ಕಲಬುರಗಿ: ‘ವಿಶ್ವಕರ್ಮ ಸಮಾಜದ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿಯಾಗಲು ಸಮಾಜದಿಂದ ಸಂಘಟಿತ ಹೋರಾಟ ಮಾಡಿ ಎಸ್‌ಟಿ ಪಟ್ಟಿಗೆ ಸೇರ್ಪಡೆಗೆ ಒತ್ತಡ ಹಾಕುವುದು ಅತ್ಯಗತ್ಯವಾಗಿದೆ’ ಎಂದು ವಿಶ್ವಕರ್ಮ ಮೂರುಝಾವದೀಶ್ವರ ಮಠದ ಪ್ರಣವನಿರಂಜನ ಸ್ವಾಮೀಜಿ ಹೇಳಿದರು.
ನಗರದ ಡಾ.ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಶ್ವಕರ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಸಮಾಜದ ಜನರು ಆಧುನಿಕತೆಯ ಭರಾಟೆಯಲ್ಲಿ ಆಚಾರ–ವಿಚಾರಗಳನ್ನು ಮರೆಯುತ್ತಿದ್ದಾರೆ. ನಾವು ಸಂಸ್ಕಾರವನ್ನು ಕಲಿತು, ರಕ್ಷಣೆ ಮಾಡಬೇಕು. ಮಕ್ಕಳು ಸಂಸ್ಕಾರ ಮರೆಯುತ್ತಿದ್ದಾರೆ. ಪಾಲಕರು ಮಕ್ಕಳಿಗೆ ಸಂಸ್ಕಾರವನ್ನು ಕಲಿಸಿಕೊಡಬೇಕು’ ಎಂದು ಹೇಳಿದರು.
ಸಮಾಜದ ಮುಖಂಡ ನರಸಿಂಹರಾಜ ಮಾತನಾಡಿ, ‘ವಿಶ್ವಕರ್ಮ ಜಯಂತಿ ಕಾರ್ಯಕ್ರಮಕ್ಕೆ ಯಾವ ಸಚಿವ-ಶಾಸಕರು ಹಾಗೂ ಅಧಿಕಾರಿಗಳು ಬಂದಿಲ್ಲ. ನಮ್ಮ ಸಮಾಜದ ಸಮಸ್ಯೆಗಳನ್ನು ಯಾರ ಮುಂದೆ ಹೇಳಿಕೊಳ್ಳಬೇಕು ಅನ್ನುವುದು ಗೊತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಿತ್ತಾಪುರದ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೈಲಾಸಪತಿ ಎಂ. ವಿಶ್ವಕರ್ಮ ಅವರು ವಿಶ್ವಕರ್ಮರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಸುಲೇಪೇಟದ ವಿಶ್ವಕರ್ಮ ಏಕದಂಡಗಿ ಮಠದ ದೊಡ್ಡೇಂದ್ರ ಸ್ವಾಮೀಜಿ, ವಿಶ್ವಕರ್ಮ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ರಾಮಚಂದ್ರ ವಿಶ್ವಕರ್ಮ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಕಮಲಾಕರ ವಿಶ್ವಕರ್ಮ ಅರಣಕಲ್, ಯುವ ಘಟಕದ ಅಧ್ಯಕ್ಷ ಮಾರುತಿ ಕಮ್ಮಾರ, ಅಶೋಕ ಪೊದ್ದಾರ ಹರಸೂರು, ಶಿವಾನಂದ ಕಲ್ಲೂರು, ಮನೋಹರ ಪೊದ್ದಾರ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.