಾಗೂ ಲುಮಿನೇಟರ್‌ಗಳನ್ನು ಇಲ್ಲಿಯೇ ಉತ್ಪಾದಿಸುವುದು ಈ ಯೋಜನೆಯ ಭಾಗವಾಗಿತ್ತು.ಇದಕ್ಕಾಗಿ ಕೈಗಾರಿಕೋದ್ಯಮಿಗಳು ಮತ್ತು ವಿಷಯ ಪರಿಣತರುಳ್ಳ ತಜ್ಞರ ಸಮಿತಿ ರಚಿಸಲಾಗಿತ್ತು. ಪ್ರತಿ ಕ್ಲಸ್ಟರ್‌ಗೆ ನೋಡಲ್‌ ಅಧಿಕಾರಿ ನೇಮಿಸಿದ್ದಾಗಿ ಹೇಳಲಾಗಿತ್ತು.

ಶಿವಮೊಗ್ಗಕ್ಕೆ ಸ್ಥಳಾಂತರ?
‘ಕಲಬುರ್ಗಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸೋಲಾರ್ ಪ್ಯಾನಲ್ ಹಾಗೂ ಇತರೆ ಬಿಡಿ ಭಾಗಗಳ ತಯಾರಿಕಾ ಕ್ಲಸ್ಟರ್‌ಅನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಲು ಸರ್ಕಾರ ನಿರ್ಧರಿಸಿದೆ’ ಎಂದು ಹೆಸರು ಬಹಿರಂಗ ಪಡಿಸಲು ಒಲ್ಲದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಕಲಬುರ್ಗಿಯಲ್ಲಿ ಸೋಲಾರ್ ಪ್ಯಾನಲ್ ತಯಾರಿಕಾ ಕ್ಲಸ್ಟರ್ ಸ್ಥಾಪನೆಗೆ ಉದ್ದೇಶಿಸಲಾಗಿದ್ದು, ಈ ಪ್ರದೇಶ ಬೆಂಗಳೂರಿನಿಂದ ಸಾಕಷ್ಟು ದೂರದಲ್ಲಿ ಇರುವುದರಿಂದ ಕಂಪನಿಗಳು ಘಟಕಗಳನ್ನು ಸ್ಥಾಪಿಸಲು ಮುಂದೆ ಬರುತ್ತಿಲ್ಲ. ಹಾಗಾಗಿ ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆದು, ಕೊನೆಗೆ ಶಿವಮೊಗ್ಗಕ್ಕೆ ವರ್ಗಾಯಿಸಲು ನಿರ್ಧರಿಸಲಾಗಿದೆ’ ಎಂದು ಅವರು ಹೇಳಿದರು.

ಬಿಸಿಲನ್ನು ಬಂಡಾವಳ ಮಾಡಿಕೊಳ್ಳಲಿ
ಕಲಬುರ್ಗಿಯಲ್ಲಿ ಸೋಲಾರ್‌ ಕ್ಲಸ್ಟರ್‌ ಮತ್ತು ಸೋಲಾರ್‌ ಪಾರ್ಕ್‌ ಮಾಡುವುದಾಗಿ ಸರ್ಕಾರಗಳ ಘೋಷಣೆ ಇನ್ನೂ ಅನುಷ್ಠಾನಗೊಂಡಿಲ್ಲ. ಈ ಭಾಗದಲ್ಲಿಯ ಬಿಸಿಲನ್ನೇ ಬಂಡವಾಳ ಮಾಡಿಕೊಳ್ಳುವ ಈ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸಬೇಕು. ಸೋಲಾರ್‌ ಪಾರ್ಕ್‌ ಸ್ಥಾಪನೆಗೆ ₹500 ಕೋಟಿ ಬಂಡವಾಳ ಹೂಡುತ್ತೇವೆ ಎಂದು ಉದ್ಯಮಿಯೊಬ್ಬರು ಮುಂದೆ ಬಂದಿದ್ದರು. ಮುಂದೇನಾಯಿತು ಎಂಬುದು ಗೊತ್ತಾಗಿಲ್ಲ. ಈಗ ವಿಮಾನ ಸಂಪರ್ಕ ದೊರೆತಿದ್ದು, ಸಾರಿಗೆ ಸಂಪರ್ಕಕ್ಕೆ ತೊಂದರೆ ಇಲ್ಲ. ಸರ್ಕಾರ ಮನಸ್ಸು ಮಾಡಿ ಈ ಜಿಲ್ಲೆಯಲ್ಲಿ ಸೋಲಾರ್‌ ಸಂಬಂಧಿ ಯೋಜನೆಗಳ ಅನುಷ್ಠಾನಕ್ಕೆ ಮುಂದಾಗಬೇಕು.
–ಅಮರನಾಥ ಸಿ.ಪಾಟೀಲ, ಅಧ್ಯಕ್ಷ, ಹೈದರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.