ಕಲಬುರಗಿ: ಗ್ರಾಮೀಣ ಹಾಗೂ ದೇಶಿ ಕ್ರೀಡೆಗಳಿಗೆ ಉತ್ತೇಜಿಸಲು ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ರೀಡಾ ಅಂಕಣ ನಿರ್ಮಾಣ ಕಾಮಗಾರಿ ತೆವಳುತ್ತಾ ಸಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನರೇಗಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕ್ರೀಡಾ ಅಂಕಣ ನಿರ್ಮಿಸಿ, ಸ್ಥಳೀಯ ಕ್ರೀಡಾಪಟುಗಳಿಗೆ ಅಗತ್ಯ ಸೌಕರ್ಯ ಕಲ್ಪಿಸುವ ಉದ್ದೇಶವಿದೆ.
ನರೇಗಾ ಯೋಜನೆಯಡಿ ಗ್ರಾಮಗಳ ಅವಶ್ಯಕತೆಗೆ ಅನುಗುಣವಾಗಿ ಕಬ್ಬಡ್ಡಿ, ಕೊಕ್ಕೊ, ವಾಲಿಬಾಲ್, ರನ್ನಿಂಗ್ ಟ್ರ್ಯಾಕ್, ಬಾಸ್ಕೆಟ್ ಬಾಲ್ ಸೇರಿ ಇತರೆ ಅಂಕಣಗಳನ್ನು ನಿರ್ಮಿಸಲಾಗುತ್ತದೆ. ನಿರ್ಮಾಣದ ವೆಚ್ಚವನ್ನು ನರೇಗಾ ಯೋಜನೆಯಡಿ ಭರಿಸಲಾಗುತ್ತದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಒಂದರಂತೆ ಕ್ರೀಡಾ ಅಂಕಣಗಳನ್ನು ಆದ್ಯತೆಯ ಮೇರೆಗೆ ಸರ್ಕಾರಿ ಶಾಲೆ, ಕಾಲೇಜು, ವಸತಿ ನಿಲಯಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.
ಕಬ್ಬಡ್ಡಿ ಅಂಕಣಕ್ಕೆ ₹2.60 ಲಕ್ಷ, ಕೊಕ್ಕೊ ಅಂಕಣಕ್ಕೆ ₹3.30 ಲಕ್ಷ, ವಾಲಿಬಾಲ್ ಅಂಕಣಕ್ಕೆ ₹5.10 ಲಕ್ಷ, ಬಾಸ್ಕೆಟ್ ಬಾಲ್ ಅಂಕಣಕ್ಕೆ ₹5.20 ಲಕ್ಷ, ರನ್ನಿಂಗ್ ಟ್ರ್ಯಾಕ್‌ಗೆ ₹5.20 ಲಕ್ಷ ಖರ್ಚು ಮಾಡಬಹುದು.
ಆದರೆ, ಜಿಲ್ಲೆಯಲ್ಲಿ 2021–22 ಮತ್ತು 2022–23ನೇ ಸಾಲಿನಲ್ಲಿ 390 ಕ್ರೀಡಾ ಅಂಕಣಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಈ ಪೈಕಿ 157 ಕ್ರೀಡಾ ಅಂಕಣಗಳು ಮಾತ್ರವೇ ನಿರ್ಮಾಣ ಆಗಿವೆ. 92 ಕ್ರೀಡಾ ಅಂಕಣಗಳು ನಿರ್ಮಾಣ ಹಂತದಲ್ಲಿವೆ. ಸ್ಥಳದ ಅಭಾವ, ಕಾಂಪೌಂಡ್ ಇಲ್ಲದಿರುವುದು, ಗುರುತಿಸಲಾದ ಪ್ರದೇಶದಲ್ಲಿನ ಗಿಡ–ಗಂಟಿಗಳ ಆವೃತ, ಪಂಚಾಯಿತಿಗಳ ನಿರ್ಲಕ್ಷ್ಯ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಮನ್ವಯತೆಯ ಕೊರತೆಯಂತಹ ಕಾರಣಗಳಿಂದ 233 ಕ್ರೀಡಾ ಅಂಕಣಗಳ ಕಾಮಗಾರಿ ನನೆಗುದಿಗೆ ಬಿದ್ದಿದೆ.
ಅಫಜಲಪುರ ತಾಲ್ಲೂಕಿಗೆ ಅತ್ಯಧಿಕ, ಅಂದರೆ 109 ಕ್ರೀಡಾ ಅಂಕಣಗಳು ಮಂಜೂರಾಗಿದ್ದು, 18 ಅಂಕಣಗಳ ಕಾಮಗಾರಿ ಮುಗಿದಿದೆ. 5 ಅಂಕಣಗಳು ಪ್ರಗತಿಯಲ್ಲಿದ್ದು, 86 ಕ್ರೀಡಾ ಅಂಕಣ ಬಾಕಿ ಇವೆ. ಜೇವರ್ಗಿಗೆ ಮಂಜೂರಾದ 57 ಕ್ರೀಡಾಂಕಣಗಳಲ್ಲಿ 24 ಪೂರ್ಣಗೊಂಡಿವೆ. 14 ಪ್ರಗತಿಯಲ್ಲಿದ್ದು, 19 ಅಂಕಣಗಳು ಬಾಕಿ ಉಳಿದಿವೆ. ಶಹಾಬಾದ್‌ಗೆ ಕೇವಲ 3 ಕ್ರೀಡಾಂಕಣಗಳು ಮಂಜೂರಾಗಿದ್ದು, ಒಂದು ಪೂರ್ಣಗೊಂಡು ಒಂದು ಪ್ರಗತಿಯಲ್ಲಿದೆ.
‘ಗ್ರಾಮದ ಸುತ್ತಲಿನ ಖಾಲಿ ಜಾಗಗಳಲ್ಲಿ ನಿವೇಶನ, ಮನೆಗಳು ತಲೆ ಎತ್ತುತ್ತಿವೆ. ಶಾಲಾ, ಕಾಲೇಜುಗಳ ಆವರಣದಲ್ಲಿ ಅನಗತ್ಯ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಕ್ರೀಡಾಪಟುಗಳಿಗೆ ಆಟವಾಡಲು ಜಾಗ ಇಲ್ಲದಂತೆ ಆಗಿದೆ’ ಎನ್ನುತ್ತಾರೆ ಕ್ರೀಡಾಪಟು ವೀರೇಶ ಮಠಪತಿ.
ಜೇವರ್ಗಿ ತಾಲ್ಲೂಕಿನ ನರಿಬೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕ್ರೀಡಾ ಅಂಕಣ ಕಾಮಗಾರಿ ಪ್ರಗತಿಯಲ್ಲಿದೆ. ಸೊನ್ನ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಮೈದಾನ ನಿರ್ಮಿಸಲಾಗಿದೆ ಎಂದು ಗ್ರಾಮದ ನಿವಾಸಿಗಳಾದ ವೀರೇಶ ಪಾಟೀಲ ನರಿಬೋಳ, ಮಲ್ಲಿಕಾರ್ಜುನ ಬಿರಾದರ್ ತಿಳಿಸಿದರು.
ಕಾಳಗಿ ತಾಲ್ಲೂಕಿನ ಗೋಟೂರ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಬಾಸ್ಕೆಟ್‌ಬಾಲ್ ಕ್ರೀಡಾ ಅಂಕಣ ನಿರ್ಮಿಸಲಾಗಿದೆ.
ಚಿಂಚೋಳಿ ಎಚ್. ಸರ್ಕಾರಿ ಪ್ರೌಢ ಶಾಲೆ ಮೈದಾನದಲ್ಲಿ ಕೆಂಪು ಮಣ್ಣು ಹಾಕಿ ಮಕ್ಕಳ ಕ್ರೀಡೆಗೆ ಅವಕಾಶ ಕಲ್ಪಿಸಲಾಗಿದೆ’ ಎನ್ನುತ್ತಾರೆ ತಾಲ್ಲೂಕು ನರೇಗಾ ಯೋಜನೆಯ ವಿಷಯ ನಿರ್ವಾಹಕ ಗಿರೀಶ್ ಕಲಶೆಟ್ಟಿ.
ಜಿಲ್ಲಾ ನರೇಗಾ ಅಧಿಕಾರಿಗಳು ನೀಡಿದ ಮಾಹಿತಿ ಅನ್ವಯ ಕಮಲಾಪುರ ತಾಲ್ಲೂಕಿನಲ್ಲಿ 2021–22ರಲ್ಲಿ 4 ಕ್ರೀಡಾಂಕಣ ನಿರ್ಮಿಸಲಾಗಿದೆ. 2022–23ರಲ್ಲಿ 10 ಕ್ರೀಡಾಂಕಣಕ್ಕೆ ಮಂಜೂರಾತಿ ಸಿಕ್ಕಿದ್ದು, 6 ಪೂರ್ಣಗೊಂಡು ನಾಲ್ಕು ಪ್ರಗತಿಯ ಹಂತದಲ್ಲಿವೆ. ಆದರೆ, ಉದ್ಯೋಗ ಖಾತ್ರಿ ಸಹಾಯಕ ನಿರ್ದೇಶಕ ಮಲ್ಲಿನಾಥ ಅವರು ‘ಕಮಲಾಪುರ ತಾಲ್ಲೂಕಿನಲ್ಲಿ ಯಾವುದೇ ಕ್ರೀಡಾ ಅಂಕಣ ನಿರ್ಮಾಣ ಕಾರ್ಯ ಆರಂಭಗೊಂಡಿಲ್ಲ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.
‘ಕ್ರೀಡಾಂಗಣ ಅಭಿವೃದ್ಧಿಗೆ ಮಾರ್ಗದರ್ಶನ’
‘ನರೇಗಾದಲ್ಲಿ ಕ್ರೀಡಾ ಅಂಕಣ ನಿರ್ಮಾಣ ಸಂಬಂಧ ಎಲ್ಲ ಗ್ರಾಮ ಪಂಚಾಯಿತಿಗಳಿಂದ ಮಾಹಿತಿ ಪಡೆಯಲಾಗಿದೆ. ಪಂಚಾಯಿತಿ ಹಂತದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಮಾಡಿಕೊಳ್ಳುವಂತೆ ಮಾರ್ಗದರ್ಶನ ಕೊಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ್ ಬದೋಲೆ ‘ಪ್ರಜಾವಾಣಿ’ಗೆ ತಿಳಿಸಿದರು.
‘ಅಮೃತ ಗ್ರಾಮ ಪಂಚಾಯಿತಿ ಯೋಜನೆ ಅಡಿ ಆಯ್ಕೆಯಾದ ಪ್ರತಿ ಗ್ರಾಮ ಪಂಚಾಯಿತಿಯ ಶಾಲೆಯಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬೇಕು ಎಂಬುದು ಕಡ್ಡಾಯವಾಗಿದೆ. ಈ ಯೋಜನೆಯಡಿ ಎರಡು ಹಂತದಲ್ಲಿ 62 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’ ಎಂದರು.
‘ನರೇಗಾ’ ವರದಾನ
ಆಳಂದ: ತಾಲ್ಲೂಕಿನ 34 ಸರ್ಕಾರಿ ಶಾಲೆಗಳಲ್ಲಿ ಆಟದ ಮೈದಾನ ನಿರ್ಮಾಣಕ್ಕೆ ನರೇಗಾ ಯೋಜನೆ ವರದಾನವಾಗಿದೆ.
ಪಡಸಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹8 ಲಕ್ಷದಲ್ಲಿ ನಿರ್ಮಿಸಲಾದ ಬಾಸ್ಕೆಟ್‌ಬಾಲ್ ಅಂಕಣ ಜಿಲ್ಲೆಗೆ ಮಾದರಿಯಾಗಿದೆ. ಬಾಸ್ಕೆಟ್ ಬಾಲ್ ಅಂಕಣಕ್ಕೆ ₹4.80 ಲಕ್ಷ ಖರ್ಚಾಗಿದ್ದು, ₹3.20 ಲಕ್ಷದಲ್ಲಿ ವಾಲಿಬಾಲ್, ಕಬ್ಬಡ್ಡಿ ಅಂಕಣ ನಿರ್ಮಿಸಲಾಗುತ್ತಿದೆ.
‘ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಆಟದ ಮೈದಾನ ನಿರ್ಮಾಣಕ್ಕೆ ಕ್ರೀಯಾಯೋಜನೆ ರೂಪಿಸಲಾಗಿದೆ. 34 ಶಾಲೆಗಳಲ್ಲಿ ಆಟದ ಮೈದಾನ ನಿರ್ಮಾಣ ಪ್ರಗತಿಯಲ್ಲಿದ್ದು, ಮಾ.15ರ ಒಳಗೆ ಪೂರ್ಣವಾಗಲಿದೆ’ ಎಂದು ತಾ.ಪಂ ಇಒ ವಿಲಾಸಕುಮಾರ ಪ್ರಸನ್ನ ತಿಳಿಸಿದರು.
‘ಕೆಲವು ಗ್ರಾಮ ಪಂಚಾಯಿತಿಗಳು ಕ್ರೀಡಾ ಅಂಕಣ ನೆಪದಲ್ಲಿ ಶಾಲಾ ಆವರಣದಲ್ಲಿ ಮಣ್ಣು ಹಾಕಿ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿವೆ. ಹಲವು ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ’ ಎನ್ನುತ್ತಾರೆ ಖಜೂರಿಯ ಗಂಗಾಧರ ಕುಂಬಾರ.
ವಿದ್ಯಾರ್ಥಿಗಳಿಗೆ ಅನುಕೂಲ
ಸೇಡಂ: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 35ಕ್ಕೂ ಅಧಿಕ ಗ್ರಾಮಗಳಲ್ಲಿ ವಿದ್ಯಾರ್ಥಿಗಳಿಗಾಗಿ ಆಟದ ಮೈದಾನ ನಿರ್ಮಿಸಲಾಗಿದೆ.
ತಾಲ್ಲೂಕಿನ ಇಟಕಾಲ್, ತೆಲ್ಕೂರ, ಆಡಕಿ, ಮುಧೋಳ ಸೇರಿ ಹಲವೆಡೆ ಕೊಕ್ಕೊ, ಕಬ್ಬಡ್ಡಿ ಮತ್ತು ವಾಲಿಬಾಲ್ ಮೈದಾನ ನಿರ್ಮಿಸಲಾಗಿದೆ. 30ಕ್ಕೂ ಅಧಿಕ ಮೈದಾನಗಳು ಬಳಕೆ ಆಗುತ್ತಿವೆ.
‘ಹಲವು ಶಾಲೆಗಳಲ್ಲಿ ಆಟದ ಮೈದಾನ ಇರದ ಕಾರಣ ವಿದ್ಯಾರ್ಥಿಗಳು ಕ್ರೀಡೆಗಳಿಂದ ದೂರ ಉಳಿಯುತ್ತಿದ್ದರು. ಕ್ರೀಡಾ ಅಂಕಣಗಳ ನಿರ್ಮಾಣದಿಂದ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಆಸಕ್ತಿಯಿಂದ ತೊಡಗಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಲ್ಲಿ ಮೈದಾನ ನಿರ್ಮಿಸಲು ಯೋಜನೆ ಹಾಕಿಕೊಳ್ಳಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇ.ಒ ಶಂಕರ ರಾಠೋಡ ‘ಪ್ರಜಾವಾಣಿ’ಗೆ ತಿಳಿಸಿದರು.
ಅಮೃತ ಗ್ರಾಮ ಯೋಜನೆಯಡಿ ಕ್ರೀಡಾ ಅಂಕಣ
ಚಿತ್ತಾಪುರ: ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ತಾಲ್ಲೂಕು ಪಂಚಾಯಿತಿಯಿಂದ ವಿವಿಧ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಕ್ರೀಡಾ ಅಂಕಣ ನಿರ್ಮಿಸಲಾಗಿದೆ.
‘ಉದ್ಯೋಗ ಖಾತರಿ ಯೋಜನೆಯಡಿ ಕ್ರಿಯಾ ಯೋಜನೆ ರೂಪಿಸಿ, ಅಮೃತ ಗ್ರಾಮ ಪಂಚಾಯಿತಿ ಫೇಸ್-1 ಮತ್ತು ಫೇಸ್-2 ಅಡಿಯಲ್ಲಿ ತಲಾ ಮೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಆರು ಸರ್ಕಾರಿ ಶಾಲೆಗಳಲ್ಲಿ ಕ್ರೀಡಾ ಅಂಕಣ ನಿರ್ಮಿಸಲಾಗಿದೆ’ ಎಂದು ತಾ.ಪಂ ಇಒ ನೀಲಗಂಗಾ ಬಬಲಾದ ತಿಳಿಸಿದರು.
‘ಗುಂಡಗುರ್ತಿ, ಭಾಗೋಡಿ, ಕಮರವಾಡಿ, ಮೊಗಲಾ, ಕೊಲ್ಲೂರು, ಕಡಬೂರ ಸೇರಿ ಇತರೆ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಶಾಲೆಗಳಲ್ಲಿ ಕಬಡ್ಡಿ, ಕೊಕ್ಕೊ, ವಾಲಿಬಾಲ್ ಮೈದಾನ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕಡಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಶಾಲಾ ಕಟ್ಟಡಗಳಿಗೆ ರಕ್ಷಣಾ ಗೋಡೆ ಇರುವ ಶಾಲೆಗಳನ್ನು ಅಯ್ಕೆ ಮಾಡಲಾಗಿದೆ’ ಎಂದರು.
ಶಹಾಬಾದ್: ಒಂದು ಕ್ರೀಡಾಂಕಣ ನಿರ್ಮಾಣ
ಶಹಾಬಾದ್: ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕ್ರೀಡಾಪಟುಗಳು ಇದ್ದರೂ ಅಗತ್ಯವಾದಷ್ಟು ಕ್ರೀಡಾಂಗಣವಿಲ್ಲ. ಇದಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಾರಣ ಎನ್ನುತ್ತಾರೆ ಕ್ರೀಡಾಪಟುಗಳು.
ಭಂಕೂರ, ಹೊನಗುಂಟಾ, ಮರತೂರ ಮತ್ತು ತೊನಸನಹಳ್ಳಿ ಗ್ರಾಮ ಪಂಚಾಯಿತಿಗಳಿವೆ. ಈ ಪೈಕಿ ಮೂರು ಗ್ರಾ.ಪಂ.ಗಳಿಗೆ ಮಾತ್ರ ಕ್ರೀಡಾ ಅಂಕಣ ಮಂಜೂರಾಗಿದೆ. ಅದರಲ್ಲಿ ಭಂಕೂರು ಗ್ರಾ.ಪಂ ವ್ಯಾಪ್ತಿಯಲ್ಲಿ ಅಂಕಣ ಪೂರ್ಣಗೊಂಡಿದೆ. ಉಳಿದ ಗ್ರಾಮಗಳಲ್ಲಿ ಶೀಘ್ರವೇ ಕ್ರೀಡಾಂಕಣ ಮಂಜೂರು ಮಾಡುವ ಬೇಡಿಕೆ ಕೇಳಿಬರುತ್ತಿದೆ.
ನಗರ ಸಭೆ ವ್ಯಾಪ್ತಿಯಲ್ಲಿ ಆದರೂ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಬೇಕು ಎಂಬ ಒತ್ತಾಯವೂ ಕೇಳಿಬರುತ್ತಿದೆ.
ಅಫಜಲಪುರ: ₹30 ಲಕ್ಷ ವೆಚ್ಚ
ಅಫಜಲಪುರ; ಅಮೃತ ಗ್ರಾಮ ಪಂಚಾಯಿತಿ ಅನುದಾನದಲ್ಲಿ ಆರು ಗ್ರಾಮ ಪಂಚಾಯತಿಗಳಲ್ಲಿ ₹30 ಲಕ್ಷ ವೆಚ್ಚದಲ್ಲಿ ಆಟದ ಮೈದಾನ ನಿರ್ಮಿಸಲಾಗಿದೆ.
ಗ್ರಾಮ ಪಂಚಾಯತಿಯವರು ಕೆಲವು ಶಾಲಾ ಕಾಲೇಜುಗಳಲ್ಲಿ ಆಟದ ಮೈದಾನಕ್ಕೆ ನರೇಗ ಯೋಜನೆಯಲ್ಲಿ ಅನುದಾನ ನೀಡಿದ್ದಾರೆ. ಪ್ರತಿ ಗ್ರಾಮ ಪಂಚಾಯತಿ ಕೇಂದ್ರ ಸ್ಥಾನದಲ್ಲಿ ಪ್ರತ್ಯೇಕವಾಗಿ ಆಟದ ಮೈದಾನಕ್ಕೆ ನಿವೇಶನ ನೀಡಬೇಕು ಎನ್ನುತ್ತಾರೆ ಕ್ರೀಡಾಪಟು ಧಾನು ಪತಾಟೆ.
ಪಟ್ಟಣದ ಆಟದ ಮೈದಾನಕ್ಕೆ ಸುಮಾರು ₹6 ಕೋಟಿ ಖರ್ಚಾಗಿದ್ದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸಂಬಂಧಪಟ್ಟ ಇಲಾಖೆ ಕ್ರಮತೆಗೆದುಕೊಂಡು ಬಾಕಿ ಉಳಿದ ಕೆಲಸಗಳನ್ನು ಮುಗಿಸಬೇಕು. ಕ್ರೀಡಾಸಕ್ತರ ಸಂಖ್ಯೆ ಹೆಚ್ಚಾಗುತ್ತಿದೆ, ಅವರಿಗೆ ಸರಿಯಾದ ಮೈದಾನ ಕಲ್ಪಿಸಬೇಕು ಎನ್ನುತ್ತಾರೆ ದೈಹಿಕ ಶಿಕ್ಷಣ ಶಿಕ್ಷಕರಾದ ಹನುಮಂತ ಕೋರವಾರ, ರಾಜಕುಮಾರ್ ಗೌರ.
*ಕ್ರೀಡಾ ಅಂಕಣ ನಿರ್ಮಾಣಕ್ಕೆ ಸರ್ವೆ ನಂಬರ್ ಸಮೇತ ತಾಲ್ಲೂಕು ಪಂಚಾಯಿತಿಗೆ 7 ತಿಂಗಳ ಹಿಂದೆಯೇ ಮಾಹಿತಿ ಕೊಡಲಾಯಿತು. ಈಗ ಯಾವ ಹಂತದಲ್ಲಿ ಇದೆ ಎಂಬುದು ಗೊತ್ತಿಲ್ಲ
-ಕಲ್ಲಪ್ಪ ಕುಂಬಾರ, ನಾಲವಾರ ಗ್ರಾಮ ಪಂಚಾಯಿತಿ ಪಿಡಿಒ
*ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜಾಗ ಇಲ್ಲದ ಕಾರಣ ಅಮೃತ ಗ್ರಾಮ ಪಂಚಾಯಿತಿ ಯೋಜನೆಯಡಿ ಶಾಲೆಗಳಲ್ಲಿ ಮೈದಾನ ನಿರ್ಮಾಣ ಮಾಡಲಾಗಿದೆ
-ಅಳಿರಾಯ ದೇಸಾಯಿ, ಅರಳುಗುಂಡಿಗೆ, ಪಿಡಿಒ
*ಸೌಲಭ್ಯಗಳ ಕೊರತೆಯಿಂದ ಕೊಕ್ಕೊ, ಕಬ್ಬಡ್ಡಿ ಆಡುವವರ ಆಸಕ್ತಿ ಕಡಿಮೆ ಆಗುತ್ತಿದೆ. ಕ್ರೀಡೆಗೆ ಅನುದಾನ ಕೇಳಿದರೆ ಅನುಕಂಪದ ಮೇಲೆ ಕೊಡುವುದಾಗಿ ಪಂಚಾಯಿತಿ ಅಧಿಕಾರಿಗಳು ಹೇಳುತ್ತಾರೆ
-ಸಾಯಬಣ್ಣ ಸೂಗುರು, ಕ್ರೀಡಾಪಟು
*ಶಾಲೆಯಲ್ಲಿ ವಿದ್ಯಾರ್ಥಿಗಳ ಆಟಕ್ಕೆ ಸೂಕ್ತ ಮೈದಾನವಿರಲಿಲ್ಲ. ಗ್ರಾಮ ಪಂಚಾಯಿತಿ ಕ್ರೀಡಾಂಗಣ ನಿರ್ಮಿಸಿಕೊಟ್ಟಿದ್ದರಿಂದ ವಿದ್ಯಾರ್ಥಿಗಳ ಕ್ರೀಡಾ ಚಟುವಟಿಕೆಗಳಿಗೆ ಅನುಕೂಲವಾಗಿದೆ
-ಮನು ಭತಗುಣಕಿ, ಮುಖ್ಯಶಿಕ್ಷಕ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಯಡ್ಡಳ್ಳಿ
*ಅಮೃತ ಪಂಚಾಯಿತಿ ಯೋಜನೆ ಅಡಿಯಲ್ಲಿ ನಿರ್ಮಾಣವಾದ ಕ್ರೀಡಾಂಗಣಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಂಬಂಧಪಟ್ಟ ಗ್ರಾಮ ಪಂಚಾಯತಿಗಳ ಅವುಗಳ ನಿರ್ವಹಣೆ ಮಾಡಬೇಕು
-ರಮೇಶ ಪಾಟೀಲ, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ, ಅಫಜಲಪುರ
*ಪಡಸಾವಳಿಯಲ್ಲಿ ಕ್ರೀಡಾ ಅಂಕಣ ನಿರ್ಮಾಣದ ಬಳಿಕ ಮಕ್ಕಳಲ್ಲಿ ಕ್ರೀಡಾ ಉತ್ಸಾಹ ಹೆಚ್ಚಾಗಿದೆ. ಗ್ರಾಮಸ್ಥರ ಸಮನ್ವಯವೂ ಶಾಲಾ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ
-ಬಸವರಾಜ ದೊಡ್ಡಮನಿ, ಕ್ಷೇತ್ರ ಸಮನ್ವಯಾಧಿಕಾರಿ ಆಳಂದ
ಜಿಲ್ಲೆಯ ಕ್ರೀಡಾ ಅಂಕಣಗಳ ಅಂಕಿಅಂಶ
2021–22; 2022–23; ಒಟ್ಟು
ಅನುಮೋದನೆ 179; 211; 390
ಪ್ರಗತಿ; 28; 64; 92
ನಿರ್ಮಾಣ; 77; 80; 157
ಬಾಕಿ; 74; 67; 233
ಖರ್ಚು; ₹1.16 ಕೋಟಿ; ₹1.20 ಕೋಟಿ; ₹2.36 ಕೋಟಿ
ಮೈದಾನಗಳ ಅಂಕಿಅಂಶ
119; ಕಬ್ಬಡ್ಡಿ ಮೈದಾನ
109; ಕೊಕ್ಕೊ ಮೈದಾನ
100; ವಾಲಿಬಾಲ್ ಮೈದಾನ
2; ಬಾಸ್ಕೆಟ್‌ಬಾಲ್ ಮೈದಾನ
5; ರನ್ನಿಂಗ್ ಟ್ರ್ಯಾಕ್
ಪೂರಕ ಮಾಹಿತಿ: ಮಲ್ಲಿಕಾರ್ಜುನ ಎಂ.ಎಚ್., ಅವಿನಾಶ ಬೋರಂಚಿ, ರಘುವೀರ್ ಸಿಂಗ್, ಸಂಜಯ ಪಾಟೀಲ, ಶಿವಾನಂದ ಹಸರಗುಂಡಗಿ ಮತ್ತು ತೀರ್ಥಕುಮಾರ ಬೆಳಕೋಟಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.