ದೀಪಾವಳಿ ಎಂದರೆ ಹಣತೆಗಳನ್ನು ಬೆಳಗುವ ಸದ್ದು ಇದ್ದೇ ಇರುತ್ತದೆ. ಆದರೆ, ಜೈನ ಧರ್ಮೀಯರು ದೀಪ ಹಚ್ಚದೆಯೇ ಈ ಹಬ್ಬ ಆಚರಿಸುವುದು ಸಂಪ್ರದಾಯ!
ಹೌದು. ಅಹಿಂಸೆಯೇ ಜೈನ ಧರ್ಮದ ಮೂಲ ಆಶಯ. ಪ್ರಪಂಚದ ಜೀವರಾಶಿಗಳಲ್ಲಿ ಸಣ್ಣಸಣ್ಣ ಕ್ರಿಮಿ– ಕೀಟಗಳಿಗೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ಹಿಂಸೆ ಮಾಡಬಾರದು ಎನ್ನುವುದು ಸಿದ್ಧಾಂತ. ದೀಪಾವಳಿಯಲ್ಲಿ ಮನೆತುಂಬ ದೀಪಗಳನ್ನು ಹಚ್ಚಿದರೆ ಅದರ ಆಕರ್ಷಣೆಗೆ ಬರುವ ದೀಪದಹುಳಗಳು ಸುಟ್ಟು ಸಾಯುತ್ತವೆ. ಇದರಿಂದ ಹುಳಗಳಿಗೆ ಹಿಂಸೆ ಮಾಡಿದಂತಾಗುತ್ತದೆ. ಹಾಗಾಗಿ, ಬೆಳಕಿನ ಹಬ್ಬದಲ್ಲಿ ಸಾಲು ದೀಪ ಅಥವಾ ವಿದ್ಯುದ್ದೀಪಾಲಂಕಾರ ಮಾಡುವುದು ಕೂಡ ಜೈನರಲ್ಲಿ ನಿಷಿದ್ಧ.
ಹಬ್ಬಕ್ಕೆ ಬಗೆಬಗೆಯ ಅಡುಗೆ ಮಾಡುವುದು, ಸಿಹಿಖಾದ್ಯ ಸವಿಯುವುದು, ಹೊಸ ಬಟ್ಟೆ ಖರೀದಿಸು ವುದೂ ಸೇರಿದಂತೆ ಎಲ್ಲ ರೀತಿಯ ಪೂಜಾ ವಿಧಾನಗಳೂ ಇವೆ. ಆದರೆ, ದೀಪ ಹಚ್ಚುವುದು ಹಾಗೂ ಪಟಾಕಿ ಸಿಡಿಸುವುದಕ್ಕೆ ಧರ್ಮದಲ್ಲಿ ಅವಕಾಶವಿಲ್ಲ.
ಜೈನರಲ್ಲಿ ಉಪವಾಸ ವ್ರತಕ್ಕೂ ಹೆಚ್ಚು ಪ್ರಾಧಾನ್ಯತೆ ಇದೆ. ಈಚೆಗಷ್ಟೇ ನಾನು ನನ್ನ ಎರಡು ವರ್ಷಗಳ ಉಪವಾಸ ವ್ರತ ಪೂರ್ಣಗೊಳಿಸಿದ್ದೇನೆ. ಒಂದು ದಿನ ಊಟ ಮಾಡಿದರೆ ಅದರ ಮರುದಿನ ಬಿಸಿನೀರು ಮಾತ್ರ ಕುಡುಯುವುದು ಇದರ ಪದ್ಧತಿ. ಹಬ್ಬದ ದಿನವೇ ಉಪವಾಸ ವ್ರತ ಹಿಡಿಯುವವರ ಸಂಖ್ಯೆಯೂ ದಕ್ಷಿಣ ಭಾರತದಲ್ಲಿ ಹೆಚ್ಚಿದೆ.
24ನೇ ತೀರ್ಥಂಕರ ಭಗವಾನ್ ಮಹಾವೀರ ಅವರಿಗೆ ಮೋಕ್ಷ ದೊರೆತ ದಿನವೇ ಜೈನರ ಪಾಲಿಗೆ ದೀಪಾವಳಿ. ಈ ದಿನವನ್ನು ಅವರು ಪಾಡವಾ (ಪಾಡ್ಯಮಿ) ಎಂದು ಆಚರಿಸುತ್ತಾರೆ. ದಿಗಂಬರ ಹಾಗೂ ಶ್ವೇತಾಂಬರ ಪಂಥಗಳಲ್ಲಿಯೂ ಮಹಾವೀರ ತೀರ್ಥಂಕರರ ಮೋಕ್ಷ ದಿನವನ್ನು ಬೆಳಕಿನ ಹಬ್ಬವಾಗಿ ಆಚರಿಸುವುದು ರೂಢಿ.
ಜೈನರಲ್ಲಿ ದೀಪಾವಳಿ ಹೊಸ ವರ್ಷದ ಸ್ವಾತವೂ ಆಗಿದೆ ಎಂಬುದು ಇನ್ನೂ ವಿಶೇಷ. ಹೌದು. ಪಾಶ್ಚಿಮಾತ್ಯರ ಕ್ಯಾಲೆಂಡರ್ ಪ್ರಕಾರ ಜನವರಿ 1ಕ್ಕೆ ಹೊಸ ವರ್ಷ ಆರಂಭವಾಗುತ್ತದೆ. ಹಿಂದೂ ಕ್ಯಾಲೆಂಡರ್‌ನಲ್ಲಿ ಯುಗಾದಿಯೇ ನವ ವಸಂತದ ಮುನ್ನುಡಿ. ಆದರೆ, ಜೈನ ಸಂಪ್ರದಾಯದಲ್ಲಿ ದೀಪವಾಳಿ ಹಬ್ಬ ಮುಗಿದ ಎರಡನೇ ದಿನಕ್ಕೆ ಬರುವ ‘ಪಾಡವಾ’ ಹಬ್ಬವೇ ಹೊಸ ವರ್ಷದ ನಾಂದಿ. ಮಹಾವೀರ ತೀರ್ಥಂಕರರ ಮೋಕ್ಷದ ದಿನವೇ ಅವರಿಗೆ ಹೊಸ ವರ್ಷದ ಬಾಗಿಲು ತೆರೆಯುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.